ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿರುವಂತಹ ಅನಾಮಿಕ ವ್ಯಕ್ತಿಯನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೃಷ್ಟಿಸಿರುತ್ತದೆ. ಈ ಘಟನೆಯನ್ನು ರಾಜಕೀಯಗೊಳಿಸಲು ಬಿಜೆಪಿ 'ಧರ್ಮಸ್ಥಳ ಚಲೋ' ಹೋರಾಟ ಹಮ್ಮಿಕೊಂಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆರೋಪ ಮಾಡಿದ್ದಾರೆ.

ಬೀದರ್ (ಆ.16): ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿರುವಂತಹ ಅನಾಮಿಕ ವ್ಯಕ್ತಿಯನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೃಷ್ಟಿಸಿರುತ್ತದೆ. ಈ ಘಟನೆಯನ್ನು ರಾಜಕೀಯಗೊಳಿಸಲು ಬಿಜೆಪಿ 'ಧರ್ಮಸ್ಥಳ ಚಲೋ' ಹೋರಾಟ ಹಮ್ಮಿಕೊಂಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆರೋಪ ಮಾಡಿದ್ದಾರೆ.

ಬೀದರ್‌ನಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ (Dharmasthala Case) ನಡೆದ ಘಟನೆಯನ್ನು ರಾಜಕೀಯಗೊಳಿಸಲು ಬಿಜೆಪಿ 'ಧರ್ಮಸ್ಥಳ ಚಲೋ' ಹೋರಾಟ ಹಮ್ಮಿಕೊಂಡಿದೆ. ಈ ಘಟನೆಗೆ ರಾಜಕೀಯ ಬಣ್ಣ ಬಳಿಯುವ ಉದ್ದೇಶ ಕಾಂಗ್ರೆಸ್‌ಗಿಲ್ಲ, ಆದರೆ ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಇಂತಹ ರಾಜಕೀಯ ಮಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಭಕ್ತಿ ಮತ್ತು ನಂಬಿಕೆಯಿದೆ. ದೇಶದ ಎಲ್ಲಾ ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಮತ್ತು ಬೌದ್ಧ ವಿಹಾರಗಳು ಸೇರಿದಂತೆ ಎಲ್ಲ ಸಮುದಾಯಗಳ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ ಎಂದು ಹೇಳಿದರು.

ನಮ್ಮ ದೇಶದಲ್ಲಿರುವ ಎಲ್ಲ ಗಿರಿಜಾ ಘರ್, ಬೌದ್ಧ ಧರ್ಮ ಮತ್ತು ಇಸ್ಲಾಂ ಸಮುದಾಯಗಳ ಕ್ಷೇತ್ರಗಳನ್ನೂ ಸಹ ಅವರ ನಂಬಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಅಲ್ಲದೆ, ತಮಗೆ ಧರ್ಮಸ್ಥಳ ಮತ್ತು ಮಂಜುನಾಥ ಸ್ವಾಮಿಯ ಮೇಲೆ ಅಪಾರ ನಂಬಿಕೆಯಿದ್ದು, ಹಲವು ಬಾರಿ ಅಲ್ಲಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದೇನೆ. ಕಾಂಗ್ರೆಸ್‌ನಿಂದ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಶ್ನೆಯೇ ಇಲ್ಲ ಎಂದು ಖಂಡ್ರೆ ಹೇಳಿದರು.

ಧರ್ಮಸ್ಥಳ ಘಟನೆ ಕುರಿತು ದೂರು ಬಂದಿರುವುದನ್ನು ಗಮನಿಸಿ, ಅದರ ಸತ್ಯಾಸತ್ಯತೆ ಆಧಾರದ ಮೇಲೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಯಾರ ಮೇಲೂ ಕಳಂಕ ತರುವ ಉದ್ದೇಶ ನಮಗಿಲ್ಲ. ಆದರೆ, ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿರುವಂತಹ ಅನಾಮಿಕ ವ್ಯಕ್ತಿಗಳನ್ನು ಭಾರತೀಯ ಜನತಾ ಪಾರ್ಟಿಯಿಂದ ಸೃಷ್ಟಿಸಿರುತ್ತದೆ. ನಂತರ ಅವರ ವಿರುದ್ಧ ತನಿಖೆಗೆ ಆಗ್ರಹಿಸಿ, ಬಳಿಕ ತನಿಖೆ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ'ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವು ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಲಿದೆ. ಕಾಂಗ್ರೆಸ್ ಪಕ್ಷ ಜನಪರ ಕಾರ್ಯಕ್ರಮಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತ ನೀಡುತ್ತಿದೆ. ಬಿಜೆಪಿಗೆ ಯಾವುದೇ ಕೆಲಸವಿಲ್ಲದ ಕಾರಣ, ಹೊಟ್ಟೆಕಿಚ್ಚಿನಿಂದ ಇಂತಹ ರಾಜಕೀಯ ಕೃತ್ಯಗಳನ್ನು ಮಾಡುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ಬಿಜೆಪಿಯನ್ನು ಟೀಕಿಸಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ:

ಈ ಬಗ್ಗೆ ಮಾತನಾಡಿದ ಚಲುವಾದಿ ನಾರಾಯಣಸ್ವಾಮಿ ಅವರು, ಧರ್ಮಸ್ಥಳದಲ್ಲಿ ಶವ ಹೂತಿರುವುದನ್ನು ಹುಡುಕುತ್ತೇವೆಂದು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ ಶೋಧ ಕಾರ್ಯ ಮಾಡಿದೆ. ಆದರೆ, ಅಲ್ಲಿ ಏನೂ ಸಿಗದ ಕಾರಣ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೇಳುತ್ತಿದ್ದಾರೆ. ಅವರ ಸಹೋದರ ಡಿ.ಕೆ ಸುರೇಶ್ ಧರ್ಮಸ್ಥಳ ಧಾರ್ಮಿಕ ಭಾವನೆಗಳ ಕ್ಷೇತ್ರ, ಈ ರೀತಿಯ ಘಟನೆ ಆಗಬಾರದಾಗಿತ್ತು ಎಂದು ಹೇಳುತ್ತಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಎಡಪಂಥೀಯರ ಒತ್ತಡದ ಹಿನ್ನೆಲೆಯಲ್ಲಿ ನಾವು ಎಸ್‍ಐಟಿಯನ್ನು ರಚಿಸಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಒಟ್ಟಾರೆ ಧರ್ಮಸ್ಥಳದ ಮೇಲೆ ಕಾಂಗ್ರೆಸ್ ಷಡ್ಯಂತ್ರ ಮಾಡಿದರೂ ಏನೂ ಸಿಗದ ಕಾರಣ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿ, ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.