ಸೌಜನ್ಯ ತಾಯಿ ಕುಸುಮಾವತಿ ಬೆಳ್ತಂಗಡಿಯ ಎಸ್ ಐ ಟಿ ಕಚೇರಿಗೆ ಆಗಮಿಸಿ ಚಿನ್ನಯ್ಯ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ. ಚಿನ್ನಯ್ಯ ಸೌಜನ್ಯ ಶವವನ್ನು ನೋಡಿದ್ದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಮಹತ್ವದ ಬೆಳವಣಿಗೆಯೊಂದರಲ್ಲಿ ಮೃತ ಸೌಜನ್ಯ ತಾಯಿ ಕುಸುಮಾವತಿ ಬೆಳ್ತಂಗಡಿಯ ಎಸ್ ಐ ಟಿ ಕಚೇರಿಗೆ ಆಗಮಿಸಿದ್ದು, ಈ ಪ್ರಕರಣದಲ್ಲಿ ಭಾರೀ ಕುತೂಹಲ ಹೆಚ್ಚಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಬಗ್ಗೆ ಆರೋಪಿಸಿದ ಚಿನ್ನಯ್ಯ ವಿರುದ್ದ ಸೌಜನ್ಯ ತಾಯಿ ದೂರು ನೀಡುವ ಸಾಧ್ಯತೆ ಇದೆ. ಆರೋಪಿ ಚಿನ್ನಯ್ಯ ಈಗಾಗಲೇ ಎಸ್ ಐ ಟಿ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಯೂಟ್ಯೂಬ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸೌಜನ್ಯ ಶವ ತೆಗೆದುಕೊಂಡು ಹೋಗುವಾಗ ನೋಡಿದ್ದೇನೆ ಎಂದು ಚಿನ್ನಯ್ಯ ಹೇಳಿಕೆ ನೀಡಿದ್ದ, ಈ ಹಿನ್ನೆಲೆಯಲ್ಲಿ ಸೌಜನ್ಯ ಆತ್ಯಾ*ಚಾರ ಮತ್ತು ಕೊಲೆ ಪ್ರಕರಣದಲ್ಲಿ ಚಿನ್ನಯ್ಯ ಸಾಕ್ಷಿ ಎಂದು ದೂರು ನೀಡಲು ಮುಂದಾಗಿರುವ ಕುಸುಮಾವತಿ ಬೆಳ್ತಂಗಡಿಯ ಎಸ್ ಐ ಟಿ ಕಚೇರಿಗೆ ಆಗಮಿಸಿದ್ದಾರೆ. 2012ರಲ್ಲಿ ಕುಸುಮಾವತಿ ಮಗಳು ಸೌಜನ್ಯ ಆತ್ಯಾ*ಚಾರದಲ್ಲಿ ಮೃತಪಟ್ಟಿದ್ದಳು.

ಚಿನ್ನಯ್ಯ ಈಗಾಗಲೇ ಎಸ್‌ಐಟಿ ವಶದಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೊಂದು ನೀಡಿದ ಸಂದರ್ಶನದಲ್ಲಿ ಚಿನ್ನಯ್ಯ, “ಸೌಜನ್ಯ ಶವವನ್ನು ತೆಗೆದುಕೊಂಡು ಹೋಗುವುದನ್ನು ನಾನು ನೋಡಿದ್ದೇನೆ” ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆಯನ್ನು ಆಧಾರವನ್ನಾಗಿಸಿಕೊಂಡು, ಸೌಜನ್ಯ ತಾಯಿ ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸುವ ಮನೋಭಾವ ಹೊಂದಿದ್ದಾರೆ.

ಕುಸುಮಾವತಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಬೋಲೇರೋ ಹಾಗೂ ಸ್ಕಾರ್ಪಿಯೋ ವಾಹನಗಳಲ್ಲಿ ಆಗಮಿಸಿದ್ದರು. ಅವರು ದೂರಿನ ಪ್ರತಿಯನ್ನು ಹಿಡಿದು ಎಸ್‌ಐಟಿ ಕಚೇರಿಗೆ ಬಂದಿದ್ದರೂ, ಅಧಿಕಾರಿಗಳು ಪೂರ್ವಾನುಮತಿ ಇಲ್ಲದೆ ದೂರು ಸ್ವೀಕರಿಸಲು ನಿರಾಕರಿಸಿ, ಸಮಯಾವಕಾಶ ನೀಡಿ ಮರುಬರಲು ಸೂಚಿಸಿದರು.

ಕುಸುಮಾವತಿ ಯಾವುದೇ ಪ್ರತಿಕ್ರಿಯೆಯನ್ನು ಮಾಧ್ಯಮಗಳಿಗೆ ನೀಡದೆ ಅಲ್ಲಿಂದ ತೆರಳಿದರು. ಈ ವೇಳೆ ಎಸ್‌ಐಟಿ ಕಚೇರಿಯ ಸುತ್ತಮುತ್ತ ಭದ್ರತೆ ಹೆಚ್ಚಿಸಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಯಾವುದೇ ಪೂರ್ವ ಮಾಹಿತಿ ನೀಡದೆ ಸೌಜನ್ಯ ಕುಟುಂಬ ಕಚೇರಿಗೆ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಒಳ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಸೌಜನ್ಯ ಕುಟುಂಬ, ಚಿನ್ನಯ್ಯ ನೀಡಿರುವ ಹೇಳಿಕೆ ಹಾಗೂ ಧರ್ಮಸ್ಥಳ ಕುರಿತ ಆಪಾದನೆಗಳನ್ನು ಆಧಾರವನ್ನಾಗಿಸಿಕೊಂಡು, ಅಧಿಕೃತ ದೂರು ಹಾಗೂ ಹೇಳಿಕೆಗಳನ್ನು ಸಲ್ಲಿಸಲು ತೀರ್ಮಾನಿಸಿದೆ. ಆದಾಗ್ಯೂ, ಪೂರ್ವಾನುಮತಿ ಪಡೆದು ದೂರು ಸಲ್ಲಿಸಬೇಕು ಎಂದು ಎಸ್‌ಐಟಿ ಅಧಿಕಾರಿಗಳು ಸ್ಪಷ್ಟ ಸೂಚನೆ ನೀಡಿದ್ದಾರೆ.

ಸೌಜನ್ಯ ಪ್ರಕರಣ ಎಸ್‌ಐಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ರಾಜ್ಯ ಗೃಹ ಸಚಿವರು ಸ್ಪಷ್ಟಪಡಿಸಿದ್ದರು. ಈ ನಡುವೆ, ಎಸ್‌ಐಟಿ ತನಿಖಾ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಕಚೇರಿಯಲ್ಲಿ ಹಾಜರಿರಲಿಲ್ಲ. ಆರೋಪಿ ಚಿನ್ನಯ್ಯ ಮತ್ತು ಸುಜಾತ ಭಟ್ ವಿರುದ್ಧ ವಿಚಾರಣೆ ನಡೆಯುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.