ಧರ್ಮಸ್ಥಳದ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡು ಬಂದ ಅನಾಮಿಕ ರತ್ನಗಿರಿ ಬೆಟ್ಟದಲ್ಲಿ ಗುರುತಿಸಿದ 16ನೇ ಪಾಯಿಂಟ್‌ನಲ್ಲಿ ಬರೋಬ್ಬರಿ 30 ಅಡಿ ಅಗಲ, 10 ಅಡಿ ಆಳಕ್ಕೆ ಗುಂಡಿ ತೋಡಿದ್ದಾರೆ. ಆದರೆ, ಅಲ್ಲಿ ಸಿಕ್ಕಿದ್ದೇನು? ಪ್ರತ್ಯಕ್ಷ ವರದಿ ಮಾಡಿದ ನಮ್ಮ ರಿಪೋರ್ಟರ್ ಕೊಟ್ಟ ಮಾಹಿತಿ ಇಲ್ಲಿದೆ.

ದಕ್ಷಿಣ ಕನ್ನಡ (ಆ.10): ಧರ್ಮಸ್ಥಳದಲ್ಲಿ ಅನಾಮಿಕ ನೂರಾರು ಶವಗಳನ್ನು ಹೂತಿದ್ದೇನೆ ಎಂದು 13 ಪಾಯಿಂಟ್‌ಗಳನ್ನು ಗುರುತಿಸಿದ್ದಾನೆ. ಆದರೆ, 13 ಪಾಯಿಂಟ್ ಅಗೆಯುವುದನ್ನು ಬಿಟ್ಟು 15 ಮತ್ತು 16ನೇ ಗುಂಡಿಯನ್ನು ಅಗೆಯಲಾಗಿದೆ. ಆದರೆ, ರತ್ನಗಿರಿ ಬೆಟ್ಟದಲ್ಲಿ ಗುರುತಿಸಿದ್ದ 16ನೇ ಪಾಯಿಂಟ್‌ನಲ್ಲಿ ಸಿಕ್ಕಿದ್ದೇನು? ಸ್ಥಳದ ಮಾಹಿತಿ ಇಲ್ಲಿದೆ ನೋಡಿ.

ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ಶವ ಹೂತ ಆರೋಪದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಶವಕ್ಕಾಗಿ ತೀವ್ರ ಶೋಧ ನಡೆಸುತ್ತಿದೆ. ಭಾನುವಾರದಂದು ಬೆಟ್ಟದ ಮೇಲೆ 16 ಸ್ಥಳಗಳಲ್ಲಿ ಗುಂಡಿಗಳನ್ನು ತೋಡಲಾಗಿದ್ದರೂ, ಯಾವುದೇ ರೀತಿಯ ಸುಳಿವು ಸಿಗದೇ ಎಸ್ಐಟಿ ಅಧಿಕಾರಿಗಳು ನಿರಾಶೆಗೊಂಡಿದ್ದಾರೆ. ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿರುವ ರತ್ನಗಿರಿ ಬೆಟ್ಟದಲ್ಲಿ, ಈ ಸಮಾಧಿ ರಹಸ್ಯವನ್ನು ಭೇದಿಸಲು ಎಸ್ಐಟಿ ನಿರಂತರ ಪ್ರಯತ್ನ ನಡೆಸುತ್ತಿದೆ. ನಿನ್ನೆ ಹದಿನಾರು ಬೇರೆ ಬೇರೆ ಸ್ಥಳಗಳಲ್ಲಿ ಸುಮಾರು 30 ಅಡಿ ಅಗಲ ಮತ್ತು 10 ಅಡಿ ಆಳದವರೆಗೆ ಗುಂಡಿಗಳನ್ನು ತೋಡಲಾಗಿದೆ. ಆದರೆ, ಬಂಡೆಕಲ್ಲುಗಳು ಮತ್ತು ಮಣ್ಣು ಹೊರತುಪಡಿಸಿ, ಯಾವುದೇ ಅಸ್ಥಿಪಂಜರ ಅಥವಾ ಕುರುಹುಗಳು ಪತ್ತೆಯಾಗಿಲ್ಲ.

ಒಣಗಿದ ಮರದ ಬುಡದ ಬಳಿ ಶೋಧ ಕಾರ್ಯ ನಡೆಸಿದ ಸ್ಥಳದಲ್ಲಿಯೂ ಅಧಿಕಾರಿಗಳಿಗೆ ಯಾವುದೇ ಯಶಸ್ಸು ದೊರಕಿಲ್ಲ. ಭಾರಿ ಬಂಡೆಕಲ್ಲುಗಳನ್ನು ತೆರವುಗೊಳಿಸಿ ಮಣ್ಣನ್ನು ಆಳವಾಗಿ ಅಗೆದರೂ ಶವದ ಸುಳಿವು ಸಿಗದ ಕಾರಣ, ಎಸ್ಐಟಿ ಅಧಿಕಾರಿಗಳು ನಿನ್ನೆಯ ಶೋಧ ಕಾರ್ಯವನ್ನು ಸ್ಥಗಿತಗೊಳಿಸಿ ಹಿಂತಿರುಗಿದ್ದಾರೆ. ಈ ಹಿಂದೆ ಮಸುಕುದಾರಿ ನೀಡಿದ್ದ ಮಾಹಿತಿ ಪ್ರಕಾರ, ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿದ್ದರೂ, ಹದಿನಾರನೇ ಸ್ಥಳದಲ್ಲಿ ಕೂಡ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಭಾನುವಾರದ ವಿರಾಮದ ನಂತರ, ಸೋಮವಾರ ಮತ್ತೆ ಎಸ್ಐಟಿ ತಂಡವು ಬೆಟ್ಟಕ್ಕೆ ಹಿಂತಿರುಗಿ ಶೋಧ ಕಾರ್ಯವನ್ನು ಮುಂದುವರಿಸುವ ಸಾಧ್ಯತೆ ಇದೆ. ಈ ಪ್ರಕರಣದ ರಹಸ್ಯ ಭೇದಿಸಲು ಅಧಿಕಾರಿಗಳ ಪ್ರಯತ್ನ ಮುಂದುವರಿದಿದೆ.

ಧರ್ಮಸ್ಥಳದ ರತ್ನಗಿರಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿರುವ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್.ಐ.ಟಿ) ಭಾನುವಾರ ಕಾರ್ಯಾಚರಣೆಗೆ ವಿರಾಮ ನೀಡಿದೆ. ನಿರಂತರ 11 ದಿನಗಳ ಕಾಲ ತೀವ್ರ ಶೋಧ ನಡೆಸಿದ ಅಧಿಕಾರಿಗಳು, ಇದುವರೆಗೆ ಯಾವುದೇ ಕುರುಹು ಸಿಗದೆ ನಿರಾಶೆಗೊಂಡಿದ್ದಾರೆ. ನಿನ್ನೆ, ಎಸ್ಐಟಿ ತಂಡವು ಒಂದೇ ಸ್ಥಳದಲ್ಲಿ ಸತತ 7 ಗಂಟೆಗಳ ಕಾಲ ಶೋಧ ನಡೆಸಿತ್ತು. ತಂಡದ ಮಾರ್ಗದರ್ಶಕನಾದ ಮುಸುಕುಧಾರಿ ನೀಡಿದ್ದ ಮಾಹಿತಿ ಆಧರಿಸಿ, 'ಪಾಯಿಂಟ್ 16' ಮತ್ತು '16(a)' ಎಂಬ ಎರಡು ನಿರ್ದಿಷ್ಟ ಸ್ಥಳಗಳಲ್ಲಿ ತನಿಖೆ ಕೇಂದ್ರೀಕರಿಸಲಾಗಿತ್ತು. ಈ ಜಾಗಗಳಲ್ಲಿ ಆಳವಾಗಿ ಅಗೆದು ಪರಿಶೀಲಿಸಿದಾಗ, ಮತ್ತೆ ಕಲ್ಲು-ಮಣ್ಣು ಹೊರತುಪಡಿಸಿ ಯಾವುದೇ ಮೃತದೇಹ ಅಥವಾ ಅಸ್ಥಿಪಂಜರದ ಸುಳಿವು ಪತ್ತೆಯಾಗಿಲ್ಲ.

ಕಳೆದ 11 ದಿನಗಳಲ್ಲಿ ಎಸ್ಐಟಿ ತಂಡವು 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಗುಂಡಿಗಳನ್ನು ತೋಡಿ ಪರಿಶೀಲಿಸಿದೆ. ಆದರೆ, ಎಲ್ಲ ಕಡೆಗಳಲ್ಲೂ ಒಂದೇ ರೀತಿಯ ಫಲಿತಾಂಶ ದೊರೆತಿದ್ದು, ಯಾವುದೇ ಮೃತದೇಹದ ಅವಶೇಷಗಳು ಸಿಕ್ಕಿಲ್ಲ. ಇದರಿಂದಾಗಿ ಭಾನುವಾರ ತನಿಖೆಗೆ ವಿರಾಮ ನೀಡಲಾಗಿದೆ. ನಾಳೆ, ಅಂದರೆ ಸೋಮವಾರ, ಮತ್ತೊಂದು ಹೊಸ ಜಾಗದಲ್ಲಿ ಶೋಧ ಕಾರ್ಯವನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣವು ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದು, ಎಸ್ಐಟಿ ತಂಡದ ಮುಂದಿನ ಹೆಜ್ಜೆಗಳ ಮೇಲೆ ಎಲ್ಲರ ಗಮನ ನೆಟ್ಟಿದೆ. ಜೊತೆಗೆ, ಅನಾಮಿಕನ ಮಾಹಿತಿ ನೀಡುವಂತೆ ವಿಪಕ್ಷಗಳಿಂದ ಒತ್ತಡ ಕೇಳಿಬಂದಿದೆ.