ಧರ್ಮಸ್ಥಳ ಪ್ರಕರಣದಲ್ಲಿ ಜಯಂತ್.ಟಿ ತಮ್ಮ ಪಾತ್ರವನ್ನು ನಿರಾಕರಿಸಿದ್ದಾರೆ, ಸುಜಾತ ಭಟ್ ಪ್ರಕರಣವನ್ನು ಸುಳ್ಳು ಎಂದು ಕರೆದಿದ್ದಾರೆ ಮತ್ತು ಚಿನ್ನಯ್ಯನಿಗೆ ಆಶ್ರಯ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಸತ್ಯಕ್ಕಾಗಿ ಹೋರಾಟ ಮಾಡುತ್ತಿರುವುದಾಗಿ ಹೇಳಿ, ಬಂಧನಕ್ಕೆ ಸಿದ್ಧ ಎಂದಿದ್ದಾರೆ.
ದಕ್ಷಿಣ ಕನ್ನಡ (ಆ.25): 'ಧರ್ಮಸ್ಥಳ ಪ್ರಕರಣದಲ್ಲಿ ತನ್ನ ಪಾತ್ರವೇನಿಲ್ಲ. ನಾವು ಧರ್ಮಸ್ಥಳ ಪ್ರಕರಣದ ಸೂತ್ರಧಾರಿಯಲ್ಲ, ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಸುಳ್ಳು ಹೇಳಿದ್ದೇನೆಂದರೆ ನಾನು ಜೈಲಿಗೆ ಹೋಗೋಕೆ ತಯಾರಿದ್ದೇನೆ. ಆದರೆ, ಮಾಸ್ಕ್‌ಮ್ಯಾನ್ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಇದ್ದಿದ್ದು ನಿಜ' ಎಂದು ಜಯಂತ್.ಟಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಯಂತ್, ಈ ಧರ್ಮಸ್ಥಳ ಪ್ರಕರಣದ ಸೂತ್ರಧಾರರು ನಾವಲ್ಲ, ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಸುಜಾತ ಭಟ್ ಪ್ರಕರಣ ಸಂಪೂರ್ಣ ಸುಳ್ಳು. 'ಆರಂಭದಲ್ಲಿ ಅವರನ್ನು ದೆಹಲಿಗೆ ನಾನೇ ಕರೆದುಕೊಂಡು ಹೋಗಿದ್ದೆ. ಮಗಳು ಕಾಣೆಯಾಗಿದ್ದಾಳೆ ಎಂದಾಗ ನಾವು ಬೆಂಬಲ ಕೊಟ್ಟಿದ್ದೇವೆ ಅಷ್ಟೇ. ಆ ಪ್ರಕರಣದ ತನಿಖೆ ಆಗಲಿ ಎಂಬ ಆಗ್ರಹ ನಮ್ಮದಾಗಿತ್ತು. ನಾವು ಸತ್ಯಕ್ಕಾಗಿ ಹೋರಾಟ ಮಾಡಿದ್ದೇವೆಯೇ ಹೊರತು ಯಾವುದೇ ವೈಯಕ್ತಿಕ ಲಾಭಕ್ಕಾಗಿ ಅಲ್ಲ' ಎಂದು ತಿಳಿಸಿದ್ದಾರೆ.
ಚಿನ್ನಯ್ಯ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಸಂಬಂಧ:
ಮಾಸ್ಕ್‌ಮ್ಯಾನ್ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಇದ್ದಿದ್ದು ನಿಜ. ಆದರೆ, ತಾನು ಚಿನ್ನಯ್ಯನ ಜೊತೆ ಯಾವತ್ತೂ ಮಾತನಾಡಿಲ್ಲ. 'ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಕೂಡಲೇ ನಾವು ತಪ್ಪಿತಸ್ಥರಾಗುವುದಿಲ್ಲ. ಅವನ ಪ್ರಕರಣ ಬೇರೆ, ನಾವು ಹೋರಾಟ ಮಾಡುತ್ತಿರುವ ಪ್ರಕರಣ ಬೇರೆ. ನಮ್ಮ ಹೋರಾಟ ಸತ್ಯ ಹೊರಬರಬೇಕು ಎನ್ನುವ ಉದ್ದೇಶದಿಂದ ಮಾತ್ರ' ಎಂದು ಜಯಂತ್ ಸ್ಪಷ್ಟಪಡಿಸಿದರು.
ಸವಾಲು ಮತ್ತು ಬಂಧನದ ಸಿದ್ಧತೆ:
'ನಾನು ಚಿನ್ನಯ್ಯನಿಗೆ ಯಾವುದೇ 'ಬುರುಡೆ' (ಅನಾಟಮಿ ಪ್ರಯೋಗಾಲಯದಿಂದ ಮಾನವನ ಬುರುಡೆ ತಂದು ಕೊಟ್ಟಿದ್ದಾಗಿ ಆರೋಪ) ತಂದು ಕೊಟ್ಟಿಲ್ಲ. ನಾನು ಬುರುಡೆ ತಂದುಕೊಟ್ಟಿದ್ದೇನೆ ಎಂದು ಹೇಳುವವರು ಅಣ್ಣಪ್ಪ ಬೆಟ್ಟಕ್ಕೆ ಬರಲಿ, ಅಲ್ಲಿ ನಾನು ತೆಂಗಿನಕಾಯಿ ಒಡೆಯುತ್ತೇನೆ. ಸವಾಲು ಮಾಡುವವರು ಮುಂದೆ ಬರಲಿ" ಎಂದು ಜಯಂತ್ ನೇರ ಸವಾಲು ಹಾಕಿದ್ದಾರೆ.
ತನ್ನ ಬಂಧನವಾದರೆ ಖುಷಿಯಿಂದ ಜೈಲಿಗೆ ಹೋಗುತ್ತೇನೆ ಎಂದು ಜಯಂತ್ ಹೇಳಿದ್ದಾರೆ. 'ನಾನು ಜೈಲಿಗೆ ಹೋಗೋಕೆ ತಯಾರಿದ್ದೇನೆ, ಜೈಲು ಭಾರತ ದೇಶದಲ್ಲೇ ಇದೆಯಲ್ವಾ? ಜೈಲಿನಿಂದ ಹೊರಬಂದು ಮತ್ತೆ ಹೋರಾಟ ಮಾಡುತ್ತೇನೆ. ನನ್ನ ಅರೆಸ್ಟ್ ಮಾಡಿದ್ರೆ ಖುಷಿಯಿಂದ ಹೋಗುತ್ತೇನೆ. ಎಸ್ಐಟಿ ಕಚೇರಿ ಬಳಿಯೇ ಇದ್ದೇನೆ, ಅವರು ಬಂದು ಅರೆಸ್ಟ್ ಮಾಡಲಿ' ಎಂದು ಸವಾಲು ಎಸೆದಿದ್ದಾರ'. "ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟಿದ್ದಕ್ಕೆ ದಾಖಲೆ ಇದ್ಯಾ?' ಎಂದು ಪ್ರಶ್ನಿಸಿದ್ದಾರೆ.
ಸತ್ಯ ಹೊರಬರುವುದು ತಡವಾಗಬಹುದು, ಆದರೆ ಖಂಡಿತಾ ಸತ್ಯ ಹೊರಗೆ ಬರುತ್ತದೆ ಎಂದು ಜಯಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳು ಚಿನ್ನಯ್ಯ ಪ್ರಕರಣಕ್ಕೆ ಹೊಸ ತಿರುವು ನೀಡಿವೆ.
