ಕಾನೂನು ಅರಿವಿಲ್ಲದೇ ತಪ್ಪು ಮಾಡಿದರೆ ಅದಕ್ಕೆ ತಕ್ಕುದಾದ ಶಿಕ್ಷೆ ಪಡೆಯಲೇ ಬೇಕು ಎಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುವ ಮುನ್ನ ಜಯಂತ್ ಮಾಧ್ಯಮದ ಜೊತೆ ಮಾತನಾಡಿದರು. ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದರೂ ಶಿಕ್ಷೆ ಅನುಭವಿಸಬೇಕು.
ಮಂಗಳೂರು/ ಬೆಳ್ತಂಗಡಿ (ಸೆ.12): ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟೆಣ್ಣವರ್ ಹಾಗೂ ಜಯಂತ್ ಇವರ ವಿಚಾರಣೆ ಗುರುವಾರವೂ ಮುಂದುವರಿದೆ. ಗಿರೀಶ್ ಮಟ್ಟೆಣ್ಣವರ್ ಏಳನೇ ದಿನ ಹಾಗೂ ಜಯಂತ್ ಅವರನ್ನು ಎಂಟನೇ ದಿನ ವಿಚಾರಣೆ ನಡೆಸಲಾಗಿದೆ. ಗುರುವಾರ ಇವರಿಬ್ಬರದೇ ವಿಚಾರಣೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ನಡೆಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಸೌಜನ್ಯ ಮಾವ ವಿಠಲ ಗೌಡ, ಸಹಚರ ಪ್ರದೀಪ್ ಗೌಡ ಇವರು ವಿಚಾರಣೆಗೆ ಹಾಜರಾಗಿಲ್ಲ, ಅವರಿಗೆ ಎಸ್ಐಟಿ ತಾತ್ಕಾಲಿಕ ರಿಲೀಫ್ ನೀಡಿದೆ. ವಿಠಲ ಗೌಡ ಐದು ದಿನ ಹಾಗೂ ಪ್ರದೀಪ್ ಗೌಡರನ್ನು ನಾಲ್ಕು ದಿನಗಳ ಕಾಲ ಎಸ್ಐಟಿ ವಿಚಾರಣೆ ನಡೆಸಿತ್ತು. ಮುಂದಿನ ದಿನಗಳಲ್ಲಿ ನೋಟಿಸ್ ನೀಡಿದರೆ ವಿಚಾರಣೆಗೆ ಹಾಜರಾಗುವಂತೆ ಹೇಳಿಕೆ ದಾಖಲಿಸಿ ಬುಧವಾರ ಇವರನ್ನು ಕಳುಹಿಸಲಾಗಿತ್ತು.
ತಪ್ಪು ಮಾಡಿದರೆ ಶಿಕ್ಷೆಗೆ ಸಿದ್ಧ: ಕಾನೂನು ಅರಿವಿಲ್ಲದೇ ತಪ್ಪು ಮಾಡಿದರೆ ಅದಕ್ಕೆ ತಕ್ಕುದಾದ ಶಿಕ್ಷೆ ಪಡೆಯಲೇ ಬೇಕು ಎಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುವ ಮುನ್ನ ಜಯಂತ್ ಮಾಧ್ಯಮದ ಜೊತೆ ಮಾತನಾಡಿದರು. ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದರೂ ಶಿಕ್ಷೆ ಅನುಭವಿಸಬೇಕು. ನಾನು ತನಿಖೆ ಮುಗಿಸಿ ಹೊರಗೆ ಬರುವಾಗ ಜನ ಹೊಡೆದಿದ್ದಾರಾ ಎಂದು ಹೇಳುತ್ತಿದ್ದಾರೆ. ಆದರೆ ಎಸ್ಐಟಿ ಅಧಿಕಾರಿಗಳು ನಿಯಮ ಪ್ರಕಾರ ತನಿಖೆ ನಡೆಸುತ್ತಿದ್ದಾರೆ. ನನಗೆ ಎಸ್ಐಟಿ ಯವರು ಹೊಡೆದಿಲ್ಲ. ದಾಖಲೆ ಇರಿಸಿಕೊಂಡು ಅವರು ತನಿಖೆ ನಡೆಸುತ್ತಿದ್ದಾರೆ. ಎಸ್ಐಟಿಯವರ ಮುಂದೆ ಯಾವುದೇ ಸುಳ್ಳು ಹೇಳುವುದಕ್ಕೆ ಆಗುವುದಿಲ್ಲ. ಯಾರು ತನಿಖೆ ನಡೆಸಿದರೂ ಸತ್ಯವನ್ನೇ ಹೇಳಿ. ನನ್ನ ಮೂರು ಮೊಬೈಲ್ ಎಸ್ಐಟಿ ಯವರಿಗೆ ಒಪ್ಪಿಸಿದ್ದೇನೆ. ಎಫ್ಎಸ್ಎಲ್‌ಗೆ ಅದನ್ನು ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಈ ಪ್ರಕರಣ ಸಂಬಂಧಿಸಿ ಏನಾದರೂ ಇದ್ದರೆ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ ಎಂದರು.
ಮುಂದಿನ ವಾರ ಎಫ್‌ಎಸ್‌ಎಲ್ ವರದಿ?
ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ ಮುಂದಿನ ವಾರ ಕೋರ್ಟ್‌ಗೆ ಸಲ್ಲಿಕೆಯಾಗುವ ಸಾಧ್ಯತೆ ಹೇಳಲಾಗಿದೆ. ಸುಮಾರು 120ಕ್ಕೂ ಹೆಚ್ಚು ಸ್ಯಾಂಪಲ್ ಕಲೆ ಹಾಕಿದ್ದ ಎಸ್‌ಐಟಿ, 17 ಸ್ಥಳಗಳಲ್ಲಿ ಸೋಕೋ ತಂಡ ಸ್ಯಾಂಪಲ್ ಕಲೆ ಹಾಕಿತ್ತು. ಸುಮಾರು 70ಕ್ಕೂ ಹೆಚ್ಚು ಮಣ್ಣಿನ ಸ್ಯಾಂಪಲ್ ಸಂಗ್ರಹಿಸಿತ್ತು. ಮಾಸ್ಕ್ ಮ್ಯಾನ್ ತೋರಿಸಿದ ಎಲ್ಲ ಜಾಗದಲ್ಲೂ ಅಗೆದ ಬಳಿಕ ಕೆಲವು ಕಡೆ ಸಿಕ್ಕಿದ ಮೂಳೆಗಳು, ಬಟ್ಟೆ, ಬುರುಡೆ ಪೀಸ್ ಸೇರಿದಂತೆ ಅನುಮಾನಾಸ್ಪದ ವಸ್ತುಗಳನ್ನು ಎಸ್‌ಐಟಿ ತಂಡ ಸಂಗ್ರಹಿಸಿತ್ತು. ಕೆಂಪು ಮಣ್ಣಿನಿಂದಾಗಿ ಮೂಳೆಗಳು ಕರಗಿದ ಅನುಮಾನ ವ್ಯಕ್ತವಾಗಿದ್ದು, ಮೂಳೆ ಕರಗಿದೆಯಾ ಎಂದು ತಿಳಿಯಲು ಸ್ಯಾಂಪಲ್ ಸಂಗ್ರಹಿಸಿತ್ತು. ಮಣ್ಣಿನ ಸ್ಯಾಂಪಲ್‌ನಲ್ಲಿ ಡಿಎನ್‌ಎ ಸಿಕ್ಕಿದರೆ ಹೊಸ ತಿರುವು ಸಿಗಲಿದೆ. ಒಂದು ವೇಳೆ ಡಿಎನ್‌ಎ ಸಿಗದೇ ಇದ್ದರೆ ಬುರುಡೆ ಗ್ಯಾಂಗ್‌ಗೆ ಸಂಕಷ್ಟ ಎದುರಾಗಲಿದೆ. ಅಲ್ಲದೆ ಷಡ್ಯಂತರದ ಬಗ್ಗೆ ಸರಣಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈಗಾಲೇ ಬುರುಡೆ ಗ್ಯಾಂಗ್‌ಗೆ ಎಸ್‌ಐಟಿ ಡ್ರಿಲ್ ಮಾಡುತ್ತಿದೆ. ಹಲವರ ಸರಣಿ ವಿಚಾರಣೆಯನ್ನೂ ನಡೆಸಲಾಗಿದೆ. ಸದ್ಯ ಎಫ್‌ಎಲ್‌ಎಸ್ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ನಿಧಾನಗತಿಗೆ ತಿರುಗಿದ ಎಸ್‌ಐಟಿ ತನಿಖೆ?
ಬುರುಡೆ ಕೇಸಿನ ಆರೋಪಿ ಚೆನ್ನಯ್ಯನ ನ್ಯಾಯಾಂಗ ಬಂಧನದ ಬಳಿಕ ಎಸ್‌ಐಟಿ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ನಾಗರಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿವೆ. ಕೇವಲ ನೋಟೀಸ್ ಹಾಗೂ ವಿಚಾರಣೆಗೆ ಮಾತ್ರ ಎಸ್‌ಐಟಿ ತನಿಖೆ ಸೀಮಿತವಾಗಿದೆ. ಬುರುಡೆ ರಹಸ್ಯದ ಷಡ್ಯಂತರವನ್ನು ಎಸ್‌ಐಟಿ ಅಧಿಕಾರಿಗಳು ಬೇಧಿಸಿದ್ದು, ಪ್ರಕರಣದ ಸೂತ್ರಧಾರರನ್ನೂ ಪತ್ತೆ ಹಚ್ಚಿದ್ದಾರೆ. ಬುರುಡೆ ತಂದ ಜಾಗವನ್ನೂ ವಿಠಲ ಗೌಡ ತೋರಿಸಿದ್ದಾರೆ. ವಿಠಲ ಗೌಡ ಬುರುಡೆ ತಂದ ಜಾಗದಲ್ಲಿ ಎರಡು ಬಾರಿ ಮಹಜರ್ ಕೂಡ ನಡೆಸಲಾಗಿದೆ. ಅಲ್ಲದೆ ಈ ಷಡ್ಯಂತ್ರರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವುದನ್ನು ಸಾಕ್ಷಿ ಸಮೇತ ಎಸ್‌ಐಟಿ ಪತ್ತೆಹಚ್ಚಿದರೂ ಆರೋಪಿಗಳ ಬಂಧನಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಆರೋಪಕ್ಕೆ ಒಳಗಾದವರನ್ನು ಬಂಧಿಸದಂತೆ ಎಸ್‌ಐಟಿ ಅಧಿಕಾರಿಗಳ ಕೈಯನ್ನು ಯಾರೋ ಪ್ರಭಾವಿಗಳು ಕಟ್ಟಿಹಾಕಿದ್ದಾರೆಯೇ? ಪ್ರಕರಣದ ತನಿಖೆಯ ಹಳ್ಳಹಿಡಿಸಲು ಕಾಣದ ಕೈಗಳು ಯತ್ನಿಸುತ್ತಿದೆಯೇ? ಇತ್ಯಾದಿ ಸಂಶಯಕ್ಕೆ ಕಾರಣವಾಗಿದೆ. ಎಲ್ಲ ಸಾಕ್ಷಾಧಾರ, ವಿಡಿಯೋ ರೆಕಾರ್ಡಿಂಗ್ ಹೇಳಿಕೆಗಳನ್ನು ಎಸ್‌ಐಟಿ ಅಧಿಕಾರಿಗಳು ಸಂಗ್ರಹಿಸಿಕೊಂಡಿದ್ದಾರೆ. ಆರೋಪಕ್ಕೆ ಒಳಗಾದವರ ಬಂಧನ ಪ್ರಕ್ರಿಯೆ ಆರಂಭಿಸಲು ಎಸ್‌ಐಟಿ ಮುಖ್ಯಸ್ಥರ ಸೂಚನೆಗೆ ಅಧಿಕಾರಿಗಳು ಕಾಯುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
