ಧರ್ಮಸ್ಥಳ ಪ್ರಕರಣದಲ್ಲಿ ಯೂಟ್ಯೂಬರ್ ಚಂದನ್ ಗೌಡ ಬುರುಡೆ ಗ್ಯಾಂಗ್‌ನಿಂದ ಹಣ ಪಡೆದಿದ್ದಾನೆ ಎಂದು ಸುಮಂತ್ ಹೇಳಿದ್ದನು. ಆದರೆ, ಇದೀಗ ಚಂದನ್‌ರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಸುಮಂತ್ ಹೇಳಿರುವ ಆಡಿಯೋ ಒಂದು ವೈರಲ್ ಆಗಿದ್ದು, ಇದೀಗ ಧರ್ಮಸ್ಥಳದ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಬೆಂಗಳೂರು (ಸೆ.10): ಧರ್ಮಸ್ಥಳದ ವಿರುದ್ಧ 'ನೂರಾರು ಶವಗಳನ್ನು ಹೂತಿಟ್ಟಿರುವ' ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬುರುಡೆ ಗ್ಯಾಂಗ್‌ನಲ್ಲಿ ಯೂಟೂಬರ್ ಚಂದನ್‌ಗೌಡನೂ ಷಡ್ಯಂತ್ರದ ವಿಡಿಯೋ ಹರಿಬಿಟ್ಟಿದ್ದಾನೆ. ಇದಕ್ಕಾಗಿ ಹಣ ಪಡೆದುಕೊಂಡಿದ್ದಾನೆ ಎಂದು ಹೇಳಿದ್ದ ಮಂಡ್ಯದ ಸುಮಂತ್, ಪುಂಗಿ ಬಿಟ್ಟಿದ್ದಾನೆ ಎಂಬ ಆಡಿಯೋ ವೈರಲ್ ಆಗಿದೆ. ಈ ಆಡಿಯೋ ವೈರಲ್ ಆದ ನಂತರ ಧರ್ಮಸ್ಥಳದ ಕುರಿತಾಗಿ ಸುಳ್ಳು ಹೇಳುವುದರಲ್ಲಿ ಅಜ್ಜಿ ಸುಜಾತಾ ಭಟ್‌ನನ್ನೇ ಸುಮಂತ್ ಮೀರಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿರುವ ಬುರುಡೆ ಗ್ಯಾಂಗ್‌ನ ಸದಸ್ಯರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಯೂಟೂಬರ್ ಸಮೀರ್ ಎಂ.ಡಿ. ಜೊತೆಗೆ ಚಂದನ್‌ಗೌಡನೂ ಸೇರಿಕೊಂಡಿದ್ದಾರೆ. ಚಂದನ್‌ಗೌಡನ ಯೂಟೂಬ್ ಚಾನೆಲ್‌ಗೆ ಬುರುಡೆ ಗ್ಯಾಂಗ್‌ನಿಂದ ಫಂಡಿಂಗ್ ಮಾಡಲಾಗಿದೆ. ಈ ಬಗ್ಗೆ ನಾನು ಎಲ್ಲಿ ಬೇಕಾದರೂ, ಯಾವ ತನಿಖೆಯಲ್ಲಿ ಬೇಕಾದರೂ ಹೇಳುತ್ತೇನೆ ಎಂದು ಮಂಡ್ಯ ಜಿಲ್ಲೆ ಮದ್ದೂರಿನ ಯುವಕ ಸುಮಂತ್ ಹೇಳಿದ್ದನು. ಇದರ ಬೆನ್ನಲ್ಲಿಯೇ ಇದೀಗ ಯೂಟ್ಯೂಬರ್ ಚಂದನ್ ಗೌಡ ಅವರನ್ನು ಉದ್ದೇಶಪೂರ್ವಕವಾಗಿ ಈ ಷಡ್ಯಂತ್ರಕ್ಕೆ ಸಿಲುಕಿಸಲಾಗಿದೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಈ ಷಡ್ಯಂತ್ರದ ಹಿಂದೆ ತಾನಿರುವುದಾಗಿ ಸುಮಂತ್ ತನ್ನ ಸ್ನೇಹಿತನೊಂದಿಗೆ ಮಾತನಾಡಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಧರ್ಮಸ್ಥಳ ಕೇಸಲ್ಲಿ ನಾನೇ ಸಿಕ್ಕಿಹಾಕಿಸಿದೆ:

ವೈರಲ್ ಆಗಿರುವ ಆಡಿಯೋದಲ್ಲಿ, ಸುಮಂತ್ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಾ, 'ತಾನು ಮತ್ತು ಇತರರು ಸೇರಿ ಚಂದನ್ ಗೌಡ ವಿರುದ್ಧ ಹೇಗೆ ಷಡ್ಯಂತ್ರ ರೂಪಿಸಿದ್ದೇವೆ ಎಂದು ಬಹಿರಂಗಪಡಿಸಿದ್ದಾನೆ. ಚಂದನ್ ಗೌಡ ಧರ್ಮಸ್ಥಳ ಪ್ರಕರಣದ ಆರೋಪಿತರ ಪಟ್ಟಿಯಲ್ಲಿ ಇರಲೇ ಇಲ್ಲ. ಆದರೆ ತಾನೇ ಬೇಕು ಎಂದು ಅವನ ಹೆಸರನ್ನು ಸೇರಿಸಿ ಸಿಕ್ಕಿಹಾಕಿಸಿದ್ದಾಗಿ ಸುಮಂತ್ ಹೇಳಿಕೊಂಡಿದ್ದಾನೆ. ಅಲ್ಲದೆ, 'ಚಂದನ್ ಬೇಕು ಅಂತಲೇ ಹಣ ಪಡೆದಿದ್ದಾನೆ, ಹಾಗಾಗಿ ನಾವು ಅವನನ್ನು ಸುಲಭವಾಗಿ ಸಿಕ್ಕಿಹಾಕಿಸಿದೆವು. ಮುಂದಿನ 15 ದಿನಗಳಲ್ಲಿ ಅವನನ್ನು ಬೀದಿಗೆ ತರುತ್ತೇವೆ' ಎಂದು ಸಂತೋಷದಿಂದ ಹೇಳಿಕೊಂಡಿರುವುದು ಈ ಆಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: 40ಕ್ಕೂ ಹೆಚ್ಚು ಯೂಟ್ಯೂಬರ್‌ಗಳು, 500 ಟ್ರೋಲ್‌ ಪೇಜ್‌ಗಳ ಷಡ್ಯಂತ್ರ ಬಯಲು

ಸುಮಂತ್ ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ತೊಪ್ಪನಹಳ್ಳಿ ನಿವಾಸಿಯಾಗಿದ್ದಾನೆ. ತಾನು ಮಾಡಿದ ಷಡ್ಯಂತ್ರದ ಬಗ್ಗೆ ಸ್ನೇಹಿತನೊಂದಿಗೆ ಮಾತನಾಡುವಾಗ ಲೀಕ್ ಆಗಿರುವ ಈ ಆಡಿಯೋ, ಪ್ರಕರಣದ ಹಿಂದಿರುವ ಕಾಣದ ಕೈಗಳ ಬಗ್ಗೆ ಅನುಮಾನ ಮೂಡಿಸಿದೆ. ಕೆಲವೇ ದಿನಗಳ ಹಿಂದೆ, ಚಂದನ್ ಗೌಡ ವಿರುದ್ಧ 'ನೂರಾರು ಶವಗಳ' ವಿಡಿಯೋ ಮಾಡಲು ಹಣ ಪಡೆದಿದ್ದಾಗಿ ಸುಮಂತ್ ಆರೋಪ ಮಾಡಿದ್ದ. ಆದರೆ, ಈಗ ಈ ಆಡಿಯೋದಿಂದಲೇ ಆತನ ಮಾತುಗಳು ಸುಳ್ಳು ಎಂದು ಸಾಬೀತಾಗಿದೆ.

ಈ ಆಡಿಯೋ ಲೀಕ್ ಆದ ನಂತರ, ಸುಮಂತ್‌ನ ಈ ಕೃತ್ಯದ ಹಿಂದೆ ಯಾರು ಇದ್ದಾರೆ ಎಂಬ ಪ್ರಶ್ನೆಗಳು ಎದುರಾಗಿವೆ. ತನ್ನ ಆಟದ ಬಗ್ಗೆ ಆಡಿಯೋದಲ್ಲಿ ಸಂಭ್ರಮಿಸಿದ್ದ ಸುಮಂತ್, ಬೇರೆಯವರ ಮಾತು ಕೇಳಿ ಬಲಿಯಾದನಾ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಹೊಸ ಬೆಳವಣಿಗೆಯಿಂದ ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ದೊಡ್ಡ ತಿರುವು ದೊರೆತಂತಾಗಿದೆ. ಎಸ್‌ಐಟಿ ಪೊಲೀಸರು ಈ ಆಡಿಯೋ ಕುರಿತು ತನಿಖೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸಲ್ಲಿ ರೋಚಕ ತಿರುವು, ಸೌಜನ್ಯ ಮಾವ ವಿಠಲ್ ಗೌಡಗೆ ಬಂಗ್ಲೆಗುಡ್ಡೆ ಹತ್ತಿಸಿದ ಎಸ್‌ಐಟಿ!