ಧರ್ಮಸ್ಥಳದಲ್ಲಿ ತಮ್ಮ ಮಗಳು ಅನನ್ಯಳನ್ನು ಕಳೆದುಕೊಂಡ ಸುಜಾತಾ ಭಟ್ ಅವರ ನೋವಿನ ಕಥೆ. ವೀರೇಂದ್ರ ಹೆಗ್ಗಡೆ ಮತ್ತು ಹರ್ಷೇಂದ್ರ ಕುಮಾರ್ ವಿರುದ್ಧದ ಆರೋಪಗಳು ಮತ್ತು ನ್ಯಾಯಕ್ಕಾಗಿ ಅವರ ಹೋರಾಟ. ಸುಜಾತಾ ಭಟ್ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಏನೇನು ಉಲ್ಲೇಖ ಮಾಡಿದ್ದಾರೆ? ಯಾರಾರ ಹೆಸರಿದೆ ಒಮ್ಮೆ ನೋಡಿ…

ಬೆಂಗಳೂರು (ಆ.13): ರಾಜ್ಯದ ಪವಿತ್ರ ಧಾರ್ಮಿಕ ಕ್ಷೇತ್ರವಾದಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ವ್ಯಕ್ತಿ ದೂರು ನೀಡಿರುವ ಪ್ರಕರಣವೇ ಭಾರೀ ಚರ್ಚೆಗೆ ಕಾರಣವಾಗಿದೆ. ಇಂಥದ್ದರಲ್ಲಿ ಸುಜಾತಾ ಭಟ್ (Sujatha Bhat)ಎನ್ನುವ ಮಹಿಳೆ ನಾನು, ಸಿಬಿಐ ಕಚೇರಿಯಲ್ಲಿ ಸ್ಟೆನೋಗ್ರಾಫರ್. ನನ್ನ ಮಗಳು ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಬಂದಾಗ ನಾಪತ್ತೆ ಆಗಿದ್ದಾಳೆಂದು ಸ್ನೇಹಿತೆ ರಶ್ಮಿ ತಿಳಿಸಿದಳು. ಹಾಗಾದರೆ, ಸುಜಾತಾ ಭಟ್ ನೀಡಿದ ದೂರಿನಲ್ಲಿ ವಿರೇಂದ್ರ ಹೆಗಡೆ ಮತ್ತು ಹರ್ಷೇಂದ್ರ ಅವರ ಹೆಸರು ಬಂದಿದ್ದೇಕೆ? ದೂರಿನಲ್ಲಿರೋ ಸವಿವರ ಮಾಹಿತಿ ಇಲ್ಲಿದೆ ನೋಡಿ...

ಮಾನ್ಯರೇ, ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದ ನನ್ನ ಮಗಳು ಅನನ್ಯ ಭಟ್ ತಂದೆ ದಿ. ಅನಿಲ ಭಟ್ (Ananya Bhat D/O Anil Bhat) ಇವಳು 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಕಾಣೆಯಾಗಿರುತ್ತಾಳೆ. ನನ್ನ ಮಗಳ ವಿಧಿವತ್ತಾದ ಅಂತ್ಯ ಸಂಸ್ಕಾರ ಮಾಡಲು ಮೃತ ದೇಹದ ಅಸ್ಥಿಪಂಜರ ಹುಡುಕಿ ಕೊಡಲು ವಿನಂತಿ ಕುರಿತು.

ನಾನು ಸುಜಾತ, ಗಂಡ ದಿ.ಅನಿಲ ಭಟ್, ವಯಸ್ಸು: 60 ವರ್ಷ, ಜಾತಿ: ಹಿಂದೂ ಬ್ರಾಹ್ಮಣ, ಹಾಲಿ ವಸತಿ: ಪದ್ಮನಾಭ ನಗರ ಬೆಂಗಳೂರು. ಇಸವಿ 2003 ರಲ್ಲಿ ನಾನು ಕೋಲ್ಕತ್ತಾದಲ್ಲಿ ಕೇಂದ್ರ ತನಿಖಾ ದಳ CBIದಲ್ಲಿ ಸ್ಟನೋ ಆಗಿ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ಮಗಳು ಅನನ್ಯ ಉಡುಪಿ ಜಿಲ್ಲೆ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ MBBS ವಿದ್ಯಾರ್ಥಿನಿ ಆಗಿದ್ದಳು. ಆಕೆ ತನ್ನ ಸಹಪಾಠಿಗಳೊಂದಿಗೆ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ಹೋಗಿದ್ದಳು. ಆಗ ನನ್ನ ಮಗಳು ಅನನ್ಯ ಜೊತೆಗೆ ಇದ್ದ ಸಹಪಾಠಿ ರಶ್ಮಿ ಎನ್ನುವ ಹುಡುಗಿ ನನ್ನ ಕಚೇರಿಯ ಸ್ಥಿರ ದೂರವಾಣಿಗೆ ಕರೆ ಮಾಡಿ ಅನನ್ಯ ಧರ್ಮಸ್ಥಳ ದೇವಸ್ಥಾನದಲ್ಲಿ ಕಾಣೆ ಆಗಿದ್ದಾಳೆ ಎಂದು ನನಗೆ ತಿಳಿಸಿರುತ್ತಾಳೆ. ನಾನು ಕೂಡಲೇ ಆಕೆಯ ಹಾಸ್ಟೆಲ್ ದೂರವಾಣಿಗೆ ಕರೆ ಮಾಡಿ ಕೇಳಿದಾಗ ಅನನ್ಯ ಎರಡು ಮೂರು ದಿನಗಳಿಂದ ಕಾಣಿಸುತ್ತಿಲ್ಲ ಎಂದು ತಿಳಿಸಿದರು.

ನಾನು ಕೋಲ್ಕತ್ತಾದಿಂದ ರೈಲಿನಲ್ಲಿ ಎರಡು ದಿನ ಪ್ರಯಾಣಿಸಿ ಧರ್ಮಸ್ಥಳಕ್ಕೆ ಬಂದು ದೇವಸ್ಥಾನದ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ನನ್ನ ಮಗಳ ಅನನ್ಯಳ ಗುರುತು ಪತ್ತೆ ಹೇಳುತ್ತಾ ವಿಚಾರಿಸಿದೆ. ಆಗ ದೇವಸ್ಥಾನದ ಹತ್ತಿರ ಇರುವ ಸ್ಥಳೀಯರು 3 ದಿನಗಳ ಹಿಂದೆ ದೇವಸ್ಥಾನದ ಸಿಬ್ಬಂದಿಗಳು ಒಂದು ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಯುವತಿಯ ಗುರುತು ನಾನು ಅವರಿಗೆ ತೋರಿಸಿದ ಅನನ್ಯಳ ಭಾವಚಿತ್ರಕ್ಕೆ ಹೋಲುತ್ತಿತ್ತು ಎಂದು ತಿಳಿಸಿದರು.

ನಾನು ತಕ್ಷಣವೇ ಧರ್ಮಸ್ಥಳದಿಂದ ಬೆಳ್ತಂಗಡಿ ಠಾಣೆಗೆ ದೂರು ನೀಡಲು ಹೋದೆ. ಆಗ ಬೆಳ್ತಂಗಡಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನನ್ನ ದೂರು ಪಡೆಯದೇ ‘ನಿನ್ನ ಮಗಳು ಎಲ್ಲಿದ್ದಾಳೆ ಎಂದು ನಮಗೇನು ಗೊತ್ತು? ಯಾವನ ಜೊತೆ ಹೋಗಿರಬೇಕು ನೋಡು. ದಿನಕ ಎಷ್ಟೊಂದು ಜನ ಬರ್ತಾರೆ, ಕಾಣೆ ಆಗ್ತಾರೆ. ಎಲ್ಲರದ್ದೂ ಕಂಪ್ಲೇಂಟ್ ತಗೊಳೋಕೆ ಆಗಲ್ಲ ಹೋಗು’ ಎಂದು ಬೆದರಿಸಿ ಠಾಣೆಯಿಂದ ಹೊರಗೆ ಕಳುಹಿಸಿದರು.

ನಂತರ ನಾನು ನೇರವಾಗಿ ಧರ್ಮಸ್ಥಳ ದೇವಸ್ಥಾನದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹತ್ತಿರ ಬಂದು ನನ್ನ ಮಗಳು ಧರ್ಮಸ್ಥಳ ದೇವಸ್ಥಾನದಲ್ಲಿ ಕಾಣೆಯಾದ ಕುರಿತು ನನ್ನ ಆತಂಕ ಹೇಳಿಕೊಂಡೆ. ಆ ಸಮಯದಲ್ಲಿ ಅವರ ಸಹೋದರ ಮತ್ತು ದೇವಸ್ಥಾನದ ಮುಖ್ಯ ಅಧಿಕಾರಿ ಹರ್ಷೇಂದ್ರ ಕುಮಾರ್ ಅವರ ಜೊತೆಗೆ ಅಲ್ಲಿ ಇದ್ದರು. ನನ್ನ ಮಗಳು ಕಾಣೆಯಾದ ನನ್ನ ಅಹವಾಲು ಕೇಳಿದ ಇಬ್ಬರೂ ನನಗೆ ಬಾಯಿಗೆ ಬಂದ ಹಾಗೆ ಅವಾಚ್ಯವಾಗಿ ನಿಂದಿಸಿದರು ಮತ್ತು ‘ನಿನ್ನ ಮಗಳನ್ನು ಕಾಯೋದು ನಮ್ಮ ಕೆಲಸವಲ್ಲ, ನಿನ್ನ ಮಗಳು ಯಾವುದೋ ಹುಡುಗನ ಜೊತೆಗೆ ಓಡಿ ಹೋಗಿರಬೇಕು, ನಮಗೆ ಏಕೆ ಕೇಳುವುದು? ನಮಗೆ ಬೇರೆ ಕೆಲಸ ಇದೆ. ಇಲ್ಲಿಂದ ಹೊರಡು’ ಎಂದು ತಿರಸ್ಕಾರದಿಂದ ಕೆಲಸದವರಿಂದ ನನ್ನನ್ನು ಹೊರಗೆ ಕಳುಹಿಸಿದರು.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಹರ್ಷೇಂದ್ರ ಕುಮಾರ್ ಅವರ ವರ್ತನೆಯಿಂದ ಬೇಸತ್ತು ಗಾಯದ ನೋವಿನಿಂದ ನಾನು ಅಂದು ರಾತ್ರಿ 8 ಘಂಟೆ ಸುಮಾರಿಗೆ ದೇವಸ್ಥಾನದ ಎದುರಿಗೆ ನನ್ನ ಮಗಳನ್ನು ನೆನೆದು ಅಳುತ್ತಾ ಕುಳಿತಿದ್ದೆ. ಆ ಹೂತ್ತಿಗೆ ಬಿಳಿ ಬಟ್ಟೆ ತೊಟ್ಟ ನಾಲ್ಕು ಜನ ದೇವಸ್ಥಾನದ ಸಿಬ್ಬಂದಿ ನಾನು ಕುಳಿತಲ್ಲಿಗೆ ಬಂದು ‘ನಮ್ಮ ಜೊತೆಗೆ ಬನ್ನಿ ನಿಮ್ಮ ಮಗಳ ಮಾಹಿತಿ ಕೊಡುತ್ತೇವೆ’ ಎಂದು ದೇವಸ್ಥಾನದ ಹತ್ತಿರ ಇರುವ ಒಂದು ಕೊಠಡಿಗೆ ಕರೆದೊಯ್ದರು. ಅಲ್ಲಿ ಒಂದು ಕುರ್ಚಿಯ ಮೇಲೆ ಕೂರಿಸಿ ‘ನೀನು ನಿನ್ನ ಮಗಳ ವಿಷಯ ಇಲ್ಲಿಯೇ ಮರೆತು ಇಲ್ಲಿಂದ ಹೊರಟು ಹೋಗು, ನಮ್ಮ ದಣಿಗಳು ನಿನಗೆ ಹೊಡೆದ ವಿಷಯ ಯಾರಿಗೂ ಹೇಳಕೂಡದು, ಹೀಗೆ ನೀನು ಇಲ್ಲಿ ದೇವಸ್ಥಾನದ ಮುಂದೆ ಕುಳಿತು ಗೋಗರಿಯಬೇಡ, ಹೋಗದಿದ್ದರೆ ನಿನ್ನ ಜೀವಕ್ಕೆ ಅಪಾಯ ಬರುತ್ತದೆ’ ಎಂದು ನನಗೆ ಬೆದರಿಕೆ ಹಾಕಿದರು.

ನಾನು ನನ್ನ ಮಗಳನ್ನು ನೋಡದೆ ನಾನು ಇಲ್ಲಿಂದ ಹೊರಡುವುದಿಲ್ಲ ಎಂದು ಹೇಳಿದೆ. ಆಗ ಆ ನಾಲ್ಕು, ಜನ ಸೇರಿ ನನ್ನನ್ನು ಕುರ್ಚಿಗೆ ಹಗ್ಗದಿಂದ ಬಿಗಿಯಾಗಿ ಕಟ್ಟಿ ಬಾಯಿಗೆ ಬಟ್ಟೆ ಕಟ್ಟಿ ರೂಮಿನ ದೀಪ ಆರಿಸಿ ರಾತ್ರಿ ಇಡೀ ನನ್ನನ್ನು ಕತ್ತಲೆ ಕೋಣೆಯಲ್ಲಿ ಇಟ್ಟರು. ನಂತರ ಬಿಳಿ ಬಟ್ಟೆ ಧರಿಸಿದ ಇದೇ ದೇವಸ್ಥಾನದ ಸಿಬ್ಬಂದಿಗಳು ಬೆಳಿಗ್ಗೆ ನನ್ನ ತಲೆಗೆ ಜೋರಾಗಿ ಹೊಡೆದರು.

ನಂತರ ಮೂರು ತಿಂಗಳು ನಾನು ಕೋಮಾ ಅವಸ್ಥೆಯಲ್ಲಿದ್ದು ಎಚ್ಚರ ಆದಾಗ ಬೆಂಗಳೂರು ವಿಲ್ಸನ್ ಗಾರ್ಡನ್‌ನಲ್ಲಿ (Bengaluru Wilson Garden) ಇರುವ ಅಗಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೆ. ನಾನು ಅಲ್ಲಿ ಹೇಗೆ ಬಂದೆ, ಯಾರು ನನ್ನನು ಧರ್ಮಸ್ಥಳದಿಂದ ಕರೆದುಕೊಂಡು ಬಂದರು ಯಾವುದೂ ನನಗೆ ಗೊತ್ತಿಲ್ಲ. ನನ್ನ ಜೊತೆಗೆ ಇದ್ದ ಚೀಲ, ನನ್ನ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್ ಮತ್ತು ವ್ಯಾನಿಟಿ ಬ್ಯಾಗ್ ಯಾವುದೂ ನನ್ನ ಜೊತೆಗೆ ಇರಲಿಲ್ಲ. ನನ್ನ ತಲೆಗೆ ಬಲವಾದ ಏಟಿನಿಂದ 8 ಹೊಲಿಗೆ ಬಿದ್ದಿರುವ ಗಾಯ ಇದೆ. ನನ್ನ ಮಗಳನ್ನು ಕಳೆದುಕೊಂಡು ಪತ್ತೆಯಾಗದೆ ಅನೇಕ ವರ್ಷಗಳಿಂದ ಭಯದಲ್ಲಿ, ನಿರುತ್ಸಾಹಿ ಜೀವನ ನಡೆಸುತ್ತಿದ್ದೇನೆ.

ಇತ್ತೀಚೆಗೆ ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕನೊಬ್ಬ ವ್ಯಕ್ತಿ ತಾನು ಅನೇಕ ಹೆಣ್ಣುಮಕ್ಕಳ ಶವ ಹೂತು ಹಾಕಿರುವುದಾಗಿ ಹೇಳಿ ತಲೆ ಬುರುಡೆಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಸುದ್ದಿಯನ್ನು ಯೂಟ್ಯೂಬ್ ಗಳಲ್ಲಿ, ಪತ್ರಿಕೆಗಳಲ್ಲಿ, ರಾಷ್ಟ್ರೀಯ ಚಾನೆಲ್‌ಗಳಲ್ಲಿ ನೋಡಿರುತ್ತೇನೆ. ಹೀಗಾಗಿ ನನ್ನ ಮಗಳನ್ನು ಆ ವ್ಯಕ್ತಿಯೇ ಹೂತು ಹಾಕಿರುವ ಸಾಧ್ಯತೆ ಇರಬಹುದು. ಆದ ಕಾರಣ ಧರ್ಮಸ್ಥಳ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನನ್ನ ಮಗಳ ಅಸ್ಥಿ ಪಂಜರವಾದರೂ ಸಿಗಬಹುದು.

ನಾವು ಸನಾತನ ಹಿಂದೂ ಬ್ರಾಹ್ಮಣ ಕುಲದವರು ಆಗಿದ್ದು, ಮೃತ ದೇಹಗಳಿಗೆ ಸಂಪ್ರದಾಯವಾಗಿ ಶ್ರಾದ್ಧ ಕಾರ್ಯ ಮಾಡುವುದು ಜೀವನದ ಬಹು ಮುಖ್ಯ ಕಾರ್ಯವಾಗಿರುತ್ತದೆ. ಅದನ್ನು ತಪ್ಪಿಸಿದರೆ ತಾಯಿಯಾದ ನನಗೆ ಪ್ರಾಯಶ್ಚಿತ ಆಗಲು ಸಾಧ್ಯವಿಲ್ಲ. ವೀರೇಂದ್ರ ಹೆಗ್ಗಡೆ ಅವರು ಬಹಳ ಪ್ರಭಾವಿ ಮತ್ತು ಕ್ರೂರ ವ್ಯಕ್ತಿ ಆಗಿರುತ್ತಾರೆ. ನಾನು ಫಾಲಿಗ್ರಾಫ್ ತನಿಖೆಗೆ ಒಳಪಡಲು ಈ ಕೂಡಲೇ ಸಿದ್ದನಿರುತ್ತೇನೆ, ದಯವಿಟ್ಟು ವೀರೇಂದ್ರ ಹೆಗ್ಗಡೆ ಮತ್ತು ಹರ್ಷೇಂದ್ರ ಕುಮಾರ್ ಅವರನ್ನು ಬಂಧಿಸಿ ಅವರಿಗೆ ಪಾಲಿಗ್ರಾಫ್ ಕೊಟ್ಟು ನನ್ನ ಮಗಳಿಗೆ ಆದ ಗತಿಯೇನು ಎಂದು ದಯವಿಟ್ಟು ಅವರಿಂದ ಬಾಯಿ ಬಿಡಿಸಿ. ಅವರಿಗೆ ನನ್ನ ಮಗಳು ಕಾಣೆಯಾಗಿರುವ ಬಗ್ಗೆ ತಿಳಿದಿರುತ್ತದೆ. ಇಲ್ಲಿ ಹೇಳದೇ ಇರುವ ಇನ್ನಷ್ಟು ಅಂಶಗಳನ್ನು ನಾನು ನ್ಯಾಯಾಧೀಶರಿಗೆ ತಿಳಿಸಲು ಕಾಯುತ್ತಿರುವೆ.

ಹೀಗಿರುವಾಗ ನನ್ನ ಮಗಳ ಅಸ್ಥಿಪಂಜರ ಹುಡುಕಿ ಗೌರವಯುತವಾಗಿ ಶ್ರಾದ್ಧ ಕಾರ್ಯ ನೆರವೇರಿಸಿ ಅನನ್ಯಾಳ ಆತ್ಮಕ್ಕೆ ಶಾಂತಿ ಕೊಡಿಸಿ ಜೀವನದ ಕೊನೆಯ ದಿನಗಳನ್ನು ಕಳೆಯಲು ಅವಕಾಶ ಮಾಡಿಕೊಡುವಂತೆ ತಮ್ಮಲ್ಲಿ ಪ್ರಾರ್ಥನೆ, ಇಂತಿ ತಮ್ಮ ನಂಬುಗೆಯ ಶ್ರೀಮತಿ ಸುಜಾತ' ಎಂದು ದೂರು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.