ಧರ್ಮಸ್ಥಳದಲ್ಲಿ ನಾಪತ್ತೆಯಾದ ಮಗಳ ಅಸ್ಥಿಪಂಜರಕ್ಕಾಗಿ ಹೋರಾಟ ನಡೆಸುತ್ತಿರುವ ಸುಜಾತಾ ಭಟ್, ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. ತಮ್ಮನ್ನು ಹುಡುಕಬೇಡಿ, ಎಲ್ಲಿರಬೇಕೋ ಅಲ್ಲಿದ್ದೇನೆ ಎಂದು ಹೇಳಿ, ಮಗಳ ಅಸ್ಥಿಪಂಜರ ಸಿಕ್ಕರೆ ಕೊಡಿ ಎಂದಿದ್ದಾರೆ.
ಧರ್ಮಸ್ಥಳದಲ್ಲಿ ನನ್ನ ಮಗಳು ಅನನ್ಯಾ ಭಟ್ ನಾಪತ್ತೆ ಆಗಿದ್ದಾಳೆ. ಆಕೆಯ ಅಸ್ತಿಪಂಜರ ಕೊಡಿ, ಧಾರ್ಮಿಕ ವಿಧಿ ವಿಧಾನ ನೆರವೇರಿಸಬೇಕು ಎಂದು ಪೊಲೀಸರಿಗೆ ದೂರು ಕೊಟ್ಟೊರುವ ಸುಜಾತಾ ಭಟ್ ಅವರು, ದೂರು ಕೊಟ್ಟ ನಂತರ ಸಾರ್ವಜನಿಕರಿಗೆ ಕಾಣಿಸಿಕೊಂಡಿರಲಿಲ್ಲ. ಅವರನ್ನು ಮಾಧ್ಯಮಗಳು, ಜನರು ಸಂಪರ್ಕ ಮಾಡಿದರೂ ಸಿಗದ ಹಿನ್ನೆಲೆಯಲ್ಲಿ ಸುಜಾತಾ ಭಟ್ ನಾಪತ್ತೆ ಆಗಿದ್ದಾರೆ ಎಂಬ ಸುದ್ದಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಇದರ ಬೆನ್ನಲ್ಲಿಯೇ ದೂರುದಾರೆ ಸುಜಾತಾ ಭಟ್ ಅಜ್ಞಾತ ಸ್ಥಳವೊಂದರಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋದಲ್ಲಿ ಸುವರ್ಣ ನ್ಯೂಸ್ ಚಾನೆಲ್‌ನವರು ಸುಜಾತಾ ಭಟ್ (Sujatha Bhat Dharmasthala) ಕಾಣೆಯಾಗಿದ್ದಾರೆ ಎಂಬ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಆದರೆ, ನಾನು ಎಲ್ಲಿಯೂ ಹೋಗಿಲ್ಲ, ಎಲ್ಲಿ ಇರಬೇಕೋ ಆ ಜಾಗದಲ್ಲಿ ಇದ್ದಾರೆ. ನಾನು ಕೇಳುತ್ತಿರುವುದು ನನ್ನ ಮಗಳ ಅಸ್ತಿಪಂಜರ ಮಾತ್ರ. ಸಿಕ್ಕಿದರೆ ಕೊಡಿ, ಡಿಎನ್ಎ ಮ್ಯಾಚ್ ಆಗಿರುವ ಅಸ್ತಿಪಂಜರವನ್ನು ಕೊಟ್ಟರೆ ನಮ್ಮ ಸನಾತನ ಹಿಂದೂ ಸಂಪ್ರದಾಯದ ಪ್ರಕಾರ ಧಾರ್ಮಿಕ ಕ್ರಿಯೆಗಳನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೇನೆ. ಅದಷ್ಟನ್ನು ಬಿಟ್ಟು ಬೇರೆ ಯಾರನ್ನೂ ಕೇಳಿಲ್ಲ. ನಾನು ಎಲ್ಲಿಯೂ ಹೋಗಿಲ್ಲ, ಅಸ್ತಿ ಸಿಕ್ಕಿದರೆ ಕೊಡಿ. ನನ್ನನ್ನು ಇವರು ಹುಡುಕಾಡುವ ಪ್ರಯತ್ನ ಮಾಡುವುದು ಬೇಡ, ಎಲ್ಲಿರಬೇಕೋ ಅಲ್ಲಿದ್ದೇನೆ. ಇವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದಾರೆ.
ತಿಮರೋಡಿ ಮನೆಯಲ್ಲಿದ್ದಾರೆ ಎಂಬ ಫೋಟೋ ವೈರಲ್:
ಇನ್ನು ಸಮಾಜಿಕ ಜಾಲತಾಣದಲ್ಲಿ ಸುಜಾತಾ ಭಟ್ ಇದ್ದಾರೆ ಎಂಬ ಫೋಟೋಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾದ ಸಾಮಾಜಿಕ ಜಾಲತಾಣವೊಂದರ ಫೋಟೋ ಲಭ್ಯವಾಗಿದೆ. ಇದರಲ್ಲಿ ತಿಮರೋಡಿ ಅವರ ಮನೆಯಲ್ಲಿ ಟಿವಿ ಅಳಡಿಕೆ ಮಾಡಿರುವ ಫೋಟೋವನ್ನು ಹಂಚಿಕೊಂಡು, ಜೊತೆಗೆ ಸುಜಾತಾ ಭಟ್ ನಿಂತು ಮಾತನಾಡಿರುವ ವಿಡಿಯೋದ ಫೋಟೋ ಎರಡನ್ನೂ ತಾಳೆ ಮಾಡಿದ್ದಾರೆ. ಅದರಲ್ಲಿ ತಿಮರೋಡಿ ಮನೆಯೇ ಇದು ಎಂದು ಕೆಲವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಸುವರ್ಣ ನ್ಯೂಸ್ ಕೂಡ ಯಾವುದೇ ಸತ್ಯಾಸತ್ಯತೆ ಪರಿಶೀಲನೆ ಮಾಡದೇ ಒಪ್ಪಿಕೊಳ್ಳುವುದಿಲ್ಲ. ಆದರೆ, ಸುಜಾತಾ ಭಟ್ ಅವರೇ ತಮ್ಮನ್ನು ಹುಡುಕಬೇಡಿ, ಎಲ್ಲಿರಬೇಕೋ ಅಲ್ಲಿದ್ದೇನೆ ಎಂದು ಹೇಳಿದ್ದಾರೆ.
ಸುಜಾತಾ ಭಟ್ ಬೆಂಬಲಕ್ಕೆ ಬಂದಿದ್ದ ತಂತ್ರಜ್ಷರು, ವಿಜ್ಞಾನಿಗಳು:
ಧರ್ಮಸ್ಥಳದಲ್ಲಿ ಮಗಳನ್ನು ಕಳೆದುಕೊಂಡಿರುವ ಸುಜಾತಾ ಭಟ್ ಅವರ ಮಗಳ ಕಳೇಬರವನ್ನು ಹುಡುಕುವುದಕ್ಕೆ ಅಗತ್ಯವಿದ್ದಲ್ಲಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಾವು ಸಹಾಯ ಮಾಡುತ್ತೇವೆ ಎಂದು ಹಲವು ವಿಜ್ಞಾನಿಗಳು, ಇಂಜಿನಿಯರ್‌ಗಳು ಹಾಗೂ ಸಂಬಂಧಪಟ್ಟ ತಜ್ಞರು ಮುಂದೆ ಬಂದಿದ್ದರು. ಈ ಬಗ್ಗೆ ಸುಜಾತಾ ಭಟ್ ಪರ ವಕೀಲ ಮಂಜುನಾಥ್ (Advocate Manjunath) ಅವರು ಮಾಧ್ಯಮಗಳ ಮುಂದೆ ತಿಳಿಸಿದ್ದರು. ಆದರೆ, ಈ ಯಾರ ಸಹಾಯವನ್ನೂ ಎಸ್‌ಐಟಿ ಪಡೆದುಕೊಂಡಿಲ್ಲ. ಅನಾಮಿಕ ದೂರುದಾರ ತೋರಿಸಿದ ಸ್ಥಳದಲ್ಲಿ ಅಸ್ಥಿಪಂಜರವನ್ನು ಶೋಧ ಕಾರ್ಯ ಮಾಡುತ್ತಿದ್ದಾರೆ. 15 ಸ್ಥಳಗಳನ್ನು ಅಗೆದಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.
