ಧರ್ಮಸ್ಥಳದಲ್ಲಿ ನಾಪತ್ತೆಯಾದ ಅನನ್ಯಾ ಭಟ್ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ದೂರುದಾರರಾದ ಸುಜಾತಾ ಭಟ್ ಅವರೇ ನಾಪತ್ತೆಯಾಗಿದ್ದು, ಅನನ್ಯಾ ಓದುತ್ತಿದ್ದಳೆನ್ನಲಾದ ಕಾಲೇಜಿನಲ್ಲಿ ಆಕೆಯ ದಾಖಲೆಗಳೇ ಇಲ್ಲದಿರುವುದು ತನಿಖೆಗೆ ಸವಾಲೊಡ್ಡಿದೆ.
ಬೆಂಗಳೂರು (ಆ.13): ಧರ್ಮಸ್ಥಳ ಕೇಸ್ ವಿಚಾರದಲ್ಲಿ ಸಾಕಷ್ಟು ಸದ್ದು ಮಾಡಿದ ವಿಚಾರ ಅನನ್ಯಾ ಭಟ್ ನಾಪತ್ತೆ ಪ್ರಕರಣ. ಸುಜಾತಾ ಭಟ್ ಅವರ ದೂರಿನ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಜಸ್ಟೀಸ್ ಫಾರ್ ಸೌಜನ್ಯಾ, ಜಸ್ಟೀಸ್ ಫಾರ್ ಅನನ್ಯಾ ಭಟ್ ಎನ್ನುವ ಹ್ಯಾಶ್‌ಟ್ಯಾಗ್‌ಗಳು ಸೃಷ್ಟಿಯಾಗಿದ್ದವು. ಅಷ್ಟಕ್ಕೂ ಅನನ್ಯಾ ಭಟ್ ಅನ್ನೋ ದಾಖಲೆಯೇ ಎಲ್ಲೂ ಇಲ್ಲ ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸಿಕ್ಕ ಅಂಶ. ಒಂದೆಡೆ ಅನಾಮಿಕ ನೋಡಿದರೆ ಅತ್ಯಾಚಾರಕ್ಕೊಳಗಾಗಿದ್ದ ಸ್ಥಿತಿಯಲ್ಲಿದ್ದ ಹದಿಹರಿಯದ ನೂರಾರು ಹೆಣ್ಣು ಮಕ್ಕಳ ಶವ ಹೂತಿದೀನಿ ಎಂದಿದ್ದಾರೆ. ಆದ್ರೆ, ಧರ್ಮಸ್ಥಳದಲ್ಲಿ ನನ್ನ ಮಗಳು ಕಾಣೆಯಾಗಿದ್ದಾಳೆ ಅಂತ ದೂರು ಕೊಟ್ಟವರು ಒಬ್ಬರೇ ಒಬ್ಬರು, ಆಕೆ ಸುಜಾತಾ ಭಟ್, ಅವರ ಕಂಪ್ಲೆಂಟ್ ಬಗ್ಗೆ ಪೊಲೀಸರಿಗೇ ಒಂದಷ್ಟು ಪ್ರಶ್ನೆಗಳಿದ್ದವು..
ಅದೇನೆಂದರೆ, 2003ರಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ 2025ರಲ್ಲಿ ಸುಜಾತಾ ಭಟ್ ದೂರು ತಂದಿದ್ದಾರೆ.ಸಿಬಿಐ ಸೈನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಮಿಸ್ಸಿಂಗ್ ಕೇಸ್ ದಾಖಲಿಸುವಷ್ಟು ಸಂಪರ್ಕಗಳಿರಲಿಲ್ಲವಾ? ಬೆಳ್ತಂಗಡಿ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಅಂದ ಮಾತ್ರಕ್ಕೆ ಸುಮ್ಮನಾಗಿಬಿಟ್ಟರಾ? ಬೇರೆ ಠಾಣೆಗೂ ಹೋಗಲಿಲ್ಲ- ನ್ಯಾಯಾಲಯಕ್ಕೂ ಹೋಗಲಿಲ್ಲ ಯಾಕೆ..? ಎನ್ನುವ ಪ್ರಶ್ನೆಗಳು ಎದ್ದಿವೆ.
ಈ ಪ್ರಶ್ನೆಗಳಿಗೆ ಉತ್ತರ ಪಡೆಯೋಣ ಅಂದರೆ ದಕ್ಷಿಣ ಕನ್ನಡ ಎಸ್ಪಿ ಆಫೀಸಿಗೆ ಬಂದು ಕಂಪ್ಲೆಂಟ್ ಹೋದ ಸುಜಾತ ಭಟ್, ಆ ನಂತರ ಪೊಲೀಸರ ಸಂಪರ್ಕಕ್ಕೆ ಸಿಗಲೇ ಇಲ್ಲ.
ಸೌಜನ್ಯ ಪ್ರಕರಣದ ಮಾದರಿಯಲ್ಲಿ ಮತ್ತೊಂದು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ ಸುಜಾತಾ ಭಟ್ ಅವರೇ ಬಳಿಕ ನಾಪತ್ತೆಯಾಗಿದ್ದರು. ಪೊಲೀಸರ ತನಿಖೆಗೆ ಅಸಹಕಾರ ತೋರುತ್ತಿದ್ದಾರೆ. ಈ ಪ್ರಕರಣದ ವಕೀಲರೂ ಸಹ ಪೊಲೀಸರ ಸಂಪರ್ಕಕ್ಕೆ ಸಿಗುತ್ತಿಲ್ಲ, ಇದು ತನಿಖೆ ತಂಡಕ್ಕೆ ತೀವ್ರ ತಲೆನೋವು ತಂದಿದೆ.
ಪೊಲೀಸರು ತಮ್ಮ ತನಿಖೆಗೆ ಅಗತ್ಯ ದಾಖಲೆಗಳನ್ನು ಕೇಳಿದಾಗ ಸುಜಾತಾ ಅವರಿಂದ 'ಇಲ್ಲ' ಎಂಬ ಉತ್ತರವೇ ಬಂದಿದೆ. ನಾಪತ್ತೆಯಾದ ಅನನ್ಯಾ ಭಟ್ ಅವರ ಒಂದು ಫೋಟೋ ಸಹ ನೀಡಲು ಅವರು ವಿಫಲರಾಗಿದ್ದಾರೆ. ಇದಲ್ಲದೆ, ಪೊಲೀಸರು ಕೇಳಿದ ಪಿಯುಸಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಗಳು ಮತ್ತು ಮಣಿಪಾಲ್ ಮೆಡಿಕಲ್ ಕಾಲೇಜಿನ ದಾಖಲಾತಿಗಳ ಕುರಿತು ಪ್ರಶ್ನೆ ಮಾಡಿದಾಗ, ಮನೆಯಲ್ಲಿ ಬೆಂಕಿ ಬಿದ್ದು ಎಲ್ಲವೂ ಸುಟ್ಟು ಹೋಗಿವೆ ಎಂದು ಸುಜಾತಾ ಭಟ್ ಹೇಳಿದ್ದಾರೆ.
ಪೊಲೀಸರೇ ಕಂಡುಕೊಂಡರು ದಾರಿ: ಮಿಸ್ಸಿಂಗ್ ಕಂಪ್ಲೇಟ್ ದಾಖಲಾಗಿದೆ. ಸುಜಾತ ಭಟ್ ಧರ್ಮಸ್ಥಳದ ದೇವಸ್ಥಾನದ ಸಿಬ್ಬಂದಿಯ ಮೇಲೆ ಅಷ್ಟೇ ಅಲ್ಲ, ನೇರವಾಗಿ ವೀರೇಂದ್ರ ಹೆಗ್ಗಡೆ ಮತ್ತು ಅವರ ತಮ್ಮ ಹರ್ಷೇಂದ್ರ ಹೆಗ್ಗಡೆಯವರ ಹೆಸರು ಪ್ರಸ್ತಾಪಿಸಿ ಕಂಪ್ಲೇಟ್ ಕೊಟ್ಟಿದ್ದಾಳೆ. ಇನ್ನೊಂದು ಕಡೆ ಅನನ್ಯಾ ಭಟ್‌ಗೆ ಸಂಬಂಧಿಸಿದ ದಾಖಲೆಗಳು ಒತ್ತಟ್ಟಿಗಿರಲಿ, ಒಂದೇ ಒಂದು ಪೋಟೋ ಕೂಡ ಆಕೆಯ ಬಳಿ ಇಲ್ಲ. ತನಿಖೆ ಮಾಡುವುದಾದರೂ ಹೇಗೆ..? ಜಸ್ಟಿಸ್ ಫಾರ್ ಸೌಜನ್ಯ ಎಂದು ಕೂಗಿದವರೇ ಈಗ ಜಸ್ಟಿಸ್ ಫಾರ್ ಅನನ್ಯಾ ಅಂತಾನೂ ಕೂಗುತ್ತಿದ್ದರು. ಪೊಲೀಸರಿಗೆ ದಿಕ್ಕು ತೋಚದಂತಾಗಿತ್ತು. ಆಗ ಅವರು ಕಂಡುಕೊಂಡದ್ದು ಒಂದು ದಾರಿ .
ಅನನ್ಯಾ ಭಟ್ ಹೆಸರಿನ ವಿದ್ಯಾರ್ಥಿನಿಯೇ ಇಲ್ಲ
ಮಣಿಪಾಲ್ ಗ್ರೂಪ್ ಮೆಡಿಕಲ್ ಕಾಲೇಜ್, ಕಸ್ತೂರ್ ಬಾ ಮೆಡಿಕಲ್ ಕಾಲೇಜು ಮಣಿಪಾಲ್‌ನಲ್ಲಿ ಎಲ್ಲಾ ದಾಖಲೆ ಚೆಕ್ ಮಾಡಿದ್ದಾರೆ. ಅಲ್ಲಿ MBBS ಓದುತ್ತಿದ್ದಳು ಎಂದು ಸುಜಾತಾ ಭಟ್ ದೂರು ನೀಡಿದ್ದರು. 2003ರಲ್ಲಿ ಮೊದಲ ವರ್ಷದ MBBS ಮಾಡುತ್ತಿದ್ದಳು ಎಂದು ಸುಜಾತಾ ಭಟ್ ದೂರಿನಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲಿಯೇ ಮಣಿಪಾಲ್ ಮೆಡಿಕಲ್ ಕಾಲೇಜಿಗೆ ಪೊಲೀಸರ ದೌಡಾಯಿಸಿದ್ದಾರೆ. ಆದರೆ, 2003ರಲ್ಲಿ ಅನನ್ಯಾ ಭಟ್ ಹೆಸರಿನ ವಿದ್ಯಾರ್ಥಿನಿಯೇ ಇಲ್ಲ ಎನ್ನುವುದು ಗೊತ್ತಾಗಿದೆ.
1998ರಿಂದ 2005ರ ತನಕದ ದಾಖಲೆಗಳ ಹುಡುಕಾಟ ಮಾಡಿದ್ದಾರೆ. ಅನನ್ಯಾ ಭಟ್ D/O ಅನಿಲ್ ಭಟ್ ಹೆಸರಿಗೆ ಹುಡುಕಾಟ ಮಾಡಿದ್ದಾರೆ. ಏಳು ವರ್ಷದ ದಾಖಲೆಗಳಲ್ಲೂ ಅನನ್ಯಾ ಡಾಟರ್ ಆಫ್ ಅನಿಲ್ ಭಟ್ ಎನ್ನುವ ಹೆಸರು ಪತ್ತೆಯಾಗಿಲ್ಲ.
ಆ ಬಳಿಕ ಮಂಗಳೂರಿನ ಕಸ್ತೂರ್ ಬಾ ಮೆಡಿಕಲ್ ಕಾಲೇಜಿಗೂ ಪೊಲೀಸರು ಭೇಟಿ ನೀಡಿದ್ದಾರೆ. ಇದು ಮಣಿಪಾಲ್ ಗ್ರೂಪ್‌ಗೆ ಸೇರಿದ ಮತ್ತೊಂದು ಕಾಲೇಜು. ಆ ಕಾಲೇಜಿನ ದಾಖಲೆಗಳಲ್ಲೂ ಅನನ್ಯಾ ಭಟ್ ಹೆಸರಿಲ್ಲ ಎನ್ನುವುದು ಗೊತ್ತಾಗಿದೆ.
2003ರಲ್ಲಿ ತನ್ನ ಸ್ನೇಹಿತೆಯರ ಜೊತೆ ಅನನ್ಯಾ ಭಟ್ ಧರ್ಮಸ್ಥಳಕ್ಕೆ ಬಂದಿದ್ದಳು. ಆಕೆ ಮಣಿಪಾಲ್ ಮೆಡಿಕಲ್ ಕಾಲೇಜಿನಲ್ಲಿ ಫಸ್ಟ್ ಇಯರ್ ಎಂಬಿಬಿಎಸ್ ಓದುತ್ತಿದ್ದಳು ಅನ್ನೋದು ಸುಜಾತಾ ಭಟ್ ನೀಡಿರುವ ದೂರು. ಆಕೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಕ್ಕೆ ಸಾಕ್ಷಿ ಇಲ್ಲ. ಕೊನೆಪಕ್ಷ ಮಣಿಪಾಲದ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಕ್ಕಾದರೂ ಸಾಕ್ಷಿ ಬೇಕಲ್ಲ..? ಸುಜಾತಾ ಭಟ್ ಅವರನ್ನು ಕೇಳಿದರೇ ಮನೆಗೆ ಬೆಂಕಿ ಬಿದ್ದು ಮಗಳ ಎಲ್ಲಾ ದಾಖಲೆಗಳು, ಪೋಟೋಗಳು ಸುಟ್ಟು ಹೋಗಿವೆ ಅಂತಾರೆ. ಹಾಗಾದರೆ, ಮಣಿಪಾಲ್ ಮೆಡಿಕಲ್ ಕಾಲೇಜಿಗೂ ಬೆಂಕಿ ಬಿದ್ದಿತ್ತಾ..? ಖಂಡೀತಾ ಇಲ್ಲ. CONFIRMATIONಗೆ ಇರಲಿ ಅಂತ ಮಣಿಪಾಲ್ನ ಗ್ರೂಪ್‌ನ ಎರಡೂ ಮೆಡಿಕಲ್ ಕಾಲೇಜುಗಳಲ್ಲಿ ಪೊಲೀಸರು ಜಾಲಾಡಿದ್ರೂ, ಅನನ್ಯಾ ಭಟ್ D/O ಅನಿಲ್ ಭಟ್ ಎಂಬ ಸ್ಟೂಡೆಂಟ್ ಅಲ್ಲಿ ಮೆಡಿಕಲ್ ಅಡ್ಮಿಷನ್ ಮಾಡಿಸಿದ್ದಕ್ಕಾಗಲಿ, ಆಕೆ ನಾಪತ್ತೆಯಾಗಿದ್ದಾಕ್ಕಗಲಿ ಅಲ್ಲಿ ಒಂದೇ ಒಂದು ದಾಖಲೆಯೂ ಸಿಕ್ಕಿಲ್ಲ.
