ಧರ್ಮಸ್ಥಳದ ಶವ ಹೂತ ಪ್ರಕರಣದಲ್ಲಿ ದೂರುದಾರನಿಗೆ ನೀಡಲಾಗಿರುವ ಸ್ವಾತಂತ್ರ್ಯದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅಡಿಯಲ್ಲಿ ಈ ಸೌಲಭ್ಯಗಳನ್ನು ನೀಡಲಾಗಿದ್ದು, ಪೊಲೀಸರ ನಿರಂತರ ಮೇಲ್ವಿಚಾರಣೆಯಲ್ಲಿ ದೂರುದಾರ ಇದ್ದಾನೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ (ಆ.07): ಧರ್ಮಸ್ಥಳದಲ್ಲಿ ಶವ ಹೂತುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (ಎಸ್ಐಟಿ) ಅಧಿಕಾರಿಗಳು ಅನಾಮಿಕ ದೂರುದಾರನನ್ನು ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳುವಂತೆ ಬೆಳ್ತಂಗಡಿಯ ನಿವಾಸಿಯೊಬ್ಬರು ಮನವಿ ಮಾಡಿದ್ದಾರೆ. ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಇದು ಅತ್ಯಗತ್ಯ ಎಂದು ಒತ್ತಾಯಿಸಿದ್ದಾರೆ.
ಅನಾಮಿಕ ದೂರುದಾರನ ಇರುವಿಕೆ ಬಗ್ಗೆ ಅನುಮಾನ
ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ನಿವಾಸಿ ಶ್ಯಾಮ ಸುಂದರ ಎಂಬುವರು ಎಸ್ಐಟಿಗೆ ದೂರು ನೀಡಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅನಾಮಿಕ ವ್ಯಕ್ತಿ ಈಗಾಗಲೇ 13 ಸ್ಥಳಗಳನ್ನು ತೋರಿಸಿದ್ದಾನೆ. ಅದರಲ್ಲಿ 12 ಸ್ಥಳಗಳಲ್ಲಿ ಎಸ್ಐಟಿ ತಂಡ ತನಿಖೆ ನಡೆಸಿದೆ. ಆದರೆ, ಇಂತಹ ಗಂಭೀರ ಪ್ರಕರಣದ ದೂರುದಾರನನ್ನು ಎಸ್ಐಟಿ ತಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಬದಲು, ಆತ ವಕೀಲರೊಂದಿಗೆ ಅಥವಾ ಖಾಸಗಿ ವ್ಯಕ್ತಿಗಳ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ತಮಗೆ ತಿಳಿದುಬಂದಿದೆ ಎಂದು ಶ್ಯಾಮ ಸುಂದರ ಹೇಳಿದ್ದಾರೆ.
ನಿಷ್ಪಕ್ಷಪಾತ ತನಿಖೆಗೆ ಒತ್ತಾಯ:
ಮೊದಲಿಗೆ ಅನಾಮಿಕ ವ್ಯಕ್ತಿ ಮಂಗಳೂರಿನಲ್ಲಿ ವಕೀಲರ ಜೊತೆ ರೂಮ್‌ನಲ್ಲಿ ಇರುವುದಾಗಿ ಮಾಹಿತಿ ಇತ್ತು. ಆದರೆ ಈಗ ಆತ ಉಜಿರೆಯ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಇಷ್ಟು ದೊಡ್ಡ ಪ್ರಕರಣದಲ್ಲಿ, ಸಾಕ್ಷ್ಯಗಳನ್ನು ನೀಡುತ್ತಿರುವ ವ್ಯಕ್ತಿ ಹೊರಗಡೆ ಇದ್ದರೆ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವುದು ಹೇಗೆ ಸಾಧ್ಯ ಎಂದು ಶ್ಯಾಮ ಸುಂದರ ಪ್ರಶ್ನಿಸಿದ್ದಾರೆ. ಹಾಗಾಗಿ, ತಕ್ಷಣವೇ ಆ ಅನಾಮಿಕ ವ್ಯಕ್ತಿಯನ್ನು ಎಸ್ಐಟಿ ತಮ್ಮ ವಶಕ್ಕೆ ತೆಗೆದುಕೊಂಡು ನ್ಯಾಯಯುತವಾಗಿ ತನಿಖೆ ನಡೆಸಬೇಕು ಎಂದು ಅವರು ಬೆಳ್ತಂಗಡಿ ಎಸ್ಐಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಮನವಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ದೂರುದಾರನಿಗೆ 'ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್' ಅಡಿಯಲ್ಲಿ ಭದ್ರತೆ, ಆದ್ರೂ ಫ್ರೀಡಂ ಯಾಕೆ?
ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಪ್ರಕರಣದ ದೂರುದಾರನಿಗೆ ಯಾಕಿಷ್ಟು ಸ್ವಾತಂತ್ರ್ಯ ನೀಡಲಾಗಿದೆ ಎಂದು ಹಲವರು ಪ್ರಶ್ನಿಸುತ್ತಿರುವಾಗ, ಆತ 'ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್' ಅಡಿ ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿದ್ದಾನೆ ಎಂಬ ಮಾಹಿತಿ ಈಗ ಹೊರಬಿದ್ದಿದೆ. ಈ ಯೋಜನೆ ಅಡಿಯಲ್ಲಿ ಜಿಲ್ಲಾ ನ್ಯಾಯಾಧೀಶರ ಸಮಿತಿಯು ಈ ಅವಕಾಶವನ್ನು ಅನುಮೋದಿಸಿದೆ.
ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಎಂದರೇನು?
ಗಂಭೀರ ಪ್ರಕರಣಗಳಲ್ಲಿ ಸಾಕ್ಷಿ ಹೇಳುವ ಅಥವಾ ದೂರು ನೀಡುವ ವ್ಯಕ್ತಿಗಳಿಗೆ ಯಾವುದೇ ಅಪಾಯ ಅಥವಾ ಒತ್ತಡ ಇರದಂತೆ ರಕ್ಷಣೆ ನೀಡಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ಅನುಮೋದನೆಯ ನಂತರ, ದೂರುದಾರ ಅಥವಾ ಸಾಕ್ಷಿಯು ಎಲ್ಲಿ ಬೇಕಾದರೂ ಉಳಿದುಕೊಳ್ಳಬಹುದು, ಫೋನ್ ಬಳಸಬಹುದು, ಮತ್ತು ಯಾರನ್ನಾದರೂ ಭೇಟಿ ಮಾಡಬಹುದು. ಆದರೆ, ಈ ಎಲ್ಲ ಚಟುವಟಿಕೆಗಳು ಪೊಲೀಸ್ ಕಣ್ಗಾವಲಿನಲ್ಲಿ ಇರುತ್ತವೆ.
ಪೊಲೀಸರ ಭದ್ರತೆ ಮತ್ತು ನಿರಂತರ ಮೇಲ್ವಿಚಾರಣೆ
ದೂರುದಾರನಿಗೆ ಇಷ್ಟೆಲ್ಲಾ ಸ್ವಾತಂತ್ರ್ಯ ಸಿಕ್ಕಿದ್ದರೂ, ಆತನಿಗೆ ನಾಲ್ಕು ಮಂದಿ ಪೊಲೀಸರ ಭದ್ರತೆ ನೀಡಲಾಗಿದೆ. ಅಲ್ಲದೆ, ಆತನ ಫೋನ್ ಡಿಟೇಲ್ಸ್ ಮತ್ತು ಭೇಟಿಯಾದವರ ಕುರಿತ ಎಲ್ಲ ದಾಖಲೆಗಳನ್ನು ಪೊಲೀಸರು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಇದರಿಂದ ತನಿಖೆಗೆ ಬೇಕಾದ ಮಾಹಿತಿಗಳು ಕೈತಪ್ಪಿ ಹೋಗದಂತೆ ನೋಡಿಕೊಳ್ಳಲಾಗುತ್ತದೆ. ಹೀಗಾಗಿ, ದೂರುದಾರನಿಗೆ ನೀಡಲಾಗಿರುವ ಫ್ರೀಡಂ ಪ್ರಶ್ನಾರ್ಹವಲ್ಲ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಈ ಪ್ರಕರಣದ ತನಿಖೆ ನಿರ್ಣಾಯಕ ಹಂತದಲ್ಲಿ ಇರುವುದರಿಂದ, ದೂರುದಾರನಿಗೆ ಸುರಕ್ಷತೆ ಮತ್ತು ಸಹಕಾರ ಎರಡೂ ಮುಖ್ಯವಾಗಿದೆ. ಈ ಕಾರಣಕ್ಕಾಗಿಯೇ ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅಡಿಯಲ್ಲಿ ಆತನನ್ನು ಇರಿಸಲಾಗಿದೆ.
