ಅನಾಮಿಕ ತೋರಿದ ಪಾಯಿಂಟ್ 13ರ ಶೋಧ ಕಾರ್ಯಕ್ಕೆ ಬೇಕು 2 ಇಲಾಖೆಯ ಒಪ್ಪಿಗೆ
ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ನೂರಾರು ಶವಗಳ ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿ ತೋರಿಸಿದ 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಯಲಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡದ ಮೇಲಿನ ಹಲ್ಲೆ ಪ್ರಕರಣ ಸೇರಿದಂತೆ ಹಲವು ಘಟನೆಗಳ ಬಗ್ಗೆಯೂ ತನಿಖೆ ಮುಂದುವರೆದಿದೆ.

ಅನಾಮಿಕ ತೋರಿಸಿದ ಸ್ಥಳದಲ್ಲಿ ಶೋಧ ಕಾರ್ಯ
ಧರ್ಮಸ್ಥಳ ಗ್ರಾಮದ ಪರಿಸರದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತನಿಖೆಯನ್ನು ನಡೆಸುತ್ತಿದೆ. ನೇತ್ರಾವತಿ ನದಿ ದಡದ ಅರಣ್ಯ ಭಾಗದಲ್ಲಿ ಅನಾಮಿಕ ತೋರಿಸಿದ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಬೇಕು 2 ಇಲಾಖೆಗಳ ಒಪ್ಪಿಗೆ
ಮಾಸ್ಕ್ ಧರಿಸಿ ಬಂದಿರುವ ಅನಾಮಿಕ ಒಟ್ಟು 13 ಸ್ಥಳಗಳನ್ನು ತೋರಿಸಿದ್ದನು. ಇಂದು ಕೊನೆಯ 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ 13ನೇ ಪಾಯಿಂಟ್ ನೇತ್ರಾವತಿ ಕಿಂಡಿ ಆಣೆಕಟ್ಟು ಪಕ್ಕದಲ್ಲಿದೆ. ಹಾಗಾಗಿ ಈ ಶೋಧ ಕಾರ್ಯ ನಡೆಸಲು ಎಸ್ಐಟಿ ತಂಡ 2 ಇಲಾಖೆಗಳ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ.
13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ
ನೀರಾವರಿ ಮತ್ತು ಮೆಸ್ಕಾಂ ಇಲಾಖೆಯ ಒಪ್ಪಿಗೆ ಪಡೆದುಕೊಳ್ಳಲು ಎಸ್‌ಐಟಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಎರಡೂ ಇಲಾಖೆ ಅಧಿಕಾರಿಗಳು ಜೊತೆಯಲ್ಲಿ ಎಸ್‌ಐಟಿ ಮಾತುಕತೆಯನ್ನು ನಡೆಸಿದೆ. ಎರಡೂ ಇಲಾಖೆಗಳು ಒಪ್ಪಿಗೆ ಕೊಟ್ಟರೆ ಮಾತ್ರ ಇಂದು 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಯಲಿದೆ. ಬುಧವಾರ ಎಸ್‌ಐಟಿ ತಂಡ ನಿರ್ಗಮಿಸಿದ ಬಳಿಕ ಗಲಾಟೆ ನಡೆದಿತ್ತು.
ಪೊಲೀಸ್ ಭದ್ರತೆ ಹೆಚ್ಚಳ
ಈ ಹಿನ್ನೆಲೆ ಇಂದು ಧರ್ಮಸ್ಥಳ, ನೇತ್ರಾವತಿ ಭಾಗದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬುಧವಾರ ನಡೆದ ಗಲಾಟೆ ಸಂಬಂಧ ಧರ್ಮಸ್ಥಳ, ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಧರ್ಮಸ್ಥಳ ಠಾಣೆ, ಉಜಿರೆ ಆಸ್ಪತ್ರೆ ಎದುರು ಜನ ಜಮಾವಣೆ ಆದ ಬಗ್ಗೆಯೂ ಪೊಲೀಸರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದ..ಕ ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡದ ಮೇಲೆ ಹಲ್ಲೆ
ಉಜಿರೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡದ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಎಂ.ಡಿ, ಜಯಂತ್ ಟಿ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬುಧವಾರ ರಾತ್ರಿ ಉಜಿರೆಯ ಬೆನಕ ಆಸ್ಪತ್ರೆ ಆವರಣದಲ್ಲಿ ವರದಿಗೆ ತೆರಳಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾತ್ತು.
ಎಫ್ಐಆರ್ ದಾಖಲು
ಧರ್ಮಸ್ಥಳದಲ್ಲಿ ನಾಲ್ವರು ಯೂ ಟ್ಯೂಬರ್ಸ್ ಮೇಲೆ ನಡೆದಿದ್ದ ಹಲ್ಲೆ ವಿಚಾರದಲ್ಲಿ ವರದಿಗಾಗಿ ಆಸ್ಪತ್ರೆ ಬಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ತೆರಳಿತ್ತು. ಈ ವೇಳೆ ಸುವರ್ಣ ನ್ಯೂಸ್ ವರದಿಗಾರ ಹರೀಶ್ ಹಾಗೂ ಕ್ಯಾಮರಾಮೆನ್ ನವೀನ್ ಪೂಜಾರಿ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ವರದಿಗಾರ ಹರೀಶ್ ದೂರು ನೀಡಿದ್ದರು. ಬಿಎನ್ಎಸ್ 115(2), 189(2), 191(2), 351(2), 352, 190 ಸೆಕ್ಷನ್ ಗಳಡಿ ಎಫ್ಐಆರ್ ದಾಖಲಾಗಿದೆ.