ನಟ ದರ್ಶನ್ ಅವರ ಮನವಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ.ವರದರಾಜು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬೆಂಗಳೂರು (ಅ.15): ನಟ ದರ್ಶನ್ ಅವರ ಮನವಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ.ವರದರಾಜು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕಾರಾಗೃಹಕ್ಕೆ ಭೇಟಿ ನೀಡಿದ್ದ ಅವರು ವಿಶೇಷ ಭದ್ರತಾ ವಿಭಾಗದಲ್ಲಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಸೆಲ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಈ ವೇಳೆ ಅ‍ವರಿಗೆ ಕಾರಾಗೃಹ ನಿಯಾಮಾವಳಿ ಅನುಸಾರ ಕಲ್ಪಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಅಲ್ಲದೆ, ದರ್ಶನ್ ಅವರಿಂದ ಕೂಡ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಕಾನೂನು ಸೇವೆಗಳ ಪ್ರಾಧಿಕಾರ ವರದಿ ಸಲ್ಲಿಸುವ ಸಾಧ್ಯತೆಗಳಿದ್ದು, ಇದನ್ನು ಪರಿಶೀಲಿಸಿ ಕಾರಾಗೃಹ ಅಧಿಕಾರಿಗಳ ವಿರುದ್ಧ ದರ್ಶನ್‌ ಅವರಿಗೆ ಸಲ್ಲಿಸಿರುವ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪ ಬಗ್ಗೆ ನ್ಯಾಯಾಲಯ ಅಂತಿಮ ತೀರ್ಪು ನೀಡಬಹುದು ಎನ್ನಲಾಗಿದೆ.

ನ್ಯಾಯಾಲಯದ ಆದೇಶ ಹೊರತಾಗಿಯೂ ತಮಗೆ ಕನಿಷ್ಠ ಸೌಲಭ್ಯ ನೀಡದೆ ಕಾರಾಗೃಹ ಅಧಿಕಾರಿಗಳು ಕಡೆಗಣಿಸಿದ್ದು, ಈ ಬಗ್ಗೆ ನ್ಯಾಯಾಧೀಶರು ಖದ್ದು ಪರಿಶೀಲಿಸುವಂತೆ ದರ್ಶನ್ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ ಎಸಿಎಂಎ ನ್ಯಾಯಾಲಯ, ಈ ಬಗ್ಗೆ ದರ್ಶನ್ ಅವರ ಸೆಲ್ ಪರಿಶೀಲಿಸಿ ವರದಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪರಿಶೀಲಿಸಿದ್ದಾರೆ.

ಉಗ್ರರಿಗಿಂತ ಕಡೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಅವರನ್ನು ಬಂಧಿಸಿಟ್ಟಿರುವ ಸೆಲ್‌ ಪಕ್ಕದಲ್ಲಿಯೇ ಪಾಕಿಸ್ತಾನದ ಉಗ್ರರ ಸೆಲ್‌ ಇದೆ. ಉಗ್ರರಿಗೆ ಕೇರಂ ಬೋರ್ಡ್‌ ಹಾಗೂ ಟಿವಿ ಸೇರಿದಂತೆ ಎಲ್ಲಾ ಐಷಾರಾಮಿ ಸೌಲಭ್ಯ ನೀಡಿದ್ದಾರೆ. ಆದರೆ, ನಟ ದರ್ಶನ್‌ಗೆ ಮಾತ್ರ ಹಾಸಿಗೆ, ಹೊದಿಕೆ ಮತ್ತು ತಲೆದಿಂಬು ನೀಡುತ್ತಿಲ್ಲ. ಹೀಗೆಂದು ನಟ ದರ್ಶನ್ ಪರ ವಕೀಲ ಎಸ್‌.ಸುನೀಲ್‌ ಕುಮಾರ್‌ ಬುಧವಾರ ನ್ಯಾಯಾಲಯದ ಮುಂದೆ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.

ನ್ಯಾಯಾಲಯ ಆದೇಶ ನೀಡಿದ್ದರೂ ದರ್ಶನ್‌ ಅವರಿಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯವನ್ನು ಜೈಲಧಿಕಾರಿಗಳು ಕಲ್ಪಿಸುತ್ತಿಲ್ಲ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಹೂಡಲು ಶಿಫಾರಸು ಮಾಡಬೇಕು ಎಂದು ಕೋರಿ ದರ್ಶನ್‌ ಪರ ವಕೀಲರು ನಗರದ 64ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ಕೋರ್ಟ್‌ಗೆ ಮೆಮೊ ಸಲ್ಲಿಸಿದ್ದಾರೆ. ಈ ಕುರಿತು ನ್ಯಾಯಾಧೀಶ ಐ.ಪಿ. ನಾಯ್ಕ್‌ ಅವರು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಜೈಲು ಅಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ದರ್ಶನ್‌ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.