ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ ಮೊದಲ ಕೋವಿಡ್ ಸಾವು ದಾಖಲಾಗಿದೆ. 85 ವರ್ಷದ ವೃದ್ಧರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 38 ಸಕ್ರಿಯ ಪ್ರಕರಣಗಳಿದ್ದು, ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ತೆಗೆದುಕೊಂಡಿದೆ.

ಬೆಂಗಳೂರು (ಮೇ 25): ರಾಜ್ಯದಲ್ಲಿ ಕೋವಿಡ್-19 ಆತಂಕ ಮರಳಿ ತಲೆದೋರಿದೆ. ಇಂದಿನ ದಿನದ ವರದಿಯಂತೆ ರಾಜ್ಯದಲ್ಲಿ 5 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ ಕೊರೊನಾದಿಂದ ಇದೇ ಮೊದಲ ಬಾರಿಗೆ ಒಂದು ಸಾವು ಪ್ರಕರಣ ದೃಢಪಟ್ಟಿದೆ. 85 ವರ್ಷದ ವೃದ್ಧರು ಉಸಿರಾಟದ ತೊಂದರೆ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಈ ಸಾವಿಗೆ ಸಂಬಂಧಿಸಿದಂತೆ ಸಂಪೂರ್ಣ ಆಡಿಟ್ ವರದಿ ಕೇಳಿದ್ದು, ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ.

ರಾಜ್ಯದಲ್ಲಿ ಸದ್ಯ 38 ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 32 ಕೇಸ್‌ಗಳು ಬೆಂಗಳೂರಿನಲ್ಲಿ ಹಾಗೂ 1 ಪ್ರಕರಣ ಬೆಂಗಳೂರು ಗ್ರಾಮಾಂತರದಲ್ಲಿ ದೃಢಪಟ್ಟಿದೆ. ಇಂದು ಬೆಂಗಳೂರಿನ ಮಲ್ಲೇಶ್ವರಂ ಹಾಗೂ ರಾಜಾಜಿನಗರದಲ್ಲಿ ಇಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಇಬ್ಬರಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂಬುದು ಆರೋಗ್ಯ ಇಲಾಖೆಗೆ ಆತಂಕದ ವಿಷಯವಾಗಿದೆ. ಈಗಾಘಲೇ ಮೊದಲ ಎರಡು ಅಲೆಗಳ ಅನುಭವದಿಂದ ಪಾಠ ಕಲಿತ ಆರೋಗ್ಯ ಇಲಾಖೆ ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಈ ನಡುವೆ, ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಕೂಡಾ ಸೋಂಕು ಮರುಬರುವ ಲಕ್ಷಣಗಳು ಕಂಡುಬಂದಿದ್ದು, ನಮ್ಮ ರಾಜ್ಯದಲ್ಲಿಯೂ ಕೂಡ ಸರ್ಕಾರ ಹೆಚ್ಚಿನ ಮುಂಜಾಗ್ರತೆ ವಹಿಸಲು ಕ್ರಮಕೈಗೊಳ್ಳುತ್ತಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ:

'ಈಗಾಗಲೇ ರಾಜ್ಯದಾದ್ಯಂತ ಹೆಚ್ಚಿನ ಕೋವಿಡ್ ಟೆಸ್ಟಿಂಗ್ ಆರಂಭಿಸಿದ್ದೇವೆ. ನಾಳೆಯಿಂದ ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಹೊಸ ಟೆಸ್ಟಿಂಗ್ ಕಿಟ್‌ಗಳನ್ನು ತಲುಪಿಸಲಾಗುತ್ತದೆ. ವಿಶೇಷವಾಗಿ SARI ರೋಗಿಗಳಿಗೆ ಮತ್ತು ವಯೋವೃದ್ಧರು ಹಾಗೂ ಮಕ್ಕಳಲ್ಲಿ ILI ಲಕ್ಷಣಗಳು ಕಂಡುಬಂದರೆ ಕೂಡಲೇ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿಯೊಂದು ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ 150-200 ಕೋವಿಡ್ ಟೆಸ್ಟ್ ನಡೆಸುವಂತೆ ಸೂಚನೆ ನೀಡಲಾಗಿದೆ. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಲಿದೆ. ಈ ನಡುವೆ ಸರ್ಕಾರ ಲಾಕ್‌ಡೌನ್ ಕುರಿತಂತೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಅಂತರ್ ರಾಜ್ಯ ಪ್ರಯಾಣಿಕರ ಮೇಲೂ ನಿಗಾ:

ನಮ್ಮ ರಾಜ್ಯದ ನೆರೆ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಂತರ್ ರಾಜ್ಯ ಪ್ರಯಾಣಿಕರ ಮೇಲೆ ನಿಗಾವಹಿಸಲು ಆರೋಗ್ಯ ಇಲಾಖೆ ನಿರ್ಧಾರ ಕೈಗೊಂಡಿದೆ. ರಾಜ್ಯದ ಗಡಿಪ್ರದೇಶಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ವಿಸ್ತರಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸುವ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕು. ಈಗ ಎಲ್ಲ ಚಟುವಟಿಕೆಗಳನ್ನು ಮುಕ್ತವಾಗಿ ಮಾಡಬಹುದು. ಸಿಎಂ ಜೊತೆ ಕೂಡ ಒಂದು ಸುತ್ತಿನ ಮಾತುಕತೆ ಆಗಿದೆ. ಆಗ ಸಿಎಂ ಸಿದ್ದರಾಮಯ್ಯ ಅವರು ಕೂಡ ಕೋವಿಡ್ ನಿಯಂತ್ರಣ ತಪ್ಪದಂತೆ ಯಾವುದೇ ಕ್ರಮ ತೆಗೆದು ಕೊಳ್ಳದಕ್ಕೂ ಹಿಂದೆ ಹಾಕಬೇಡಿ. ಇದಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ಎಂದು ಕೂಡ ಹೇಳಿದ್ದಾರೆ. ಜೊತೆಗೆ, ಯಾವುದೇ ಕ್ರಮ ಕೈಗೊಂಡರೂ, ಕೋವಿಡ್ ಕುರಿತ ಯಾವುದೇ ಹೊಸ ವಿಚಾರ ಬಂದರೂ ತಮಗೆ ಮಾಹಿತಿ ತಿಳಿಸುವಂತೆ ಸೂಚಿಸಿದ್ದಾರೆ ಎಂದರು.

ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಪ್ರತಿನಿತ್ಯ ನಿತ್ಯ 150 ಕೋವಿಡ್ ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ. ತಾಂತ್ರಿಕಾ ಸಲಹಾ ಸಮಿತಿಯ ಅಭಿಪ್ರಾಯದಂತೆ 150 ರಿಂದ 200 ಕೋವಿಡ್ ಟೆಸ್ಟ್ ಗೆ ಸೂಚನೆ ನೀಡಲಾಗಿದೆ. ಪ್ರತಿ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ‌ ನೀಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಲಾಗಿದೆ. ಎಲ್ಲಾ SARI ರೋಗಿಗಳ ಸೋಂಕು ದೃಢ ಪಡಿಸಲು RT-PCR ಪರೀಕ್ಷೆಗೆ ಒಳಪಡಿಸಬೇಕು. ನಿಗದಿ ಪಡಿಸಿದ ಸರ್ಕಾರಿ ಪ್ರಯೋಗಾಲಯದಲ್ಲಿ ಸ್ಯಾಂಪಲ್ ಟೆಸ್ಟ್ ನೀಡಬೇಕು ಎಂದು ತಿಳಿಸಿದರು.

ಸರ್ಕಾರಿ ಆದೇಶದಲ್ಲಿ ಏನಿದೆ?

ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ RT-PCR ಕೋವಿಡ್-19 ರ ಪರೀಕ್ಷೆ ನಡೆಸಲು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯದಂತೆ ದಿನ ನಿತ್ಯ 150 ರಿಂದ 200 ಪರೀಕ್ಷೆಗೆ ನಿಗದಿಪಡಿಸಲಾಗಿದೆ. ಎಲ್ಲಾ SARI ಪ್ರಕರಣಗಳಲ್ಲಿ ಕೋವಿಡ್ ಸೋಂಕನ್ನು ಧೃಡ ಪಡಿಸಿಕೊಳ್ಳಲು RT-PCR ಪರೀಕ್ಷೆಗಾಗಿ ಮಾದರಿಯನ್ನು ನಿಗದಿ ಪಡಿಸಿರುವ ಪ್ರಯೋಗಾಲಯಗಳಿಗೆ ಸಲ್ಲಿಸುವುದು. ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗ ಶಾಲೆಗಳಲ್ಲಿಯೇ ನಡೆಸುವುದು ಹಾಗೂ ಲಭ್ಯವಿರುವ ಕೋವಿಡ್-19ರ ಪರೀಕ್ಷಾ ಕಿಟ್‌ ಗಳನ್ನು FIFO (First in First Out) ಮಾದರಿಯಲ್ಲಿ ಉಪಯೋಗಿಸಿ ಕೋವಿಡ್-19 ರ ಕಿಟ್ / ಪರಿಕರಗಳು ಅನುಪಯುಕ್ತವಾಗದಂತೆ ಕೋವಿಡ್-19ರ ಪರೀಕ್ಷೆಯನ್ನು ಈ ಕೆಳಕಂಡಂತೆ ಕ್ರಮವಹಿಸುವುದು.

1. ಎಲ್ಲಾ SARI (ದೀರ್ಘಕಾಲಿಕ ಆರೋಗ್ಯ ಸಮಸ್ಯೆ-ಉಸಿರಾಟ ಸಮಸ್ಯೆ) ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು.

2. ವಯೋವೃದ್ಧರಲ್ಲಿ, ಮಕ್ಕಳಲ್ಲಿ, ಗರ್ಭಿಣಿ ಸ್ತ್ರೀಯಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು.

3. ಅನುಬಂಧ-1ರಂತೆ ಕೋವಿಡ್-19ರ ಪರೀಕ್ಷಾ ಮಾದರಿಯನ್ನು ಪ್ರಯೋಗಶಾಲೆಗಳಿಗೆ ಅದೇ ದಿನ ತಲುಪುವಂತೆ ಕ್ರಮವಹಿಸುವುದು.