ಧರ್ಮಸ್ಥಳದ ಬಗ್ಗೆ ಕೆಲವರು ಷಡ್ಯಂತ್ರ ಮಾಡುತ್ತಿದ್ದು ನಮ್ಮ ನಿಲುವು ಧರ್ಮಸ್ಥಳದ ಪರ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.
ಹುಬ್ಬಳ್ಳಿ (ಆ.13): ಧರ್ಮಸ್ಥಳದ ಬಗ್ಗೆ ಕೆಲವರು ಷಡ್ಯಂತ್ರ ಮಾಡುತ್ತಿದ್ದು ನಮ್ಮ ನಿಲುವು ಧರ್ಮಸ್ಥಳದ ಪರ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು. ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಹಳ ಹಿಂದಿನಿಂದಲೂ ಹಿಂದೂ ಧರ್ಮದ ಬೇರುಗಳನ್ನು ಸಡಿಲುಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ. ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿಗಳು ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ್ದಾರೆ. ಇಡೀ ಜಗತ್ತು ಹಿಂದೂ ಧರ್ಮದ ಕಡೆಗೆ ತಿರುಗಿ ನೋಡುತ್ತಿರುವ ಸಂದರ್ಭದಲ್ಲಿ ಕೆಲವರು ಅದರ ವಿರುದ್ಧ ಷಡ್ಯಂತ್ರ ಮಾಡುತ್ತಿರುವುದು ಖಂಡನೀಯ. ಇದನ್ನು ಸಹಿಸಲು ಆಗುವುದಿಲ್ಲ. ನಾವು ಧರ್ಮಸ್ಥಳದ ಪರವಾಗಿಯೇ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮೀಸಲಾತಿ ಪ್ರಮಾಣ ಹೆಚ್ಚಿಸಿ ನಮಗೆ ಕೊಡಿ: ಬೇರೆ ಸಮುದಾಯದವರ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳುತ್ತಿಲ್ಲ. ಬೇರೆ ರಾಜ್ಯಗಳಂತೆ ಇಲ್ಲೂ ಮೀಸಲಾತಿ ಪ್ರಮಾಣ ಹೆಚ್ಚಿಸಿ ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಹೋರಾಟ ನಿರಂತರ ಎಂದು ಹೇಳಿದರು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಪ್ರತಿಭಟನೆ ನಡೆದಿದ್ದು, ಇನ್ನೊಂದೆಡೆ ಕಾನೂನು ಹೋರಾಟವೂ ಮುಂದುವರಿದಿದೆ. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ನಡೆದಿದೆಯೇ ಹೊರತು, ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳಿಲ್ಲ. ಆದರೆ, ದೇಶದ 10 ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಅದೇ ರೀತಿ ಇಲ್ಲೂ ಹೆಚ್ಚಿಸಿ ಕೊಡಿ ಎಂದು ಒತ್ತಾಯಿಸಲಾಗುತ್ತಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳಿಗೂ ಒಂದೇ ತೆರೆನಾದ ಮೀಸಲಾತಿ ಅನ್ವಯಿಸಿ ಜಾರಿಗೊಳಿಸಿದರೆ ಮಾತ್ರ ಅಖಂಡ ವೀರಶೈವ ಲಿಂಗಾಯತ ಸಮಾಜ ಒಂದು ಎಂಬ ಭಾವನೆ ಮೂಡಲು ಸಾಧ್ಯ ಎಂದು ಹೇಳಿದರು. ಒಳಪಂಗಡದ ಕೆಲವರಿಗೆ ಮಾತ್ರ ಮೀಸಲಾತಿ ದೊರೆತರೆ ಸಮಾನತೆ ಬರಲು ಸಾಧ್ಯವಿಲ್ಲ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸೇರಿಸಲಾಗಿದೆ. ಜಾತಿ ಜನಗಣತಿ ಸಂದರ್ಭದಲ್ಲಿ ಸಮಾಜದ ಬಂಧುಗಳು ಪಂಚಮಸಾಲಿ ಸಮುದಾಯ ಎಂದು ನಮೂದಿಸಬೇಕು ಎಂಬುದರ ಕುರಿತು 18 ಜಿಲ್ಲೆಗಳ ಮುಖಂಡರು, 80ಕ್ಕೂ ಹೆಚ್ಚು ಸ್ವಾಮೀಜಿಗಳು ಒಂದೆಡೆ ಸೇರಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀಗಳು ಸಮಾಜದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಗೌರವವಿದೆ. ಏನೇ ವಿವಾದ ಇದ್ದರೂ ಸಂಘಟನೆಯವರು ಕುಳಿತು ಮಾತನಾಡಿ ಪರಿಹರಿಸುತ್ತಾರೆ ಎಂದು ವಚನಾನಂದ ಶ್ರೀಗಳು ಹೇಳಿದರು. ಕೂಡಲಸಂಗಮ ಶ್ರೀಗಳ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಚನಾನಂದ ಶ್ರೀಗಳು, ರಾಜ್ಯದಲ್ಲಿನ ಬಹುತೇಕ ಮಠಗಳನ್ನು ನಮ್ಮ ಪಂಚಮಸಾಲಿ ಸಮುದಾಯ ದಾನ ಧರ್ಮಗಳ ಮೂಲಕ ಸಲಹುತ್ತಿದೆ. ರಾಜ್ಯದಲ್ಲಿ ನಮ್ಮದು ದೊಡ್ಡ ಸಮಾಜ. ಹೀಗಿರುವಾಗ ಇನ್ನೂ 100 ಪೀಠಗಳಾದರೂ ಅವುಗಳನ್ನು ಸಮಾಜದ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೊಷ್ಠಿಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ, ಕಾರ್ಯದರ್ಶಿ ಜಿ.ಜಿ. ದ್ಯಾವನಗೌಡ್ರ, ಡಾ. ಎಂ.ಎಂ. ನುಚ್ಚಿ ಸೇರಿದಂತೆ ಇತರರು ಇದ್ದರು.
