ಹಾಸನ ಜಿಲ್ಲೆ ಮೊಸಳೆಹೊಸಳ್ಳಿಯಲ್ಲಿ ಗಣಪತಿ ಮೆರವಣಿಗೆ ಮೇಲೆ ಲಾರಿ ಹರಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಮೈಸೂರು (ಸೆ.14): ಹಾಸನ ಜಿಲ್ಲೆ ಮೊಸಳೆಹೊಸಳ್ಳಿ ಬಳಿ ಗಣಪತಿ ಮೆರವಣಿಗೆ ಮೇಲೆ ಲಾರಿ ಹರಿದು ಮೃತಪಟ್ಟವರಿಗೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ. ಸರ್ಕಾರ ಸತ್ತವರ ಕುಟುಂಬದವರಿಗೆ ಪರಿಹಾರ ನೀಡುವುದು ಸಾವಿಗೆ ಸಮಾನ ಎಂದಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಈ ಅಪಘಾತದಲ್ಲಿ ಮಡಿದವರ ಕುಟುಂಬದವರಿಗೆ ನಿಯಮಾನುಸಾರ ₹5 ಲಕ್ಷ ಪರಿಹಾರ ಘೋಷಣೆ ಮಾಡಿದ್ದೇವೆ ಎಂದರು. ಬಿಜೆಪಿ ಅದನ್ನು ₹10 ಲಕ್ಷಕ್ಕೆ ಏರಿಸಬೇಕೆಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಅಧಿಕಾರದಲ್ಲಿದ್ದಾಗ ಹೆಚ್ಚು ಪರಿಹಾರ ಕೊಟ್ಟಿದ್ರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಹಾಸನ ದುರಂತ: ಗಣೇಶ ವಿಸರ್ಜನೆ ವೇಳೆ ಲಾರಿ ಅಪಘಾತ, ಬಡ ಕುಟುಂಬಕ್ಕೆ ಇನ್ನಷ್ಟು ನೆರವು ಕೊಡಿ -ಆರ್ ಅಶೋಕ್

ಸತ್ತವರು ಹೆಚ್ಚಾಗಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಾಗಿದ್ದಾರೆ. ಹಾಗಾಗಿ, ಸರ್ಕಾರ ಹೆಚ್ಚಿನ ಪರಿಹಾರ ನೀಡುವುದೇ ಎಂಬ ಪ್ರಶ್ನಿಸಿದಾಗ, ಸರ್ಕಾರ ಐದು ಲಕ್ಷ ಪರಿಹಾರ ನೀಡಿದೆ. ಮೃತರ ಕುಟುಂಬದವರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದೇ ಪರಿಹಾರ ನೀಡಿದೆ. ನಾವು ಹಣ ಕೊಟ್ಟ ಕೂಡಲೇ ಸತ್ತವರು ವಾಪಸ್‌ ಬರುವುದಿಲ್ಲ. ಕುಟುಂಬದವರ ನೆರವಿಗೆ ಹಣ ಕೊಡುತ್ತೇವೆ ಅಷ್ಟೇ ಎಂದು ತಿಳಿಸಿದರು.

ಮೃತರ ಕುಟುಂಬದವರಿಗೆ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ ಅವರು, ಹಾಸನ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಮೃತರ ಸಂಬಂಧಿಕರನ್ನು ಭೇಟಿ ಮಾಡಿ ಪರಿಹಾರ ಘೋಷಣೆ ಮಾಡುವಂತೆ ಸೂಚಿಸಿದ್ದೇನೆ ಎಂದರು.---

ಸರ್ಕಾರ ರಸ್ತೆ ಸುರಕ್ಷತಾ ಕಾನೂನು ಜಾರಿ ಮಾಡಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಚಾಲಕನ ತಪ್ಪಿನಿಂದ ಅಪಘಾತವಾಗಿದೆ. ಅದಕ್ಕೆ ಸರ್ಕಾರ ಹೇಗೆ ಹೊಣೆಯಾಗಲು ಸಾಧ್ಯ?-ಸಿದ್ದರಾಮಯ್ಯ, ಮುಖ್ಯಮಂತ್ರಿ