ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಬೆಂಗಳೂರಿನಲ್ಲಿ ಶೂನ್ಯ ಎಫ್‌ಐಆರ್ ದಾಖಲಾಗಿದೆ. ಅಖಿಲ ಭಾರತ ವಕೀಲರ ಸಂಘದ ದೂರಿನ ಮೇರೆಗೆ ದಾಖಲಾದ ಈ ಪ್ರಕರಣವನ್ನು ತನಿಖೆಗಾಗಿ ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗುವುದು.
ಬೆಂಗಳೂರು (ಅ.9): ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಘಟನೆ ಸಂಬಂಧ ವಕೀಲ ರಾಕೇಶ್ ಕಿಶೋರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.
ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಭಕ್ತವತ್ಸಲ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 132 ಹಾಗೂ 133ರ ಅಡಿ ಪ್ರಕರಣ ದಾಖಲಿಸಲಾಗಿದೆ. ಘಟನೆ ದೆಹಲಿಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಲಾಗಿದೆ. ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಈ ಎಫ್‌ಐಆರ್ ಅನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ವಕೀಲರು ಹಾಗೂ ದಲಿತ ಪರ ಸಂಘನೆ ಸೇರಿ ವಿವಿಧ ಸಂಘಟನೆಗಳ ಮುಖಂಡರು ವಕೀಲ ರಾಕೇಶ್ ಕಿಶೋರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ವಿಧಾನಸೌಧ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಸುಪ್ರೀಂ ಕೋರ್ಟ್ ಹಾಲ್‌ನಲ್ಲಿ ವಕೀಲ ರಾಕೇಶ್ ಕಿಶೋರ್ ಎಂಬಾತ
ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಕೀಲ ಭಕ್ತವತ್ಸಲ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
