ಚಿತ್ತಾಪುರದಲ್ಲಿ ನವೆಂಬರ್ 2 ರಂದು ಆರ್‌ಎಸ್‌ಎಸ್ ಹಮ್ಮಿಕೊಂಡಿರುವ ಪಥಸಂಚಲನಕ್ಕೆ ಭೀಮ್ ಆರ್ಮಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆರ್‌ಎಸ್‌ಎಸ್‌ನ ನೋಂದಣಿ ಪ್ರಶ್ನಿಸಿರುವ ಭೀಮ್ ಆರ್ಮಿ, ಅದೇ ದಿನ ತಮಗೂ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದು, ಇದು ಸ್ಥಳೀಯವಾಗಿ ಸಂಘರ್ಷಕ್ಕೆ ಕಾರಣವಾಗಬಹುದು.

ಕಲಬುರಗಿ (ಅ.21): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನವೆಂಬರ್ 2 ರಂದು ಚಿತ್ತಾಪುರದಲ್ಲಿ ಹಮ್ಮಿಕೊಂಡಿರುವ ಪಥಸಂಚಲನಕ್ಕೆ ಇದೀಗ ಭೀಮ್ ಆರ್ಮಿ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಭೀಮ್ ಆರ್ಮಿ ರಾಜ್ಯಾಧ್ಯಕ್ಷರಾದ ಎಸ್.ಎಸ್. ತವಡೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ, ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡದಂತೆ ಆಗ್ರಹಿಸಿದ್ದಾರೆ.

ಇದು ಚಿತ್ತಾಪುರದಲ್ಲಿ ಮತ್ತೆ ರಾಜಕೀಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ನಡುವಿನ ತಿಕ್ಕಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳ ನಂತರ ವಿವಾದದ ಕೇಂದ್ರಬಿಂದುವಾಗಿರುವ ಚಿತ್ತಾಪುರದಲ್ಲಿ, ಭೀಮ್ ಆರ್ಮಿ ತನ್ನದೇ ಆದ ನೆಲೆಯಲ್ಲಿ ಪ್ರತಿರೋಧ ವ್ಯಕ್ತಪಡಿಸಿದೆ.

ನೋಂದಣಿ ಮತ್ತು ನ್ಯಾಯಾಂಗದ ಪ್ರಶ್ನೆ:

ಎಸ್.ಎಸ್. ತವಡೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಆರ್‌ಎಸ್‌ಎಸ್ ಸಂಘಟನೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದಾರೆ. ನೋಂದಣಿ (Registration) ಇಲ್ಲದ ಆರ್‌ಎಸ್‌ಎಸ್ ಸಂಘಟನೆಗೆ ನೂರು ವರ್ಷದ ಸಂಭ್ರಮಾಚರಣೆ ಎಲ್ಲಿಂದ ಬಂತು? ನೋಂದಣಿ ಇಲ್ಲದ ಸಂಘಟನೆಯವರು ಬೆತ್ತ ಹಿಡಿದುಕೊಂಡು ಹೋಗಲು ಹೇಗೆ ಅನುಮತಿ ಕೊಡುತ್ತೀರಿ? ಎಂದು ಜಿಲ್ಲಾ ಆಡಳಿತದ ವಿರುದ್ಧ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ನವೆಂಬರ್ 2 ರಂದೇ ಚಿತ್ತಾಪುರದಲ್ಲಿ ನಮಗೂ ಫಥ ಸಂಚಲನಕ್ಕೆ ಅವಕಾಶ ಕೊಡಬೇಕು. ಆರ್‌ಎಸ್‌ಎಸ್ ನವರು ಸಚಿವ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಹೊರಟಿರುವುದಾಗಿಯೂ ಆರೋಪಿಸಿದ್ದಾರೆ.

ನಾವು ಭೀಮನ ಮಕ್ಕಳು, ಶಕ್ತಿ ಪ್ರದರ್ಶನಕ್ಕೆ ಬಿಡುವುದಿಲ್ಲ:

ಭೀಮ್ ಆರ್ಮಿ ಅಧ್ಯಕ್ಷ ತವಡೆ ಅವರು ತಮ್ಮ ಸಂಘಟನೆಯ ಬದ್ಧತೆಯನ್ನು ಸ್ಪಷ್ಟಪಡಿಸಿದ್ದಾರೆ. ನಾವು ಭೀಮನ ಮಕ್ಕಳು, ಆರ್‌ಎಸ್‌ಎಸ್ ನವರ ಶಕ್ತಿ ಪ್ರದರ್ಶನಕ್ಕೆ ನಾವು ಸುಮ್ಮನೆ ಬಿಡುವುದಿಲ್ಲ. ಇದರೊಂದಿಗೆ, ಆರ್‌ಎಸ್‌ಎಸ್ ಪಥಸಂಚಲನಕ್ಕೆ ನ್ಯಾಯಾಲಯದ ಮೂಲಕ ಅವಕಾಶ ನೀಡಿದರೂ ತಾವು ಸುಮ್ಮನಿರುವುದಿಲ್ಲ. ಒಂದು ವೇಳೆ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಕೋರ್ಟ್ ಅವಕಾಶ ಕೊಟ್ಟರೂ ಕೂಡ, ನಾವು ನ್ಯಾಯಾಂಗ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಈ ಬೆಳವಣಿಗೆಯು ಚಿತ್ತಾಪುರದಲ್ಲಿನ ಕಾನೂನು ಸುವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಹೇರುವ ಸಾಧ್ಯತೆಯಿದೆ. ಆಡಳಿತ ಮತ್ತು ಪೊಲೀಸ್ ಇಲಾಖೆಗಳು ಈ ಎರಡು ವಿಭಿನ್ನ ಬೇಡಿಕೆಗಳು ಮತ್ತು ಸಂಭಾವ್ಯ ಸಂಘರ್ಷದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಬಿಜೆಪಿಯವರು ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸುತ್ತಿರುವ ನಡುವೆಯೇ, ಭೀಮ್ ಆರ್ಮಿಯ ಈ ಸವಾಲು ಸ್ಥಳೀಯ ಪರಿಸ್ಥಿತಿಯನ್ನು ಇನ್ನಷ್ಟು ರಾಜಕೀಯ ರಂಗುಗೊಳಿಸಿದೆ. ನವೆಂಬರ್ 2 ರಂದು ಚಿತ್ತಾಪುರದಲ್ಲಿ ಶಾಂತಿ ಕಾಪಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ ಎಂಬುದನ್ನು ಸೂಚಿಸುತ್ತಿದೆ.