ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ ನಡೆಸುವ ವಿಚಾರವಾಗಿ ಆರ್‌ಎಸ್‌ಎಸ್‌ ಹಾಗೂ ಕಾಂಗ್ರೆಸ್‌-ದಲಿತ ಸಂಘಟನೆಗಳ ನಡುವೆ ನಡೆಯುತ್ತಿರುವ ಜಿದ್ದಾಜಿದ್ದಿನ ಹೋರಾಟ ತೀವ್ರ ಕುತೂಹಲ ಮೂಡಿಸಿದೆ.

ಕಲಬುರಗಿ : ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ ನಡೆಸುವ ವಿಚಾರವಾಗಿ ಆರ್‌ಎಸ್‌ಎಸ್‌ ಹಾಗೂ ಕಾಂಗ್ರೆಸ್‌-ದಲಿತ ಸಂಘಟನೆಗಳ ನಡುವೆ ನಡೆಯುತ್ತಿರುವ ಜಿದ್ದಾಜಿದ್ದಿನ ಹೋರಾಟ ತೀವ್ರ ಕುತೂಹಲ ಮೂಡಿಸಿದೆ. ನ.2ರಂದು ಪಥ ಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯಲಿದೆ.

ಈ ಮಧ್ಯೆ, ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ಕೊಡಬಾರದು ಎಂಬ ಅಭಿಯಾನ ಗಟ್ಟಿಯಾಗುತ್ತಿದೆ. ಸಂಘ ಪರಿವಾರದ ಪಥ ಸಂಚಲನಕ್ಕೆ ಅನುಮತಿ ನೀಡುವುದಾದರೆ ತಮಗೂ ಅಂದೇ, ಅದೇ ಜಾಗದಲ್ಲಿ, ಅದೇ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೊಡಿ ಎಂದು ಭೀಮ್‌ ಆರ್ಮಿ, ದಲಿತ ಪ್ಯಾಂಥರ್‌ ಜತೆಗೆ ಇದೀ ಇನ್ನೂ ಮೂರು ಸಂಘಟನೆಗಳು ಬೇಡಿಕೆ ಇಟ್ಟಿವೆ. ಗೊಂಡ-ಕುರುಬ ಸಂಘದವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಅನುಮತಿ ನೀಡಿದರೆ, ಅಂದು ಚಿತ್ತಾಪುರದಲ್ಲಿ ಹೋರಾಟ ನಡೆಸುತ್ತೇವೆ, ಅದಕ್ಕೂ ಅನುಮತಿ ಕೊಡಬೇಕು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯವರು ತಿಳಿಸಿದ್ದಾರೆ.

ಇದೇ ವೇಳೆ, ತಮಗೂ ಕೂಡ ‘ಪ್ರೇಯರ್‌ ವಾಕ್‌’ ನಡೆಸಲು ಅನುಮತಿ ಕೊಡಬೇಕು ಎಂದು ಇಂಡಿಯನ್‌ ಕ್ರಿಶ್ಚಿಯನ್‌ ವೆಲ್‌ಫೇರ್‌ ಅಸೋಸಿಯೇಷನ್‌ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.ಹೈಕೋರ್ಟ್‌ನಲ್ಲಿಂದು ವಿಚಾರಣೆ:ನ.2ರಂದು ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಅನುಮತಿ ಕೋರಿ ಆರ್‌ಎಸ್‌ಎಸ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ನಡೆಯಲಿದೆ. ಅ.19ರಂದು ಪಥ ಸಂಚಲನ ನಡೆಸಲು ಚಿತ್ತಾಪುರ ತಹಸೀಲ್ದಾರ್‌ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕಲಬುರಗಿ ಹೈಕೋರ್ಟ್‌ ಪೀಠದ ಸೂಚನೆಯಂತೆ ಆರ್‌ಎಸ್‌ಎಸ್‌ ನ.2ರ ಹೊಸ ದಿನ ನಿಗದಿ ಮಾಡಿ, ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು.

ಇದೇ ವೇಳೆ, ಆರ್‌ಎಸ್‌ಎಸ್‌ ಕಾರ್ಯಕರ್ತರು, ‘ಎಲ್ಲರ ಕಣ್ಣು ಚಿತ್ತಾಪುರದತ್ತ’ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಹಮ್ಮಿಕೊಂಡಿದ್ದು, ಅನುಮತಿ ಸಿಕ್ಕರೆ ನ.2ರ ಪಥ ಸಂಚಲನಕ್ಕೆ ಕನಿಷ್ಟ 25 ಸಾವಿರ ಗಣವೇಷಧಾರಿಗಳನ್ನು ಸೇರಿಸುವ ಮೂಲಕ ಪಥ ಸಂಚಲನವನ್ನು ಅದ್ಧೂರಿಯಾಗಿ ನಡೆಸಲು ಮುಂದಾಗಿದ್ದಾರೆ.

ಈ ಮಧ್ಯೆ, ಅದೇ ದಿನ, ಅದೇ ಸಮಯ, ಅದೇ ಮಾರ್ಗದಲ್ಲಿ ಮೆರವಣಿಗೆ ನಡೆಸಲು ನಮಗೂ ಅವಕಾಶ ಕೊಡಿ ಎಂದು ಕೋರಿ ಭೀಮ್‌ ಆರ್ಮಿ, ದಲಿತ ಪ್ಯಾಂಥರ್‌, ಗೊಂಡ-ಕುರುಬ ಎಸ್ಟಿ ಹೋರಾಟ ಸಮಿತಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.

ಈ ಮಧ್ಯೆ, ಚಿತ್ತಾಪುರದಲ್ಲಿ ನ.2ರಂದು ದೇಶದ ಒಳಿತಿಗಾಗಿ, ಸಾಮರಸ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ಇಂಡಿಯನ್‌ ಕ್ರಿಶ್ಚಿಯನ್‌ ವೆಲ್‌ಫೇರ್‌ ಅಸೋಸಿಯೇಷನ್‌ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಪ್ರಾರ್ಥನೆಯಲ್ಲಿ ಸುಮಾರು 2 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಮನವಿಯಲ್ಲಿ ತಿಳಿಸಿದೆ. ಅಲ್ಲದೆ, ಅಂದೇ ಬೆಳಗ್ಗೆ 11ಕ್ಕೆ ಆರ್‌ಎಸ್‌ಎಸ್‌ ಪಥ ಸಂಚಲನ ವಿರೋಧಿಸಿ, ಸಾವಿರಾರು ಸಂಖ್ಯೆಯ ರೈತರು ಸೇರಿ ಹಸಿರು ಶಾಲು, ಬಾರುಕೋಲುವಿನೊಂದಿಗೆ ಪ್ರತಿಭಟನಾ ಪಥ ಸಂಚಲನ ನಡೆಸಲಿದ್ದೇವೆ. ಇದಕ್ಕೆ ಅನುಮತಿ ಕೊಡಿ ಎಂದು ರೈತ ಸಂಘದ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.