ಚಾಮರಾಜನಗರದಲ್ಲಿ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯ ವಿರುದ್ಧ ಬಲಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಒಟ್ಟಾಗಿ ಸೇರಿ ವರದಿಯಿಂದ ತಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಚಾಮರಾಜನಗರ (ಆ.13): ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯ ವಿರುದ್ಧ ಬಲಗೈ ಸಮುದಾಯದ ಆಕ್ರೋಶ ಹೆಚ್ಚಾಗಿದ್ದು, ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಲಗೈ ಸಮುದಾಯಕ್ಕೆ ಈ ವರದಿಯಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ, ಸಮುದಾಯದ ನ್ಯಾಯಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಒಗ್ಗೂಡಿರುವುದು ವಿಶೇಷವಾಗಿತ್ತು.

ಪ್ರತಿಭಟನೆಯಲ್ಲಿ ಕೊಳ್ಳೇಗಾಲ ಕಾಂಗ್ರೆಸ್ ಶಾಸಕ ಎ.ಆರ್. ಕೃಷ್ಣಮೂರ್ತಿ ಮತ್ತು ಮಾಜಿ ಬಿಜೆಪಿ ಸಚಿವ ಎನ್. ಮಹೇಶ್ ಭಾಗವಹಿಸಿರುವುದು ಈ ವಿಷಯದ ಗಂಭೀರತೆಯನ್ನು ತೋರಿಸಿದೆ. ಚಾಮರಾಜನಗರದ ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಇಬ್ಬರೂ ನಾಯಕರು ಒಟ್ಟಿಗೆ ಹೆಜ್ಜೆ ಹಾಕಿ, ತಮ್ಮ ಸಮುದಾಯದ ಪರವಾಗಿ ಧ್ವನಿ ಎತ್ತಿದರು.

ಪ್ರತಿಭಟನೆಯಲ್ಲಿ ನ್ಯಾ. ನಾಗಮೋಹನ್‌ದಾಸ್ ವರದಿಯ ವಿರುದ್ಧ ಘೋಷಣೆಗಳು ಮೊಳಗಿದವು. ಈ ವರದಿಯು ಅವೈಜ್ಞಾನಿಕವಾಗಿದೆ ಮತ್ತು ಬಲಗೈ ಸಮುದಾಯಕ್ಕೆ ಭಾರೀ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಯಾವುದೇ ಕಾರಣಕ್ಕೂ ಈ ವರದಿಯನ್ನು ಜಾರಿಗೊಳಿಸಬಾರದು ಮತ್ತು ಅದನ್ನು ಪರಿಷ್ಕರಿಸಬೇಕು ಎಂದು ನಾಯಕರು ಆಗ್ರಹಿಸಿದರು. ಈ ಬೆಳವಣಿಗೆಯು ಒಳಮೀಸಲಾತಿ ವರದಿಯು ರಾಜಕೀಯ ಪಕ್ಷಗಳನ್ನೂ ಮೀರಿ ಸಮುದಾಯಗಳ ಭಾವನೆಗಳನ್ನು ಕೆರಳಿಸಿದೆ ಎಂಬುದನ್ನು ಸೂಚಿಸುತ್ತದೆ. ಸರ್ಕಾರವು ಈ ಪ್ರತಿಭಟನೆಗಳನ್ನು ಹೇಗೆ ಪರಿಗಣಿಸುತ್ತದೆ ಮತ್ತು ಮುಂದಿನ ಕ್ರಮಗಳೇನು ಎಂಬುದನ್ನು ಕಾದು ನೋಡಬೇಕಿದೆ.

ಬಲಗೈ ಸಮುದಾಯದ ಅಂಕಿ-ಅಂಶ ಪರಿಷ್ಕರಣೆಗೆ ಆಗ್ರಹ:

ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ ಮಾತನಾಡಿ, ಈಗಾಗಲೇ ಬಲಗೈ ಸಮುದಾಯದ ಶಾಸಕರು ಹಲವು ಬಾರಿ ಸಮಾಲೋಚನೆ ಮಾಡಿದ್ದೇವೆ. ಇವತ್ತು ಸಹ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದೇವೆ. ನ್ಯಾ.ನಾಗಮೋಹನ್ ‌ದಾಸ್ ವರದಿ ಪರಿಷ್ಕರಿಸಲು ಮುಖ್ಯ ಮಂತ್ರಿಗಳನ್ನು ಒತ್ತಾಯ ಮಾಡ್ತೀವಿ. ರಾಜ್ಯದಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಆದರೆ ನ್ಯಾ.ನಾಗಮೋಹನ್ ದಾಸ್ ಕರಾರುವಾಕ್ ವರದಿ ಮಂಡಿಸಿಲ್ಲ. ಬಲಗೈ ಸಮುದಾಯವನ್ನು ವಿಂಗಡಣೆ ಮಾಡಿದ್ದಾರೆ. ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಎಡಗೈ ಸಮುದಾಯದ ಅಂಕಿ ಅಂಶದ ಬಗ್ಗೆ ನಮ್ಮ ವಿರೋಧ ಇಲ್ಲ. ಬಲಗೈ ಅಂಕಿ ಅಂಶ ಕಡಿಮೆ ಇರೋದ್ರಿಂದ ಪರಿಷ್ಕರಿಸಬೇಕು ಎಂದು ಆಗ್ರಹ ಮಾಡಿದರು.

ಒಳಮೀಸಲಾತಿ ಬಗ್ಗೆ ನಮ್ಮ ವಿರೋಧವಿಲ್ಲ-ಗೃಹ ಸಚಿವ ಪರಂ:

ಒಳಮೀಸಲಾತಿಗೆ ಬಗ್ಗೆ ನಿಮಗೆ ವಿರೋಧವಿದೆಯೇ ಎಂಬ ಬಗ್ಗೆ ಮಾತನಾಡಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಯಾವನ್ರೀ ಹೇಳಿದ್ದು. ನಾವೇ ಮಾಡಿ ನಮ್ಮನ್ನೆ ವಿರೋಧ ಮಾಡಿದ್ದಾರೆ ಅಂತಾ ಹೇಳಿದ್ರೆ.. ಹೇಳಿದ್ಯಾರೇಳಿ ನೊಡೋಣ.. ಯಾರು ಹೇಳಿದ್ರು ನಿಮಗೆ. ನಿಮಗೆ ಯಾರು ಮಾಹಿತಿ...ನಿಮಗೆ ಯಾರ್ ಹೇಳಿದರು. ಈ ರೀತಿ ಸಿಲ್ಲಿ‌ ಪ್ರಶ್ನೆ ಕೇಳಬೇಡಿ. ನಿಮಗೆ ಏನಾದ್ರೂ ಮಾಹಿತಿ ಇದ್ರೆ ಹೇಳಿ. ನೀವು ಪ್ರಶ್ನೆ ಕೇಳುವಾಗ ಸೋರ್ಸ್ ಇಟ್ಕೊಂಡು ಕೇಳಬೇಕು. ಸುಮ್ಮನೇ ಕೇಳೋದಲ್ಲಾ. ನಾವೇ ಆಯೋಗ ಮಾಡಿದಿವಿ. ನಾವೇ ಕ್ಯಾಬಿನೆಟ್ ಲ್ಲಿ ನಿರ್ಧಾರ ಮಾಡಿದ್ದೀವಿ. ನಾವೇ ಜಾರಿ ತರ್ತಿವಿ ಅಂತಾ ನೂರು ಭಾರಿ ಹೇಳಿದಿವಿ. ವಿರೋಧ ಇದೆ ಎಂದು ಹೇಳಿದ್ರೆ ಹೇಗೆ ಎಂದು ಕಿಡಿಕಾರಿದರು.