ಕರ್ನಾಟಕದಲ್ಲಿ ಮರು ಜಾತಿ ಜನಗಣತಿಯನ್ನು ಡಿಜಿಟಲ್‌ ಮೂಲಕ ನಡೆಸಲು ಸರ್ಕಾರ ಸೂಚನೆ ನೀಡಿದೆ. ವೋಟರ್ ಐಡಿ ಆಧಾರಿತ ಮಾದರಿಯನ್ನು ಬಳಸುವ ಸಾಧ್ಯತೆಗಳಿವೆ. ಒಳ ಮೀಸಲಾತಿ ವರದಿ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಮರು ಜಾತಿ ಜನಗಣತಿ ನಡೆಸುವ ಚಟುವಟಿಕೆ ಮತ್ತೆ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯ ಕಾರ್ಯವನ್ನು ಡಿಜಿಟಲ್ ವಿಧಾನದಲ್ಲಿ ನಡೆಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.

ಡಿಜಿಟಲ್ ವಿಧಾನವನ್ನು ಬಳಸಿಕೊಂಡು ಸಮೀಕ್ಷೆ ನಡೆಸಲು ಅಗತ್ಯವಾದ ತಂತ್ರಾಂಶದ ಅಭಿವೃದ್ಧಿ ಹಾಗೂ ಉಸ್ತುವಾರಿಯನ್ನು ಇ-ಆಡಳಿತ ಇಲಾಖೆಯ ಮೂಲಕ ಕೈಗೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ. ಇದರ ಮೂಲಕ ಸಮೀಕ್ಷೆ ಹೆಚ್ಚು ನಿಖರ ಹಾಗೂ ಸಮಯಬದ್ಧವಾಗಿ ನಡೆಯುವ ನಿರೀಕ್ಷೆ ಇದೆ.

ಈಗಾಗಲೇ, ಒಳ ಮೀಸಲಾತಿ ಸಮೀಕ್ಷೆಯಲ್ಲಿ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯು ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಆಧಾರಿತ ಮಾದರಿಯನ್ನು ಬಳಸಿತ್ತು. ಇದೇ ಮಾದರಿಯನ್ನು ಈಗ ಜಾತಿ ಜನಗಣತಿಯಲ್ಲಿಯೂ ಅಳವಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಚುನಾವಣಾ ಆಯೋಗದ ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಯನ್ನು ಬಳಸಿಕೊಂಡು ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.

ಈ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅಗತ್ಯವಿರುವ ರಾಜ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ಇಚ್ಛೆ ವ್ಯಕ್ತಪಡಿಸಿದೆ.

ಇದರ ಜೊತೆಗೆ, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದ ನಿರ್ಧಾರವನ್ನು ಇನ್ನೂ ಮುಂದೂಡಿರುವ ಸರ್ಕಾರ, ನ್ಯಾ. ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಸ್ವೀಕರಿಸಿ, ಈಗ ಇದಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ವರದಿಯಲ್ಲಿ ಒಟ್ಟೂ 17% ಒಳ ಮೀಸಲಾತಿ ಶಿಫಾರಸು ಮಾಡಲಾಗಿದ್ದು, ಅದನ್ನು ಐದು ವಿಭಿನ್ನ ಪ್ರವರ್ಗಗಳಾಗಿ ಹಂಚಲಾಗಿದೆ:

  • ಪ್ರವರ್ಗ-ಎ – 1%
  • ಪ್ರವರ್ಗ-ಬಿ – 6%
  • ಪ್ರವರ್ಗ-ಸಿ – 5%
  • ಪ್ರವರ್ಗ-ಡಿ – 4%
  • ಪ್ರವರ್ಗ-ಇ – 1%

ಇದರಲ್ಲಿ, ಪರಿಶಿಷ್ಟ ಎಡ ಸಮುದಾಯಕ್ಕೆ 6% ಹಾಗೂ ಪರಿಶಿಷ್ಟ ಬಲ ಸಮುದಾಯಕ್ಕೆ 5% ಮೀಸಲಾತಿಯನ್ನು ಶಿಫಾರಸು ಮಾಡಲಾಗಿದೆ.

ಇಲ್ಲಿಯವರೆಗೆ ಸರ್ಕಾರ ಈ ಕುರಿತಂತೆ ಅಂತಿಮ ತೀರ್ಮಾನ ಕೈಗೊಂಡಿಲ್ಲವಾದರೂ, ಸಮೀಕ್ಷೆ ಮತ್ತು ವರದಿ ಆಧಾರಿತವಾಗಿ ಮುಂದಿನ ಹಂತದ ಕ್ರಮ ನಿರ್ಧರಿಸುವ ಸಾಧ್ಯತೆ ಇದೆ.