ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ 35 ವರ್ಷದ ಕ್ಯಾನ್ಸರ್ ರೋಗಿ ಶ್ರೀನಿವಾಸ್ ಮೃತಪಟ್ಟಿದ್ದಾರೆ. ಸ್ಕ್ಯಾನಿಂಗ್‌ಗೆ ಕರೆದೊಯ್ಯುವಾಗ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದ್ದೇ ಸಾವಿಗೆ ಕಾರಣವೆಂದು ಆರೋಪಿಸಲಾಗಿದೆ.

ರಾಯಚೂರು(ಸೆ.18): ರಾಯಚೂರು ನಗರದ ಓಪೆಕ್ ಆಸ್ಪತ್ರೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕ್ಯಾನ್ಸರ್ ರೋಗಿಯೊಬ್ಬರು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಜಲಾಲನಗರದ 35 ವರ್ಷದ ಶ್ರೀನಿವಾಸ್ ಎಂಬಾತನ ಸಾವಿಗೆ ಆಸ್ಪತ್ರೆಯ ಸಿಬ್ಬಂದಿಯ ಗಂಭೀರ ಲೋಪವೇ ಕಾರಣ ಎಂದು ಆರೋಪಿಸಲಾಗಿದೆ.

ಓಪೆಕ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ:

ಕಳೆದ 3-4 ವರ್ಷಗಳಿಂದ ಅನ್ನನಾಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶ್ರೀನಿವಾಸ್, ಈ ಹಿಂದೆ ಓಪೆಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ ಆಕ್ಸಿಜನ್‌ನ ಮೇಲೆ ಜೀವ ಉಳಿಸಿಕೊಂಡಿದ್ದ ಶ್ರೀನಿವಾಸ್, ಇಂದು ಬೆಳಗ್ಗೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಚಿಕಿತ್ಸೆ ಆರಂಭಿಸಿದ್ದು, ಸಂಜೆ ವೇಳೆಗೆ ರಕ್ತನಾಳದ ಬ್ಲಾಕ್‌ ಶಂಕೆಯಿಂದ ಸ್ಕ್ಯಾನಿಂಗ್‌ಗಾಗಿ ವೈದ್ಯರು ಸೂಚಿಸಿದ್ದರು. ಈ ಹಿನ್ನೆಲೆ ರಿಮ್ಸ್ ಆಸ್ಪತ್ರೆಗೆ ರವಾನಿಸಲು ತೀರ್ಮಾನಿಸಿದ ಕುಟುಂಬಸ್ಥರು. ಆದರೆ, ಐಸಿಯು ವಾರ್ಡ್‌ನಿಂದ ಸ್ಕ್ಯಾನಿಂಗ್‌ಗೆ ಕರೆದೊಯ್ಯುವ ವೇಳೆ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದೆ. ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್‌ನ ತಪಾಸಣೆ ಮಾಡದೇ ಇದ್ದುದ್ದರಿಂದ ಈ ದುರಂತ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ವಿಜಯಪುರದ ಸಿಂದಗಿಯಲ್ಲಿ ಒಂದೇ ದಿನ ಐದು ಬಾರಿ ಕಂಪಿಸಿದ ಭೂಮಿ, ಜನರಲ್ಲಿ ಆತಂಕ!

ಇದೇ ವೇಳೆ, ಆಕ್ಸಿಜನ್ ಸಿಲಿಂಡರ್ ಸ್ಟೋರ್‌ನ ಕೀಲಿ ಸಿಗದೇ ಅಡೆಂಡರ್‌ಗಳು ಕಾಲಹರಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶ್ರೀನಿವಾಸ್‌ಗೆ ಉಸಿರಾಟದ ತೊಂದರೆ ತೀವ್ರವಾದ ಕಾರಣ ಮತ್ತೆ ಐಸಿಯುಗೆ ಶಿಫ್ಟ್ ಮಾಡಲಾಯಿತಾದರೂ, ಅಷ್ಟರೊಳಗಾಗಿ ಅವರು ಪ್ರಾಣಬಿಟ್ಟಿದ್ದರು.

ಓಪೆಕ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ:

ಶ್ರೀನಿವಾಸ್‌ರ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಅವರ ಪತ್ನಿ ಕಣ್ಣೀರಿಡುತ್ತಿದ್ದರೆ, ಎರಡು ವರ್ಷದ ಮಗು ತನ್ನ ತಂದೆಯ ಮೃತದೇಹದ ಮುಂದೆ 'ಅಪ್ಪ, ಅಪ್ಪ' ಎಂದು ಕರೆದು ಎಬ್ಬಿಸಲು ಯತ್ನಿಸುವ ದೃಶ್ಯ ಹೃದಯವಿದ್ರಾವಕವಾಗಿತ್ತು. ಕುಟುಂಬಸ್ಥರು ಶ್ರೀನಿವಾಸ್‌ರ ಸಾವಿಗೆ ಕಾರಣರಾದ ನರ್ಸ್ ಮತ್ತು ಅಡೆಂಡರ್‌ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಕ್ರಮಕ್ಕೆ ಒತ್ತಾಯ

ಈ ಘಟನೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಕುಟುಂಬದವರು ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಓಪೆಕ್ ಆಸ್ಪತ್ರೆಯ ಈ ನಿರ್ಲಕ್ಷ್ಯದಿಂದ ರೋಗಿಯೊಬ್ಬರ ಜೀವ ಉಳಿಯದಿರುವುದು ಆರೋಗ್ಯ ವ್ಯವಸ್ಥೆಯ ಗಂಭೀರ ಲೋಪವನ್ನು ಎತ್ತಿ ತೋರಿಸಿದೆ. ರಾಯಚೂರಿನ ಜನತೆ ಈ ಘಟನೆಯಿಂದ ಆಕ್ರೋಶಗೊಂಡಿದ್ದು, ಆಸ್ಪತ್ರೆಯ ಆಡಳಿತದಿಂದ ಸೂಕ್ತ ಉತ್ತರ ಮತ್ತು ಕ್ರಮಕ್ಕೆ ಕಾಯುತ್ತಿದ್ದಾರೆ.