ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಒಂದೇ ದಿನ ಐದು ಬಾರಿ ಭೂಕಂಪನ ಸಂಭವಿಸಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ್ದರಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. 

ವಿಜಯಪುರ (ಸೆ.18): ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ (ಸೆಪ್ಟೆಂಬರ್ 18, 2025) ಒಂದೇ ದಿನದಲ್ಲಿ ಐದು ಬಾರಿ ಭೂಕಂಪನದ ಅನುಭವವಾಗಿದೆ. ಮಧ್ಯಾಹ್ನ 3 ಗಂಟೆ, ರಾತ್ರಿ 10 ಗಂಟೆ 11 ನಿಮಿಷ, 10 ಗಂಟೆ 25 ನಿಮಿಷ, 10 ಗಂಟೆ 47 ನಿಮಿಷ ಮತ್ತು ಇನ್ನೊಮ್ಮೆ ರಾತ್ರಿಯ ವೇಳೆಯಲ್ಲಿ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಈ ಘಟನೆಯಿಂದ ಸಿಂದಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮನೆಮಾಡಿದೆ.

ಮನೆಗಳಿಂದ ಹೊರಗೆ ಓಡಿ ಬಂದ ಜನರು:

ಭೂಕಂಪನದ ಅನುಭವ ಆಗುತ್ತಿದ್ದಂತೆ ಸ್ಥಳೀಯರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದು, ಭೂಕಂಪನದ ತೀವ್ರತೆಯ ಬಗ್ಗೆ ತಕ್ಷಣವೇ ಮಾಹಿತಿ ಲಭ್ಯವಾಗಿಲ್ಲವಾದರೂ, ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ವರದಿಗಳು ಇದುವರೆಗೆ ಬಂದಿಲ್ಲ. ಅಧಿಕಾರಿಗಳು ಸ್ಥಿತಿಗತಿಯನ್ನು ಗಮನಿಸುತ್ತಿದ್ದು, ಜನರಿಗೆ ಶಾಂತವಾಗಿರಲು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚಿಸಿದ್ದಾರೆ.

ಹಿಂದೆಯೂ ಹಲವು ಬಾರಿ ಭೂಕಂಪನ:

ಕಳೆದ ಎರಡು ವರ್ಷಗಳ ಹಿಂದೆಯೂ ವಿಜಯಪುರ ಜಿಲ್ಲೆಯಲ್ಲಿ ಸರಣಿ ರೂಪದಲ್ಲಿ ಭೂಕಂಪನಗಳು ಸಂಭವಿಸಿದ್ದವು, ಇದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಕೆಲವು ಕುಟುಂಬಗಳು ಊರು ಬಿಟ್ಟು ಬೇರೆಡೆ ತೆರಳಿದ್ದರು. 2023 ರಲ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಪನಗಳು ಕಂಡುಬಂದಿದ್ದವು, ಆದರೆ ಗಮನಾರ್ಹ ಹಾನಿಯಾಗಿರಲಿಲ್ಲ. ಈಗ ಮತ್ತೆ ಸಿಂದಗಿಯಲ್ಲಿ ಒಂದೇ ದಿನದಲ್ಲಿ ಐದು ಬಾರಿ ಭೂಮಿ ಕಂಪಿಸಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.