ಮದ್ದೂರಿನಲ್ಲಿ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಓಲೈಕೆ ರಾಜಕೀಯ, ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಹಲವು ವಿಚಾರಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದ್ದೂರು (ಸೆ.11): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಓಲೈಕೆ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಗಣೇಶಮೂರ್ತಿ ಮೆರವಣಿಗೆ ಮೇಲೆ ಕಲ್ಲೆಸೆದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಿ ಎಂದು ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ ಸವಾಲು ಹಾಕಿದ್ದಾರೆ.

ಪಟ್ಟಣದಲ್ಲಿ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಪೊಲೀಸ್ ಠಾಣೆಯನ್ನು ಸುಡಲು ಹೋದ ಮುಸ್ಲಿಮರ ಮೇಲೆ ಕೇಸ್ ದಾಖಲು ಮಾಡಲು ಹಿಂಜರಿಯುತ್ತಾರೆ. ಕೇಸ್ ಹಾಕಿದ ಮೇಲೆ ವಾಪಸ್ ಪಡೆಯುತ್ತಾರೆ. ಇದು ಕಾನೂನು ಸುವ್ಯವಸ್ಥೆ ಕಾಪಾಡುವ ಸರ್ಕಾರ ಅಲ್ಲ. ಇದು ಜನ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

ಕಳೆದ ವರ್ಷ ನಾಗಮಂಗಲದಲ್ಲಿ ಗಣೇಶನ ಮೆರವಣಿಗೆ ವೇಳೆ ಗಲಾಟೆ ಮಾಡಿದರು. ಕೆರಗೋಡಿನಲ್ಲಿ ಹನುಮ ಧ್ವಜ ಹಾರಿಸಲು ಬಿಡಲಿಲ್ಲ. ನಮ್ಮ ಸ್ವಾತಂತ್ರ್ಯಕ್ಕೆ ಅಡಚಣೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ, ಕಲ್ಲು ತೂರಿದವರ ಮೇಲೆ ಪ್ರಕರಣ ದಾಖಲಿಸುವ ಬದಲು ನಾಟಕ ಆಡುತ್ತಿದೆ. ಇವರ ವಿರುದ್ಧ ಗೂಂಡಾ ಕಾಯಿದೆ ದಾಖಲಿಸುವುದನ್ನು ಬಿಟ್ಟು ಬಿಜೆಪಿ, ಜೆಡಿಎಸ್ ನಾಯಕರನ್ನು ಟೀಕಿಸುತ್ತಾರೆ. ಕಾಂಗ್ರೆಸ್‌ ನಾಯಕರು ಅಧಿಕಾರವನ್ನು ಸದ್ಭಳಕೆ ಮಾಡಿಕೊಳ್ಳದೆ ಜನರನ್ನೇ ಅಯ್ಯೋ ಎನ್ನಿಸುತ್ತಿದ್ದಾರೆ ಎಂದು ಕುಟುಕಿದರು.

ಈ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು. ನಿಮ್ಮ ತುಷ್ಟೀಕರಣ ರಾಜಕೀಯ ಹೆಚ್ಚು ದಿನ ನಡೆಯಲ್ಲ. ನಮ್ಮ ಆಚರಣೆಯನ್ನು ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು.