ಮದ್ದೂರಿನಲ್ಲಿ ನಡೆದ ಗಲಭೆ ನಿಯಂತ್ರಣಕ್ಕೆ ಬಂದಿದ್ದು, ಧರ್ಮ ಲೆಕ್ಕಿಸದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಈಗಾಗಲೇ 15 ಜನರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವವರ ಪತ್ತೆಗಾಗಿ ಶೋಧ ಮುಂದುವರೆದಿದೆ.

ತುಮಕೂರು: ಮದ್ದೂರಿನಲ್ಲಿ ನಡೆದ ಗಲಾಟೆ ಈಗ ನಿಯಂತ್ರಣಕ್ಕೆ ಬಂದಿದ್ದು, ಗಲಭೆಗೆ ಕಾರಣರಾದವರು ಹಿಂದೂವಾಗಲಿ, ಮುಸ್ಲಿಂ ಆಗಲಿ ಯಾವುದೇ ಕಾರಣಕ್ಕೂ ನಾವು ರಕ್ಷಣೆ ಮಾಡುವುದಿಲ್ಲ. ಕಾನೂನಿನ ಪ್ರಕಾರ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ ಸ್ಪಷ್ಟಪಡಿಸಿದರು. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ರಾಜ್ಯ ಶಾಂತಿಯಿಂದ ಇದ್ದ ವೇಳೆ ಒಂದು ಸಣ್ಣ ಊರಿನಲ್ಲಿ ಈ ರೀತಿಯಾಗಿ ಗಲಾಟೆ ಮಾಡುತ್ತಾರೆಂದರೆ ನಾವು ಅವರನ್ನು ಸುಮ್ಮನೆ ಬಿಡಲು ಆಗುತ್ತದೆಯೇ? ಘಟನೆ ಸಂಬಂಧ ಈಗಾಗಲೇ 15 ಜನರನ್ನು ಬಂಧಿಸಲಾಗಿದೆ. ಇನ್ನೂ ನಾಲ್ಕೈದು ಜನ ತಪ್ಪಿಸಿಕೊಂಡಿದ್ದಾರೆ. ಅವರನ್ನು ಕೂಡಾ ಬಂಧಿಸಲಾಗುವುದು ಎಂದರು. 

ಇದನ್ನೂ ಓದಿ: ಬಿಜೆಪಿಯ ರಾಜಕೀಯ ಸ್ವಾರ್ಥಕ್ಕಾಗಿ ಜನಸಾಮಾನ್ಯರ ಬಲಿ: ಬಿ.ಕೆ.ಹರಿಪ್ರಸಾದ್‌

ಕಲ್ಲು ಎಸೆಯುವ ಮೂಲಕ ಪ್ರಚೋದನೆ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ಗಲಾಟೆ ಮಾಡಿದವರ ಚಲನವಲನಗಳನ್ನ ಸಿಸಿಟಿವಿ ದೃಶ್ಯಲ್ಲಿ ನಮ್ಮ ಪೊಲೀಸರು ಕಂಡುಕೊಂಡಿದ್ದಾರೆ. ಗಲಾಟೆಯಲ್ಲಿ ಯಾರು ಭಾಗಿಯಾಗಿದ್ದರು, ಯಾರು ಗಲಾಟೆ ಮಾಡಿದರು ಅನ್ನೋದನ್ನು ನೋಡಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.