ಕರ್ನಾಟಕದಲ್ಲಿ ಬಯೋಡೀಸೆಲ್ ಉತ್ಪಾದನೆ, ದಾಸ್ತಾನು ಮತ್ತು ಮಾರಾಟಕ್ಕೆ ಪರವಾನಗಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೈಸ್ಪೀಡ್ ಡೀಸೆಲ್ ಜೊತೆಗೆ ಬಯೋಡೀಸೆಲ್ ಮಿಶ್ರಣ ಮಾಡಿ ಮಾರಾಟ ಮಾಡಲು ಈ ಕ್ರಮದಿಂದ ಅವಕಾಶ ದೊರೆಯಲಿದೆ.
ಬೆಂಗಳೂರು (ಸೆ.12): ಕರ್ನಾಟಕದಲ್ಲೂ ರಾಜಸ್ಥಾನ ಮಾದರಿಯಲ್ಲಿ ಬಯೋಡೀಸೆಲ್ ಉತ್ಪಾದನೆ, ದಾಸ್ತಾನು ಮತ್ತು ಮಾರಾಟಕ್ಕೆ ಪರವಾನಗಿ ನೀಡುವ 2022ರ ‘ಹೈಸ್ಪೀಡ್ ಡೀಸೆಲ್‌ನೊಂದಿಗೆ ಬಯೋಡೀಸೆಲ್ (ಬಿ-100) ಮಿಶ್ರಣ ಮಾಡುವ (ಪರವಾನಗಿ) ಕರಡು ಅಧಿಸೂಚನೆಗೆ ಸಂಪುಟ ಅನುಮೋದನೆ ನೀಡಿದೆ.
ತನ್ಮೂಲಕ ಈ ಹಿಂದೆ ಸೀಮೆಎಣ್ಣೆಯಂತೆ ನಿರ್ದಿಷ್ಟ ಮುಕ್ತ ಮಾರಾಟ ಮಳಿಗೆಗಳಲ್ಲಿ ಬಯೋಡೀಸೆಲ್ ಕೂಡ ದೊರೆಯಲಿದೆ. ಪ್ರಸ್ತುತ ಇರುವ ನಿಯಮಗಳ ಪ್ರಕಾರ ಹೈಸ್ಪೀಡ್ ಡೀಸೆಲ್ ಜತೆಗೆ ಶೇ.7 ರಷ್ಟು ಬಯೋಡೀಸೆಲ್ ಮಿಶ್ರಣ ಮಾಡಲು ಅನುಮತಿ ಇದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಉಪಯೋಗಿಸಲ್ಪಟ್ಟ ಅಡುಗೆ ಎಣ್ಣೆ ಸೇರಿ ವಿವಿಧ ಉಪ ಉತ್ಪನ್ನಗಳಿಂದ ಬಯೋಡೀಸೆಲ್ ಉತ್ಪಾದನೆ ಮಾಡುವ ಘಟಕಗಳು ತಮ್ಮ ವೈಯಕ್ತಿಕ ಹಾಗೂ ಹೋಟೆಲ್‌ಗಳ ಉಪಯೋಗಕ್ಕೆ ನೀಡುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದರಿಂದ ಮಾರಾಟ ಮಳಿಗೆಗಳಲ್ಲಿ ಬಯೋಡೀಸೆಲ್ ಮಿಶ್ರಿತ ಡೀಸೆಲ್ ಮಾರಾಟ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಉತ್ಪಾದನೆ, ದಾಸ್ತಾನು ಮತ್ತು ಮಾರಾಟಕ್ಕೆ ಪರವಾನಗಿ ನೀಡಲು ನಿರ್ಧರಿಸಿದೆ.
ಸರ್ಕಾರದ ಈ ಕ್ರಮದಿಂದ ಬಯೋಡೀಸೆಲ್ ಹೆಸರಿನಲ್ಲಿ ಇತರ ರಾಸಾಯನಿಕ ಮಾರಾಟ ತಡೆಯಲಿಕ್ಕೂ ಸಾಧ್ಯವಾಗುತ್ತದೆ ಎಂದು ವಿವರಣೆ ನೀಡಿದರು.
ಕೆಲವು ಮೋಟಾರು ವಾಹನಗಳ ತಯಾರಿಕಾ ಕಂಪನಿಗಳು ಎಥೆನಾಲ್ ಅಥವಾ ಬಯೋಡಿಸೆಲ್ ಬಳಕೆಯಿಂದ ಎಂಜಿನ್ ಸಾಮರ್ಥ್ಯ ಕುಸಿದರೆ ತಾವು ಜವಾಬ್ದಾರರಲ್ಲ ಎಂದು ಹೇಳಿವೆಯಲ್ಲಾ ಎಂಬ ಪ್ರಶ್ನೆಗೆ, ‘ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಬಯೋಡೀಸೆಲ್ ಮಾರಾಟ ಪರವಾನಗಿ ಕರಡಿಗೆ ಅಧಿಕೃತ ಆದೇಶ ಮಾಡುವುದಕ್ಕಷ್ಟೇ ಇಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದರು.
ಯಾರು ನೋಡಲ್ ಏಜೆನ್ಸಿ?:
ಪ್ರಸ್ತುತ ಬಳಕೆ ಮಾಡಿದ ಅಡುಗೆ ಎಣ್ಣೆಯಿಂದ ಗಣನೀಯ ಪ್ರಮಾಣದಲ್ಲಿ ಬಯೋಡೀಸೆಲ್ ಉತ್ಪಾದನೆ ಮಾಡಲಾಗುತ್ತಿದ್ದು, ಇನ್ನಿತರ ಮೂಲಗಳಿಂದ (ಜತ್ರೋಪ ಗಿಡ ಮತ್ತು ಹೊಂಗೆಬೀಜ) ಸ್ವಲ್ಪ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಅದನ್ನು ಮುಕ್ತ ಮಾರುಕಟ್ಟೆ ಮಳಿಗೆಗಳಲ್ಲಿ ಮಾರಾಟಕ್ಕೆ ಪರವಾನಗಿ ನೀಡಲಾಗುವುದು. ಈ ಪರವಾನಗಿ ಸೇರಿ ಒಟ್ಟಾರೆ ನಿರ್ವಹಣೆಗೆ ನೋಡಲ್ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಬಯೋಡೀಸೆಲ್ ಇಂಧನ ಮಂಡಳಿ ಕೆಲಸ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
