ಬೆಂಗಳೂರಿನಲ್ಲಿ ಒನ್ ವೇ ನಿಯಮ ಉಲ್ಲಂಘಿಸಿದ ಯೂಟ್ಯೂಬರ್ ಮೇಲೆ ಹಲ್ಲೆ ನಡೆಸಿದ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ತೇಲಿ ಅವರನ್ನು ಅಮಾನತುಗೊಳಿಸಲಾಗಿದೆ. ಸಿಲ್ಕ್ ಬೋರ್ಡ್ ಬಳಿ ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸ್ ಇಲಾಖೆ ಈ ಶಿಸ್ತು ಕ್ರಮ ಕೈಗೊಂಡಿದೆ.

ಬೆಂಗಳೂರು: ನಗರದ ಟ್ರಾಫಿಕ್ ಪೋಲಿಸರ ಕೆಟ್ಟ ಮಾತ್ರವಲ್ಲ ದರ್ಪದ ವರ್ತನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ, ಮಡಿವಾಳ ಟ್ರಾಫಿಕ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ತೇಲಿ ಅವರನ್ನು ಅಮಾನತುಗೊಳಿಸಲಾಗಿದೆ.

ಘಟನೆ ಅಕ್ಟೋಬರ್ 13ರ ಮಧ್ಯಾಹ್ನ ಸಿಲ್ಕ್ ಬೋರ್ಡ್ ಫ್ಲೈಓವರ್ ಕೆಳಭಾಗದಲ್ಲಿ ನಡೆದಿದೆ. ಕೇರಳ ಮೂಲದ ಯೂಟ್ಯೂಬರ್ ನಿತೀಶ್ ಮತ್ತು ಅವನ ಸ್ನೇಹಿತ ಒನ್ ವೇ ರಸ್ತೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ಅವರನ್ನು ತಡೆದು ದಂಡ ವಿಧಿಸಿದರು.

ದಂಡ ವಿಧಿಸಿದ ನಂತರ ಯೂಟ್ಯೂಬರ್ ಹಾಗೂ ಪೊಲೀಸರ ನಡುವೆ ವಾಗ್ವಾದ ಉಂಟಾಯಿತು. ವಾಗ್ವಾದದ ವೇಳೆ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ತೇಲಿ ಸಿಟ್ಟಿಗೆದ್ದಿದ್ದು, ಹೆಲ್ಮೆಟ್ ಧರಿಸಿದ್ದ ಬೈಕ್ ಸವಾರನ ಮುಖಕ್ಕೆ ಬಲವಾಗಿ ಹೊಡೆದಿದ್ದಾರೆ. ಅಕಸ್ಮಾತ್ ದಾಳಿಯಿಂದ ಬೆಚ್ಚಿಬಿದ್ದ ಯೂಟ್ಯೂಬರ್ ಮತ್ತು ಅವನ ಸ್ನೇಹಿತರು ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಈ ಘಟನೆಗೆ ಸಂಬಂಧಿಸಿದಂತೆ ಯೂಟ್ಯೂಬರ್‌ನ ಸ್ನೇಹಿತ ಘಟನೆಯ ಸಂಪೂರ್ಣ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದನು. ಬಳಿಕ ಆ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಲಾಗಿದೆ. ಕೆಲವೇ ಗಂಟೆಗಳಲ್ಲಿ ವೀಡಿಯೊ ವೇಗವಾಗಿ ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸ್ ಇಲಾಖೆಯ ವಿರುದ್ಧ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸ್ ಇಲಾಖೆಯ ತಕ್ಷಣದ ಕ್ರಮ

ವೈರಲ್ ವೀಡಿಯೊ ಹಾಗೂ ಪ್ರಾಥಮಿಕ ವರದಿಗಳ ಆಧಾರದ ಮೇಲೆ, ಸಂಚಾರ ದಕ್ಷಿಣ ವಿಭಾಗದ ಡಿ.ಸಿ.ಪಿ. ಅವರು ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ತೇಲಿ ಅವರ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದಾರೆ. ಪೊಲೀಸರ ನಡೆ ಕಾನೂನಾತ್ಮಕವಾಗಿ ಮತ್ತು ಶಿಸ್ತುಸಂಹಿತೆಯ ದೃಷ್ಟಿಯಿಂದ ಅಸಮಂಜಸವಾಗಿದ್ದು, ಇಲಾಖೆಯ ಮಾನವನ್ನು ಹರಾಜು ಹಾಕಿದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ವೃತ್ತಿಪರ ನಡವಳಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಒನ್ ವೇ ನಿಯಮ ಉಲ್ಲಂಘನೆ ಮಾಡಿದ ಯೂಟ್ಯೂಬರ್ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲೇ ಪೊಲೀಸರ ಅತಿರೇಕದ ನಡವಳಿಕೆಯಿಂದ ಘಟನೆ ವಿವಾದಕ್ಕೀಡಾಗಿದೆ. ಸಾಮಾಜಿಕ ಜಾಲತಾಣದ ಒತ್ತಡ ಮತ್ತು ಸಾರ್ವಜನಿಕ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣದ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ಪೊಲೀಸರ ನಡವಳಿಕೆ ಎರಡೂ ವಿಚಾರಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.