Yadgir annabhagya rice smuggling case: ವಿದೇಶಕ್ಕೆ ಪಡಿತರ ಅಕ್ಕಿ ಸಾಗಣೆ ಹಗರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ. ಎಸ್‌ಪಿ ಎಂ.ಡಿ.ಶರತ್ ನೇತೃತ್ವದ ತಂಡವು ಆಹಾರ ಇಲಾಖೆ ಯಾದಗಿರಿ ಪೊಲೀಸರಿಂದ ಮಾಹಿತಿ ಸಂಗ್ರಹ.. ಬಡವರ ಪಾಲಿನ ಅಕ್ಕಿ ಅಕ್ರಮವಾಗಿ ಸಾಗಾಟ. ತನಿಖೆಗಾಗಿ ಪ್ರಕರಣ ಸಿಐಡಿಗೆ ವಹಿಸಲಾಗಿದೆ.

ಬೆಂಗಳೂರು (ಸೆ.25): ವಿದೇಶಕ್ಕೆ ಪಡಿತರ ಅಕ್ಕಿ ಸಾಗಣೆ ಹಗರಣ ಸಂಬಂಧ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಎಸ್‌ಪಿ ಎಂ.ಡಿ.ಶರತ್ ನೇತೃತ್ವದ ತಂಡವು ಕಾರ್ಯಾಚರಣೆ ಶುರು ಮಾಡಿದೆ. 

ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಪಡಿತರ ಅಕ್ಕಿ ವಿತರಣೆ ವ್ಯವಸ್ಥೆ ಕುರಿತು ಸಿಐಡಿ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಬಳಿಕ ಯಾದಗಿರಿ ಜಿಲ್ಲೆಯ ಪೊಲೀಸರಿಂದ ಪ್ರಕರಣದ ದಾಖಲೆಗಳನ್ನು ಸಿಐಡಿ ಪಡೆದಿದ್ದು, ಇನ್ನೆರಡು ದಿನಗಳಲ್ಲಿ ಆ ಜಿಲ್ಲೆಗೆ ತನಿಖಾ ತಂಡ ಭೇಟಿ ನೀಡಲಿದೆ.

ಇದನ್ನೂ ಓದಿ: ಕೊಪ್ಪಳ: ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ; ಮುನಿರಾಬಾದ್ ಪೊಲೀಸರಿಂದ ದಾಳಿ

 ಈ ಪ್ರಕರಣದ ತನಿಖೆಗೆ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಮೇಲುಸ್ತುವಾರಿಯಲ್ಲಿ ಆರ್ಥಿಕ ಅಪರಾಧಗಳ ವಿಭಾಗದ ಎಸ್ಪಿ ಎಂ.ಡಿ.ಶರತ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ತನಿಖಾಧಿಕಾರಿಯಾಗಿ ಇನ್‌ಸ್ಪೆಕ್ಟರ್‌ ಅನಿಲ್ ನೇಮಕಗೊಂಡಿದ್ದಾರೆ. ಯಾದಗಿರಿ ಜಿಲ್ಲೆ ಗುರಮಿಠ್ಕಲ್ ತಾಲೂಕಿನಿಂದ ವಿದೇಶಕ್ಕೆ ರಾಜ್ಯದ ಬಡವರ ಪಾಲಿನ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವ ದಂಧೆಯನ್ನು ‘ಕನ್ನಡಪ್ರಭ’ ಬಯಲುಗೊಳಿಸಿತ್ತು.

ಈ ಅಕ್ಕಿ ಹಗರಣವು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಗುರಮಿಠ್ಕಲ್ ಪೊಲೀಸ್ ಠಾಣೆಯಲ್ಲಿ ಅಕ್ಕಿ ಗಿರಣಿ ಮಾಲಿಕ ಸೇರಿದಂತೆ ಐ‍ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ತರುವಾಯ ಹಗರಣದ ಜಾಲವು ಬಹು ವಿಸ್ತಾರವಾಗಿರುವ ಕಾರಣಕ್ಕೆ ಹೆಚ್ಚಿನ ತನಿಖೆಗೆ ಸಿಐಡಿಗೆ ಡಿಜಿ-ಐಜಿಪಿ ಡಾ.ಎಂ.ಸಲೀಂ ವಹಿಸಿದ್ದರು.