ಕೊಪ್ಪಳದ ಕುಕನಪಳ್ಳಿ ಬಳಿ 8 ಟನ್ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಮುನಿರಾಬಾದ್ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಲಾರಿ ಚಾಲಕ ಮತ್ತು ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಕೊಪ್ಪಳ (ಸೆ.17): ಕೊಪ್ಪಳದ ಕುಕನಪಳ್ಳಿ ಬಳಿ ಅನ್ನಭಾಗ್ಯ ಅಕ್ಕಿಯನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಮುನಿರಾಬಾದ್ ಪೊಲೀಸರು ದಾಳಿ ನಡೆಸಿ ಲಾರಿ ವಶಕ್ಕೆ ಪಡೆದಿದ್ದಾರೆ.
ಕೊಪ್ಪಳದಿಂದ ನೆರೆ ರಾಜ್ಯಕ್ಕೆ 8 ಟನ್ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ವಿಚಾರ ಪೊಲೀಸರಿಗೆ ಮಾಹಿತಿ ಬಂದ ಕೂಡಲೇ ಕಾರ್ಯಾಚಾರಣೆಗೆ ಇಳಿದಿದ್ದ ಪೊಲೀಸರು. ಸದ್ಯ ಅಕ್ರಮ ಸಾಗಾಟ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಮತ್ತು ವಾಹನ ಮಾಲಿಕನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ, ಕುಕನಪಳ್ಳಿ ಬಳಿ ತಪಾಸಣೆ ನಡೆಸಿದಾಗ ಈ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಲಾರಿಯಲ್ಲಿದ್ದ ಅಕ್ಕಿಯನ್ನು ಜಪ್ತಿ ಮಾಡಿ, ವಾಹನ ಸೀಜ್ ಮಾಡಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳ ಸಹಯೋಗದೊಂದಿಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಹಿಂದೆಯೂ ಅಕ್ರಮ ನಡೆದಿತ್ತು:
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುವ ಪ್ರಕರಣಗಳು ಈ ಹಿಂದೆಯೂ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದ್ದವು. ಈ ಘಟನೆಯಿಂದ ಸರಕಾರಿ ಯೋಜನೆಗಳ ದುರ್ಬಳಕೆ ತಡೆಗಟ್ಟಲು ಕಠಿಣ ಕ್ರಮದ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಈ ರೀತಿಯ ಅಕ್ರಮ ಕೃತ್ಯಗಳನ್ನು ನಿಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
