ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಪವಿತ್ರಾ ಗೌಡ, ಹಬ್ಬದ ಸಮಯದಲ್ಲಿ ಮಗಳು ಮತ್ತು ಕುಟುಂಬವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ, ಅವರು ಮೌನಕ್ಕೆ ಶರಣಾಗಿದ್ದು, ನಿದ್ರೆಯಿಲ್ಲದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಿದ್ದಾರೆ.

ಬೆಂಗಳೂರು (ಅ.20): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ಪವಿತ್ರಾ ಗೌಡ ಅವರು ಜೈಲಿನಲ್ಲಿ ದಸರಾ ಮತ್ತು ದೀಪಾವಳಿಯಂತಹ ಪ್ರಮುಖ ಹಬ್ಬಗಳನ್ನು ಕುಟುಂಬ ಮತ್ತು ಮಗಳ ಜೊತೆ ಆಚರಿಸಲಾಗದೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಹೊರ ಜಗತ್ತಿನಲ್ಲಿ ಪ್ರತಿ ಹಬ್ಬವನ್ನೂ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದ ಪವಿತ್ರಾ ಗೌಡಗೆ, ಜೈಲಿನ ಈ ಸೆರೆವಾಸವು ಸಂಕಟದಾಯಕ ಅನುಭವ ನೀಡಿದೆ.

ಹೈಫೈ ಜೀವನ ಶೈಲಿಗೆ ಹೆಸರಾಗಿದ್ದ ಪವಿತ್ರಾ ಗೌಡ ಅವರು ಇದೀಗ ಜೈಲಿನ ಮಹಿಳಾ ಬ್ಯಾರಕ್‌ನಲ್ಲಿ ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ದಿನಗಳನ್ನು ಕಳೆಯುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವುದರಿಂದ ಹಬ್ಬಗಳ ಸಂಭ್ರಮದಿಂದ ದೂರ ಉಳಿಯುವಂತಾಗಿದೆ.

ಮಗಳಿಗಾಗಿ ಕಂಗಾಲು:

ಪ್ರತಿಯೊಂದು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದ ಪವಿತ್ರಾ ಗೌಡ ಅವರಿಗೆ, ಮಗಳು ಮತ್ತು ಕುಟುಂಬಸ್ಥರ ಜೊತೆ ಸಮಯ ಕಳೆಯಲು ಸಾಧ್ಯವಾಗದಿರುವುದು ತೀವ್ರ ನೋವು ತಂದಿದೆ. ಜೈಲು ಕೋಣೆಯ ಏಕಾಂತದಲ್ಲಿ ಹಬ್ಬಗಳ ನೆನಪುಗಳು ಕಾಡುತ್ತಿದ್ದು, ಮಗಳ ನೆನಪಿನಿಂದಾಗಿ ಅವರು ಕಣ್ಣೀರು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಗಳನ್ನು ನೋಡಲು, ಆಕೆಯೊಂದಿಗೆ ಸಮಯ ಕಳೆಯಲು ಸಾಧ್ಯವಾಗದೆ ಅವರು ತೀವ್ರವಾಗಿ ಕಂಗಾಲಾಗಿದ್ದಾರೆ ಎನ್ನಲಾಗಿದೆ. ಅವರ ಹಿಂದಿನ ಜೀವನಕ್ಕೆ ಹೋಲಿಸಿದರೆ, ಜೈಲಿನ ಸರಳ ಮತ್ತು ನಿರ್ಬಂಧಿತ ಜೀವನವು ಅವರಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಿದೆ.

ಮೌನಕ್ಕೆ ಶರಣು, ನಿದ್ರೆ ಇಲ್ಲದೆ ಪರದಾಟ:

ಪರಪ್ಪನ ಅಗ್ರಹಾರದ ಜೈಲು ಮೂಲಗಳ ಪ್ರಕಾರ, ಪವಿತ್ರಾ ಗೌಡ ಅವರು ಇತರೆ ಸಹಬಂಧಿಗಳ ಜೊತೆ ಹೆಚ್ಚು ಮಾತನಾಡುವುದಿಲ್ಲ. ಸಾಮಾನ್ಯವಾಗಿ ಮೌನವಾಗಿಯೇ ಇರುತ್ತಾರೆ. ಜೈಲಿನಲ್ಲಿ ಅವರು ಸೈಲೆಂಟ್ ಆಗಿದ್ದು, ಯಾರೊಂದಿಗೂ ಹೆಚ್ಚು ಬೆರೆಯುತ್ತಿಲ್ಲ ಎನ್ನಲಾಗಿದೆ. ಜೈಲಿನ ವಾತಾವರಣ, ಅಲ್ಲಿನ ಜೈಲೂಟ ಅವರಿಗೆ ಒಗ್ಗದಿರುವುದು ಮತ್ತು ಸರಿಯಾದ ನಿದ್ರೆ ಇಲ್ಲದಿರುವುದರಿಂದ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಲುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗಳು ಮುಂದುವರೆದಿದ್ದರೂ, ನ್ಯಾಯಾಲಯದ ತೀರ್ಪು ಬರುವವರೆಗೆ ಪವಿತ್ರಾ ಗೌಡ ಅವರಿಗೆ ಕುಟುಂಬ ಮತ್ತು ಸಂಭ್ರಮದಿಂದ ದೂರ ಉಳಿದಿರುವ ಈ ಸೆರೆವಾಸವು ನೋವಿನ ಅನುಭವ ನೀಡುತ್ತಿದೆ.