ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ತಮ್ಮ ಹೆಸರಿನಲ್ಲಿ ಈಶ್ವರ ಮತ್ತು ವಿಷ್ಣು ಇದ್ದಾರೆ ಎಂದು ಹೇಳಿದ್ದಾರೆ. ಸಿದ್ದ ಎಂದರೆ ಈಶ್ವರ, ರಾಮ ಎಂದರೆ ವಿಷ್ಣುವಿನ ಅವತಾರ ಎಂದು ವಿವರಿಸಿದರು. ಈ ಹೇಳಿಕೆ ಸದನದಲ್ಲಿ ನಗೆ ಉಕ್ಕಿಸಿದೆ.
ಬೆಂಗಳೂರು (ಆ.13): ‘ಈಶ್ವರ-ವಿಷ್ಣು ಎಲ್ಲವೂ ನಾನೇ ಇದ್ದೇನೆ. ಸಿದ್ದ ಎಂದರೆ ಈಶ್ವರ ಹಾಗೂ ರಾಮ ಎಂದರೆ ವಿಷ್ಣು. ಇಬ್ಬರೂ ನನ್ನ ಹೆಸರಿನಲ್ಲೇ (ಸಿದ್ದರಾಮಯ್ಯ) ಇದ್ದಾರೆ’! ಎಂದು ಮುಖ್ಯಮಂತ್ರಿ ಹೇಳಿದ ಪ್ರಸಂಗ ಮಂಗಳವಾರ ನಡೆಯಿತು.
ವಿಧಾನಸಭೆ ಕಲಾಪದ ಭೋಜನ ವಿರಾಮದ ಬಳಿಕ ಕಪ್ ತುಳಿತ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತು ಮುಂದುವರೆಸಿದ್ದರು. ಈ ವೇಳೆ ಆಡಳಿತ ಪಕ್ಷದ ಸಾಲಿನಲ್ಲಿ ಬಹುತೇಕ ಸಚಿವರು ಹಾಜರಿರಲಿಲ್ಲ. ಈ ಬಗ್ಗೆ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶ ಮಾಡಿದ ಕೃಷ್ಣಬೈರೇಗೌಡ ಅವರು, ಡಾ। ಜಿ.ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರ ಕಡೆಗೆ ತೋರಿಸಿ ಪರಮ ಈಶ್ವರನೇ ಇದ್ದಾಗ ಬೇರೆಯವರ ಮಾತೇಕೆ. ಈಶ್ವರ (ಪರಮೇಶ್ವರ್), ರಾಮ (ಸಿದ್ದರಾಮಯ್ಯ), ಕೃಷ್ಣ (ಕೃಷ್ಣಬೈರೇಗೌಡ) ಎಲ್ಲರೂ ಇದ್ದಾರೆ. ನೀವು ಮಾತನಾಡಿ’ ಎಂದರು.
ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಶ್ವರ-ವಿಷ್ಣು ಎಲ್ಲವೂ ನಾನೇ ಇದ್ದೇನೆ. ನನ್ನ ಹೆಸರಿನಲ್ಲೇ ಈಶ್ವರ ಹಾಗೂ ವಿಷ್ಣು ಇದ್ದಾರೆ. ಸಿದ್ದ ಎಂದರೆ ಈಶ್ವರ, ರಾಮ ಎಂದರೆ ವಿಷ್ಣು ಅವತಾರ. ಎರಡೂ ನನ್ನ ಬಳಿಯೇ ಇವೆ ಎಂದರು.
ಸಂಧಿಗಳ ಸಹವಾಸ ಬೇಡ- ಕೈ ಮುಗಿದ ಅಶೋಕ್:
ಈ ವೇಳೆ ಪರಮೇಶ್ವರ್ ಅವರೂ ಇದ್ದಾರೆ ಎಂದು ಪ್ರತಿಪಕ್ಷ ಸದಸ್ಯರು ಹೇಳಿದ ತಕ್ಷಣ ಸಿದ್ದರಾಮಯ್ಯ ಅವರು, ‘ಪರಮೇಶ್ವರ ಅದು ಸವರ್ಣ ದೀರ್ಘ ಸಂಧಿ’ ಎಂದಾಗ ಸದನದಲ್ಲಿ ಎಲ್ಲರಲ್ಲೂ ನಗು. ಆಗ ಆರ್.ಅಶೋಕ್, ‘ನಾನು ಸಂಧಿಗಳಿಗೆ ಹೋಗುವುದಿಲ್ಲ. ಸಂಧಿಗಳ ಸಹವಾಸ ನಮಗೆ ಬೇಡ’ ಎಂದು ಕೈ ಮುಗಿದರು.
