ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರ ಬಹಿರಂಗ ಹೇಳಿಕೆ 2018ರ ವಿಧಾನಸಭಾ ಚುನಾವಣೆಯಲ್ಲಿ ಮತ ಖರೀದಿ ನಡೆದಿದೆ ಎಂದು ಸೂಚಿಸುತ್ತದೆ. ಈ ಹೇಳಿಕೆಯ ತನಿಖೆಗೆ ಆಗ್ರಹಿಸಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಬೆಂಗಳೂರು (ಆ.13): ಕಳೆದ 2018ರ ಕರ್ನಾಟಕ ವಿಧಾನಸಭಾ ಚುನಾವಣಾ ಅಪರಾಧದ ಬಗ್ಗೆ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ನೀಡುರುವ ಬಹಿರಂಗ ಹೇಳಿಕೆ ಸಂಬಂಧ ತನಿಖೆ ನಡೆಸುವಂತೆ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಬಿ.ಚಿಮ್ಮನಕಟ್ಟಿ ಮತ್ತು ನಾನು 3 ಸಾವಿರ ಮತಗಳನ್ನು ಖರೀದಿಸಲು ಸಹಾಯ ಮಾಡಿದ್ದೇವೆ. ಇದರಿಂದ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಸಿ.ಎಂ.ಇಬ್ರಾಹಿಂ ಬಹಿರಂಗವಾಗಿ ಹೇಳಿದ್ದಾರೆ.

ಈ ಚುನಾವಣೆ ಸಂದರ್ಭದಲ್ಲಿ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು. ಅವರೇ ಹೇಳಿರುವಂತೆ ಆ ಚುನಾವಣೆ ಉಸ್ತುವಾರಿ ವಹಿಸಿದ್ದರು. ತಮ್ಮ ಸ್ನೇಹಿತನನ್ನು ಉಳಿಸಲು 3 ಸಾವಿರ ಮತಗಳನ್ನು ಖರೀದಿಸಿದ್ದೆವು. ಮತಗಳ ಖರೀದಿಗೆ ಸಿದ್ದರಾಮಯ್ಯನವರೇ ಹಣ ನೀಡಿದ್ದರು. ಆ ಹಣ ಪಾವತಿಗೆ ಆರು ತಿಂಗಳು ಸಮಯ ತೆಗೆದುಕೊಂಡಿದ್ದರು ಎಂದು ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. ಇದು ನಿಜವೇ ಆಗಿದ್ದರೆ ಚುನಾವಣಾ ನಿಯಮಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸುವಂತೆ ಲೆಹರ್‌ ಸಿಂಗ್ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಸಿ.ಎಂ.ಇಬ್ರಾಹಿಂ ಅವರು ಕಾರ್ಯಕ್ರಮವೊಂದರಲ್ಲಿ ಬಹಿರಂವಾಗಿ ಮಾತನಾಡಿರುವ ವಿಡಿಯೋ ಬಗ್ಗೆಯೂ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.