ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ ಅಂಕಿತ ಹಾಕಿದ್ದಾರೆ. ಹೊಸ ಕಾನೂನಿನಡಿ ರಾಷ್ಟ್ರೀಯ ಕ್ರೀಡಾ ಮಂಡಳಿ, ನ್ಯಾಯಮಂಡಳಿ ಮತ್ತು ಚುನಾವಣಾ ಪ್ಯಾನೆಲ್‌ ರಚನೆಯಾಗಲಿದೆ. ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ.

ನವದೆಹಲಿ: ದೇಶದ ಬಹುಚರ್ಚಿತ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಅಂಕಿತ ಹಾಕಿದ್ದು, ಹೀಗಾಗಿ ಕಾಯ್ದೆಯು ಕಾನೂನು ಸ್ವರೂಪವನ್ನು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಹೊಸ ಕಾನೂನು ಕಳೆದ ವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತ್ತು.

ಹೊಸ ಕಾನೂನಿನಲ್ಲೇನಿದೆ?

2011ರಿಂದ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ಸಂಹಿತೆ ಚಾಲ್ತಿಯಲ್ಲಿತ್ತು. ಈಗ ಅದನ್ನು ಬದಲಿಸಿ ಕ್ರೀಡಾ ಆಡಳಿತ ಕಾಯ್ದೆ ತರಲಾಗಿದೆ. ಹೊಸ ಕಾನೂನಿನಡಿ ರಾಷ್ಟ್ರೀಯ ಕ್ರೀಡಾ ಮಂಡಳಿ(ಎನ್‌ಎಸ್‌ಬಿ), ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (ಎನ್‌ಎಸ್‌ಟಿ) ಮತ್ತು ಕ್ರೀಡಾ ಚುನಾವಣಾ ಪ್ಯಾನೆಲ್‌ ಸಹ ಅಸ್ತಿತ್ವಕ್ಕೆ ಬರಲಿದೆ.

ಎನ್‌ಎಸ್‌ಬಿಯು ಎಲ್ಲಾ ಕ್ರೀಡಾ ಫೆಡರೇಷನ್‌ಗಳ ಕಾರ್ಯವೈಖರಿ ಮೇಲೆ ಕಣ್ಣಿಡಲಿದೆ. ಕ್ರೀಡಾಪಟುಗಳ ಆಯ್ಕೆ, ಫೆಡರೇಷನ್‌ಗಳ ಚುನಾವಣಾ ವಿವಾದ, ಹಣಕಾಸು ಮತ್ತು ಆಡಳಿತ ದುರುಪಯೋಗ ಪ್ರಕರಣಗಳ ಇತ್ಯರ್ಥ ಜವಾಬ್ದಾರಿಯು ನ್ಯಾಯಮಂಡಳಿಯದ್ದಾಗಿರಲಿದೆ. ಇದಕ್ಕೆ ಸಿವಿಲ್‌ ಕೋರ್ಟ್‌ ಮಾನ್ಯತೆ ಇರಲಿದೆ. ಇಲ್ಲಿನ ತೀರ್ಪು ಪ್ರಶ್ನಿಸಿ ಕೇವಲ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಬಹುದಾಗಿದೆ. ಎಲ್ಲಾ ಫೆಡರೇಷನ್‌ಗಳ ಚುನಾವಣೆ ಮೇಲ್ವಿಚಾರಣೆಯನ್ನು ಚುನಾವಣಾ ಪ್ಯಾನೆಲ್‌ ನೋಡಿಕೊಳ್ಳಲಿದೆ.

ಹೊಸ ಕಾನೂನಿನಡಿ ಫೆಡರೇಷನ್‌ಗಳು ಕಾನೂನು ಉಲ್ಲಂಘಿಸಿದಲ್ಲಿ ಅವುಗಳನ್ನು ಮಂಡಳಿ ಅಮಾನ್ಯ ಮಾಡುವ ಅಧಿಕಾರ ಹೊಂದಿರಲಿದೆ.

ಆರ್‌ಟಿಐಗಿಲ್ಲ ಬಿಸಿಸಿಐ:

ಹೊಸ ಕಾಯ್ದೆ ಪ್ರಕಾರ ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಮಂಡಳಿ ಅಡಿಯಲ್ಲಿ ಬಂದರೂ, ಸರ್ಕಾರದ ಯಾವುದೇ ಹಣಕಾಸಿನ ನೆರವು ಪಡೆಯದ ಕಾರಣ ಅದು ಆರ್‌ಟಿಐ ಅಡಿ ಬರುವುದಿಲ್ಲ. ಮಿಕ್ಕೆಲ್ಲಾ ಫೆಡರೇಷನ್‌ಗಳು ಸರ್ಕಾರದ ನಿಧಿ ಪಡೆವ ಕಾರಣ ಅವುಗಳು ಆರ್‌ಟಿಐ ಅಡಿ ಬರುತ್ತವೆ.

ಕ್ರೀಡಾ ಬಿಲ್‌ನಲ್ಲಿ ಆಡಳಿತ ಮಂಡಳಿ ನಿಯಮ ಸಡಿಲಿಕೆ

ನವದೆಹಲಿ: ಇತ್ತೀಚೆಗೆ ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ರಾಷ್ಟ್ರೀಯ ಕ್ರೀಡಾ ಆಡಳಿತ ಬಿಲ್‌ನಲ್ಲಿ ಕೆಲ ನಿಯಮಗಳ ಪರಿಷ್ಕರಣೆ ಮಾಡಲಾಗಿದ್ದು, ಕ್ರೀಡಾ ಒಕ್ಕೂಟದ ಕಾರ್ಯಕಾರಿ ಸಮಿತಿಯಲ್ಲಿ ಒಮ್ಮೆ ಸದಸ್ಯರಾದವರಿಗೂ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಆಗುವ ಅವಕಾಶವನ್ನು ನೀಡಿದೆ. ಈ ಮೊದಲು 2 ಅವಧಿಗೆ ಸದಸ್ಯರಾಗಿದ್ದವರಿಗಷ್ಟೇ ಮಂಡಳಿಯ ಅಗ್ರ 3 ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವಿತ್ತು. ಆದರೆ ಈಗ ನಿಮಯವನ್ನು ಸಡಿಲಿಸಲಾಗಿದೆ. ಇದು ಅರ್ಹ ಮತ್ತು ಸಮರ್ಥ ಅಭ್ಯರ್ಥಿಗಳ ಆಯ್ಕೆಗೆ ನೆರವಾಗಬಹುದು ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮನು ಭಾಕರ್‌ಗೆ 2 ಕಂಚು, ರಶ್ಮಿಕಾಗೆ 2ರಲ್ಲಿ ಬಂಗಾರ

ಶಿಮ್ಕೆಂಟ್‌(ಕಜಕಸ್ತಾನ): ಒಲಿಂಪಿಕ್ಸ್‌ ಪದಕ ವಿಜೇತ ಭಾರತದ ತಾರಾ ಶೂಟರ್‌ ಮನು ಭಾಕರ್‌ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 2 ಕಂಚಿನ ಪದಕ ಗೆದ್ದಿದ್ದಾರೆ.

ಮಂಗಳವಾರ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಭಾಕರ್‌, 219.7 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು. ಚೀನಾದ ಕ್ವಿಯಾನ್‌ಕೆ ಮಾ ಚಿನ್ನ, ಕೊರಿಯಾದ ಜಿನ್ ಯಾಂಗ್‌ ಬೆಳ್ಳಿ ಜಯಿಸಿದರು. ಭಾಕರ್‌ ತಂಡ ವಿಭಾಗದಲ್ಲೂ ಪದಕ ತಮ್ಮದಾಗಿಸಿಕೊಂಡರು. ಪಾಲಕ್‌ ಹಾಗೂ ಸುರುಚಿ ಸಿಂಗ್‌ ಜೊತೆಗೂಡಿ ಅವರು ಕಂಚು ಕೊರಳಿಗೇರಿಸಿಕೊಂಡರು. ಭಾರತ ಒಟ್ಟು 3 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಇನ್ನು, ಕಿರಿಯರ ವಿಭಾಗದಲ್ಲಿ ರಶ್ಮಿಕಾ ಸಹ್ಗಲ್ 2 ವಿಭಾಗದಲ್ಲಿ ಚಿನ್ನ ಸಂಪಾದಿಸಿದರು. ಅವರು 10 ಮೀ. ಏರ್‌ ಪಿಸ್ತೂಲ್‌ ವೈಯಕ್ತಿಕ ವಿಭಾಗದಲ್ಲಿ 241.9 ಅಂಕದೊಂದಿಗೆ ಚಿನ್ನ ಗೆದ್ದರು. ತಂಡ ವಿಭಾಗದಲ್ಲಿ ವನ್ಶಿಕಾ ಚೌಧರಿ ಹಾಗೂ ಮೋಹಿನಿ ಸಿಂಗ್‌ ಜೊತೆಗೂಡಿ ಮತ್ತೊಂದು ಬಂಗಾರ ಸಂಪಾದಿಸಿದರು.