ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಲೋಕಸಭೆಯ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಅಂಗೀಕಾರ ಪಡೆದಿದೆ. ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಮಸೂದೆ ಮಂಡಿಸಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಾಯುತ್ತಿದೆ.

ನವದೆಹಲಿ: ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದ 24 ಗಂಟೆಗಳಲ್ಲೇ ರಾಜ್ಯಸಭೆಯಲ್ಲೂ ಪಾಸಾಗಿದೆ. ರಾಷ್ಟ್ರೀಯ ಉದ್ದೀಪನ ನಿಗ್ರಹ (ತಿದ್ದುಪಡಿ) ಮಸೂದೆ ಸಹ ಪಾಸಾಗಿದ್ದು, ಎರಡೂ ಮಸೂದೆಗಳು ರಾಷ್ಟ್ರಪತಿಗಳಿಂದ ಅಂಗೀಕಾರಗೊಳ್ಳುವುದು ಬಾಕಿ ಇದೆ.

ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಮಂಗಳವಾರ ಮಧ್ಯಾಹ್ನ ಮೇಲ್ಮನೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಮಂಡಿಸಿದರು. ‘20 ದೇಶಗಳಲ್ಲಿ ಕ್ರೀಡಾ ನೀತಿ ಇದೆ. ಭಾರತವನ್ನು 21ನೇ ದೇಶವನ್ನಾಗಿಸಬೇಕು ಎಂದು ರಾಜ್ಯಸಭೆಗೆ ಮನವಿ ಮಾಡುತ್ತೇನೆ’ ಎಂದು ಮಾಂಡವೀಯ ತಮ್ಮ ಮಾತು ಆರಂಭಿಸಿದರು. ಮಸೂದೆ ಸಂಬಂಧಿಸಿ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಯಿತು.

ಚರ್ಚೆ ವೇಳೆ ಬಿಜೆಡಿ ಸಂಸದ ಶುಭಾಶಿಷ್‌ ಕುಂತಿಯಾ, ಕ್ರೀಡಾ ಆಡಳಿತ ಮಸೂದೆಯು ಕೆಲ ಸಮಸ್ಯೆಗಳನ್ನು ಒಳಗೊಂಡಿರುವುದಾಗಿ ತಿಳಿಸಿದರು. ಮಸೂದೆಯು ಕ್ರೀಡಾಪಟುಗಳಿಗೆ ಪೂಕರವಾಗಿರಬೇಕೇ ಹೊರತು ಅವರನ್ನು ನಿಯಂತ್ರಿಸಬಾರದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಂಡವೀಯ, ‘ಕ್ರೀಡಾಪಟುಗಳಿಗೆ ಏನು ನೆರವು ಬೇಕೋ ಅದನ್ನು ಒದಗಿಸುವುದಷ್ಟೇ ಸರ್ಕಾರದ ಕೆಲಸ. ಸರ್ಕಾರವು ಯಾರನ್ನೂ ನಿಯಂತ್ರಿಸಲು ಇಚ್ಛಿಸುವುದಿಲ್ಲ. ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆ ತರಬೇಕು ಎನ್ನುವುದೇ ನಮ್ಮ ಉದ್ದೇಶ’ ಎಂದರು.

ಭಾರತೀಯ ಫುಟ್ಬಾಲ್‌ ಫೆಡರೇಶನ್‌ನ ಮಾಜಿ ಅಧ್ಯಕ್ಷ, ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್‌, ಭಾರತೀಯ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷೆ, ರಾಜ್ಯಸಭೆ ಸದಸ್ಯೆ ಪಿ.ಟಿ.ಉಷಾ, ಕ್ರೀಡಾ ಆಡಳಿತ ಮಸೂದೆ ಪರವಾಗಿ ಮಾತನಾಡಿದರು.

ಕ್ರೀಡಾ ಆಡಳಿತ ಮಸೂದೆ ಹೆಜ್ಜೆಗಳು

* 2011ರಲ್ಲಿ ಕ್ರೀಡಾ ಸಚಿವಾಲಯ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಮಸೂದೆಯನ್ನು ಸಿದ್ಧಪಡಿಸಿ ಸಚಿವ ಸಂಪುಟದಲ್ಲಿ ಅನುಮೋದನೆಗೆ ಮಂಡಿಸಿತು. ಆದರೆ ಆಡಳಿತಾಧಿಕಾರಿಗಳ ವಯಸ್ಸು, ಅಧಿಕಾರ ಅವಧಿಯಲ್ಲಿ ಮಿತಿ ಹೇರಿದ್ದರಿಂದ ವಿರೋಧ ವ್ಯಕ್ತವಾಯಿತು.

* 2013ರಲ್ಲಿ ಸಚಿವಾಲಯವು ಪರಿಷ್ಕೃತ ಕರಡು ರಾಷ್ಟ್ರೀಯ ಕ್ರೀಡಾ ಮಸೂದೆಯನ್ನು ಸಿದ್ಧಪಡಿಸಿ, ಸಲಹೆ ಸೂಚನೆಗಳಿಗಾಗಿ ಸಾರ್ವಜನಿಕರ ಮುಂದಿಟ್ಟಿತ್ತು, ಆದಾಗ್ಯೂ ಮಸೂದೆ ಪಾಸ್‌ ಆಗಲಿಲ್ಲ. ವರ್ಷದ ಬಳಿಕ ದೆಹಲಿ ಹೈಕೋರ್ಟ್‌ ಕ್ರೀಡಾ ಸಂಹಿತೆ 2011 ಅನ್ನು ಎತ್ತಿ ಹಿಡಿಯಿತು.

* 2015ರಲ್ಲಿ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ 2011ರ ಮರು ಕರಡು ರಚನೆಗಾಗಿ ಒಂದು ಕಾರ್ಯನಿರತ ಗುಂಪನ್ನು ರಚಿಸಲಾಯಿತು. ಆದರೆ ಈ ಗುಂಪಿನಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯ ಉನ್ನತ ಅಧಿಕಾರಿಗಳನ್ನು ಸೇರಿಸುವುದನ್ನು ಹಿತಾಸಕ್ತಿ ಸಂಘರ್ಷದ ಪ್ರಕರಣ ಎಂದು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.

* 2017ರಲ್ಲಿ ಆಗಿನ ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಕ್ರೀಡೆಗಳಲ್ಲಿ ಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಸಂಹಿತೆ 2017 ಕರಡು ಸಿದ್ಧಪಡಿಸಲು ಸಮಿತಿ ರಚಿಸಲಾಯಿತು. ಒಲಿಂಪಿಯನ್ ಶೂಟರ್‌ ಅಭಿನವನ್ ಬಿಂದ್ರಾ, ಅಂಜು ಬಾಬಿ ಜಾರ್ಜ್ ಮತ್ತು ಪ್ರಕಾಶ್‌ ಪಡುಕೋಣೆ, ಆಗಿನ ಐಒಎ ಮುಖ್ಯಸ್ಥ ನರೀಂದರ್‌ ಬಾತ್ರಾ ಸಮಿತಿ ಸದಸ್ಯರಾಗಿದ್ದರು. ಇದನ್ನೂ ಕೂಡ ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಸಮಿತಿಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಕೋರ್ಟ್‌ ಸೂಚಿಸಿತ್ತು.

* 2019ರಲ್ಲಿ ಇಲಾಖೆಯು ನಿವೃತ್ತ ನ್ಯಾಯಾಧೀಶರಾದ ಮುಕುಂದಕಂ ಶರ್ಮಾ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಿ, ಕ್ರೀಡಾ ಸಂಹಿತೆ 2017ರ ಕರಡು ಪರಿಶೀಲನೆ ಮತ್ತು ಎಲ್ಲರಿಗೂ ಸ್ವೀಕಾರಾರ್ಹವಾಗುವಂತ ಕ್ರಮಗಳನ್ನು ಸೂಚಿಸಲು ನಿರ್ದೇಶಿಸಲಾಗಿತ್ತು. ಅದೇ ವರ್ಷ ದೆಹಲಿ ಹೈಕೋರ್ಟ್‌ ಸಮಿತಿ ರಚನೆಗೆ ತಡೆ ನೀಡಿತು. ಆ ಆದೇಶ ಇಲ್ಲಿಯವರೆಗೆ ಜಾರಿಯಲ್ಲಿದೆ.

* 2024ರಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯ ಕರಡನ್ನು ಬಿಡುಗಡೆ ಮಾಡಿ, ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಆಹ್ವಾನಿಸಲಾಯಿತು. ಐಒಎ, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು, ಕ್ರೀಡಾಪಟುಗಳು, ತರಬೇತುದಾರರು, ಕಾನೂನು ತಜ್ಞರು ಮತ್ತು ಕ್ರೀಡಾಪಟುಗಳ ನಿರ್ವಹಣೆಯಲ್ಲಿ ತೊಡಗಿರುವ ಖಾಸಗಿ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.

* ಈ ಮಸೂದೆಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ, ವಿಶ್ವ ಅಥ್ಲೆಟಿಕ್ಸ್, ಫಿಫಾ ಮತ್ತು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ ( ಎಫ್‌ಐಎಚ್‌) ಸೇರಿದಂತೆ ಅಂತಾರಾಷ್ಟ್ರೀಯ ಒಕ್ಕೂಟಗಳೊಂದಿಗೆ ಹಂಚಿಕೊಳ್ಳಲಾಯಿತು. ಸಂಸತ್ತಿಗೆ ಅಂತಿಮವಾಗಿ ಹೋಗುವ ಮೊದಲು ಒಟ್ಟು 700 ಪ್ರತಿಕ್ರಿಯೆಗಳನ್ನು ಕ್ರೀಡಾ ಇಲಾಖೆ ಸ್ವೀಕರಿಸಿತ್ತು.

* ಜು.23, 2025: ಲೋಕಸಭೆಯಲ್ಲಿ ಮಸೂದೆ ಮಂಡಿಸಲಾಯಿತು.

*ಆ.11,2025: ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ ಅವರು ಕೆಲವು ತಿದ್ದುಪಡಿಗಳೊಂದಿಗೆ ಲೋಕಸಭೆಯಲ್ಲಿ ಪುನಃ ಮಂಡಿಸಿದರು. ಸಂಕ್ಷಿಪ್ತ ಚರ್ಚೆ ನಂತರ ಅದನ್ನು ಅಂಗೀಕರಿಸಲಾಯಿತು.

* ಆ. 12, 2025: ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲಾಯಿತು. ಅಲ್ಲಿ ಎರಡು ಗಂಟೆಗಳ ಚರ್ಚೆ ಬಳಿಕ ಅಂಗೀಕರಿಸಲಾಯಿತು.