ಇಬ್ಬರು ವಿದ್ಯಾರ್ಥಿಗಳು ಸೋಡಾ ಬಾಟಲಿಗಳು, ನೀರು ಮತ್ತು ಸಂಕುಚಿತ ಗಾಳಿಯನ್ನು ಬಳಸಿ ಎರಡು ಹಂತದ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದ್ದು ಇವರ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಮಕ್ಕಳ ಸೃಜನಶೀಲತೆಗೆ ಅಂತ್ಯ ಎಂಬುದಿಲ್ಲ, ಪ್ರತಿಯೊಂದು ವಿಚಾರವನ್ನು ಕುತೂಹಲದಿಂದ ನೋಡುವ ಮಕ್ಕಳಿಗೆ ನೂರೊಂದು ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳಿಗೆ ಸರಿಯಾದ ಮಾರ್ಗದರ್ಶನ ಉತ್ತರ ಸಿಕ್ಕಿದರೆ ಆ ಮಕ್ಕಳು ಏನಾದರೂ ಹೊಸದನ್ನು ಸಾಧಿಸುವುದಕ್ಕೆ ಹೋಗುತ್ತಾರೆ. ಅದೇ ರೀತಿ ಇಲ್ಲಿ ಪುಟಾಣಿಗಳ ಬುದ್ಧಿವಂತಿಕೆ ಕುತೂಹಲವೂ ಅವರಿಗೆ ಹೊಸದೊಂದು ವಿಚಾರವನ್ನು ಕಲಿಸಿದೆ. ಹೌದು ಮಕ್ಕಳು ಕೇವಲ ಸೋಡಾ ಬಾಟಲ್‌ಗಳನ್ನು ಬಳಸಿ ಎರಡು ಹಂತದ ಯಶಸ್ವಿ ರಾಕೆಟ್‌ನ್ನು ಸಿದ್ಧಪಡಿಸಿದ್ದು ಆ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಮಕ್ಕಳು ಸೋಡಾ ಬಾಟಲ್‌ನಲ್ಲಿ ನಿರ್ಮಿಸಿದ ರಾಕೆಟ್ ಲಾಂಚ್ ಆಗಿ ಆಕಾಶದೆತ್ತರಕ್ಕೆ ಹಾರುವುದನ್ನು ನೋಡಬಹುದಾಗಿದೆ.
ಅಂದಹಾಗೆ ರಾಕೆಟ್ ನಿರ್ಮಿಸಿ ಸೃಜನಶೀಲತೆ ಮೆರೆದಿರುವುದು ಚೀನಾದ ಮಕ್ಕಳು, ಚೀನಾದ ಇಬ್ಬರು ವಿದ್ಯಾರ್ಥಿಗಳು ಸೋಡಾ ಬಾಟಲಿಗಳು, ನೀರು ಮತ್ತು ಸಂಕುಚಿತ ಗಾಳಿಯನ್ನು(compressed air) ಮಾತ್ರ ಬಳಸಿಕೊಂಡು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಎರಡು ಹಂತದ ರಾಕೆಟ್ ಅನ್ನು ನಿರ್ಮಿಸುವ ಮೂಲಕ ಇಂಟರ್ನೆಟ್ ಅನ್ನು ಬೆರಗುಗೊಳಿಸಿದ್ದಾರೆ. ಸೃಜನಶೀಲತೆ ಮತ್ತು ವಿಜ್ಞಾನವು ದಿನನಿತ್ಯದ ವಸ್ತುಗಳನ್ನು ಅಸಾಧಾರಣವಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಅವರ ಈ ವೀಡಿಯೋ ತೋರಿಸುತ್ತಿದೆ.
ವೀಡಿಯೋದಲ್ಲಿ ರಾಕೆಟ್ ಒತ್ತಡಕ್ಕೊಳಗಾದ ನೀರಿನಿಂದ ಚಾಲಿತವಾಗಿ ಸರಾಗವಾಗಿ ಮೇಲಕ್ಕೆ ಹಾರಿದೆ. ಅದರ ಹಾರಾಟದ ಮಧ್ಯದಲ್ಲಿ, ಮೊದಲ ಹಂತವು ಬೇರ್ಪಟ್ಟಿದ್ದು, ಇದು ಎರಡನೇ ಹಂತವು ಹೆಚ್ಚು ಎತ್ತರಕ್ಕೆ ಏರಲು ಅವಕಾಶ ಮಾಡಿಕೊಟ್ಟಿದೆ. ಈ ಮೊದಲ ಹಂತ ಬೇರ್ಪಡುವಿಕೆನಿಖರ ಮತ್ತು ಸಮಯೋಚಿತವಾಗಿತ್ತು. ವಿದ್ಯಾರ್ಥಿಗಳು ಇಲ್ಲಿ ಮೂಲಭೂತ ಅಗತ್ಯಕ್ಕಿಂತ ಹೆಚ್ಚಿನದನ್ನು ಕಲಿತಿದ್ದಾರೆ ಎಂಬುದನ್ನು ಈ ವೀಡಿಯೋ ಸಾಬೀತುಪಡಿಸಿದೆ.
ಅಲ್ಲದೇ ಈ ರಾಕೆಟ್ ಇಳಿಯಲು ಪ್ರಾರಂಭಿಸುತ್ತಿದ್ದಂತೆ, ಪ್ಯಾರಾಚೂಟ್ ತೆರೆದುಕೊಳ್ಳುವಂತೆ ಮಕ್ಕಳು ಮೊದಲೇ ಎಲ್ಲವನ್ನು ವ್ಯವಸ್ಥಿತವಾಗಿ ಮಾಡಿದ್ದರು. ಪ್ಯಾರಾಚೂಟ್‌ನ ಸಹಾಯದಿಂದ ಈ ರಾಕೆಟ್ ಯಾವುದೇ ಹಾನಿಗೊಳಗಾಗದೇ ಸುರಕ್ಷಿತವಾಗಿ ಇಳಿಯುವುದನ್ನು ವೀಡಿಯೋದಲ್ಲಿ ನೊಡಬಹುದು. ಪ್ಯಾರಾಚೂಟ್ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡಲು ಎಚ್ಚರಿಕೆಯ ಸಮಯ ಮತ್ತು ಸಮತೋಲನದ ಅಗತ್ಯವಿರುವುದರಿಂದ ಮಕ್ಕಳ ಈ ಸಾಧನೆ ಸಣ್ಣ ಸಾಧನೆ ಏನಲ್ಲ.
ಹೀಗಾಗಿಯೇ ಈ ಮಕ್ಕಳ ವೀಡಿಯೋ ಕೆಲವೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಯ್ತು. ವೀಡಿಯೋ ನೋಡಿದ ಎಂಜಿನಿಯರ್‌ಗಳು, ಶಿಕ್ಷಕರು ಸೇರಿದಂತೆ ಅನೇಕ ರಂಗದ ಗಣ್ಯರು ಮಕ್ಕಳ ವಿಡಿಯೋಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದರು. ಸಣ್ಣದಾಗಿದ್ದರೂ ಗಮನಾರ್ಹವಾದ ಬಾಹ್ಯಾಕಾಶ ಶೈಲಿಯ ಈ ಕಾರ್ಯಾಚರಣೆಯನ್ನು ಸಾಧ್ಯವಾಗಿಸಿದ ಮಕ್ಕಳ ಕಲ್ಪನೆ, ಕೌಶಲ್ಯ ಮತ್ತು ಅವರ ಪೂರ್ತಿ ತಂಡದ ಕೆಲಸ ಹಾಗೂ ಅವರಿಗೆ ನೀಡಿದ ಮಾರ್ಗದರ್ಶನದ ಬಗ್ಗೆ ಈಗ ಭಾರಿ ಪ್ರಶಂಸೆ ವ್ಯಕ್ತವಾಗ್ತಿದೆ.
ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ, ಜೊತೆಗೆ ಸದಾ ಪ್ರಶ್ನೆ ಕೇಳುತ್ತಾ ತಲೆ ತಿನ್ನುವ ಮಕ್ಕಳಿಂದ ಪಾರಾಗುವುದಕ್ಕೆ, ಅವರ ಕೈಗೆ ಮೊಬೈಲ್ ಕೊಟ್ಟು ಅವರನ್ನು ಅವರಷ್ಟಕ್ಕೆ ಬಿಟ್ಟು ನೀವು ನೆಮ್ಮದಿಯಾಗಿ ಇರುವುದಕ್ಕೆ ಹೋಗಿ ಅವರ ಯೋಚನಾಶಕ್ತಿಯನ್ನೇ ಕೊಲ್ಲಬೇಡಿ. ಅವರ ಪ್ರಶ್ನೆಗೆ ಉತ್ತರಿಸಿ ಕುತೂಹಲಗಳನ್ನು ತಣಿಸಲು ಪ್ರಯತ್ನಿಸಿ. ಆಗ ನಿಮ್ಮ ಮಕ್ಕಳು ಭವಿಷ್ಯದ ಸೃಜನಶೀಲ ವ್ಯಕ್ತಿಗಳಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಏನಂತೀರಿ.
ಇದನ್ನೂ ಓದಿ: ತಾಯಿಗೆ ಹೊಡೆದವಳ ಚಳಿ ಬಿಡಿಸಿದ ಯುವಕ: ರಿಸೆಪ್ಷನಿಸ್ಟ್ ಮೇಲೆ ಹಲ್ಲೆ ಪ್ರಕರಣದ ಫುಲ್ ವೀಡಿಯೋ
ಇದನ್ನೂ ಓದಿ: ಅಮ್ಮನ ಕಣ್ತಪ್ಪಿಸಿ ಶಾಲೆಗೆ ಬಂದ ಮರಿಯಾನೆ: ಅರಣ್ಯ ಇಲಾಖೆಯಿಂದ ತಾಯಿ ಜೊತೆ ಸೇರಿಸುವ ಯತ್ನ
