ಡಾ. ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಗೀತಾ ಬಾಲಿ ಅವರು ತಮ್ಮ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಆದರೆ, ವೀರಕಪುತ್ರ ಶ್ರೀನಿವಾಸ್ ಅವರು ಗೀತಾ ಬಾಲಿ ಅವರನ್ನೇ ದೂಷಿಸಿದ್ದಾರೆ. ಈ ವಿವಾದಕ್ಕೆ ಕಾರಣವೇನು?
ಬೆಂಗಳೂರು (ಆ.8): ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆಗೆದು ಹಾಕಲಾಗಿದೆ. ಹಿರಿಯ ನಟ ಬಾಲಣ್ಣ ಅವರಿಗೆ ಸೇರಿದ ಅಭಿಮಾನ್ ಸ್ಟುಡಿಯೋದ ಜಾಗದಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ತೆಗೆದುಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಾಲಣ್ಣ ಅವರ ಪುತ್ರಿ ಗೀತಾ ಬಾಲಿ, ಈ ಘಟನೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಇಡೀ ವಿಷ್ಣುವರ್ಧನ್ ಸಮಾಧಿ ಜಾಗದ ಕುರಿತಾದ ವಿವಾದಕ್ಕೆ ಮೂಲ ಕಾರಣವೇ ಗೀತಾ ಬಾಲಿ ಎಂದು ಆರೋಪ ಮಾಡಿದ್ದು, ಬಾಲಣ್ಣ ಅವರ ಕುಟುಂಬ ಅತ್ಯಂತ ನೀಚ ಕುಟುಂಬ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷ್ಣುವರ್ಧನ್ ಸಮಾಧಿ ತೆಗೆದುಹಾಕಿರುವ ಕುರಿತಾಗಿ ಗೀತಾ ಬಾಲ ಮಾತು
ಈ ಕೇಸ್ ತುಂಬಾ ದೊಡ್ಡ ಕಥೆ. ಇದರಲ್ಲಿ ಬಹಳಷ್ಟು ನಡೆದು ಹೋಗಿದೆ. ಬಹಿರಂಗವಾಗಿ ಹಾಗೂ ಪಬ್ಲಿಕ್‌ನಲ್ಲಿ ಕೆಲವೊಂದು ವಿಚಾರವನ್ನು ಹೇಳಲು ಸಾಧ್ಯವಿಲ್ಲ. ನನ್ನ ದೊಡ್ಡ ತಮ್ಮ ಗಣೇಶ್‌ನನ್ನು ಒಬ್ಬರು ಕೊಲೆ ಮಾಡಿದ್ದಾರೆ. ಅದರ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ.ಅದೇ ವ್ಯಕ್ತಿಯೇ ಈಗ ಇಡೀ ಜಾಗವನ್ನು ತೆರವು ಮಾಡಿದ್ದಾರೆ. ನನಗೆ ಟಿವಿ ನೋಡಿದಾಗಲೇ ಈ ವಿಚಾರ ಗೊತ್ತಾಗಿದೆ. ವಿಷ್ಣುವರ್ಧನ್ ಅವರ ಸಮಾಧಿ ತೆಗೆದುಹಾಕಿರುವುದು ಗೊತ್ತಾಗಿದೆ. ಈ ವಿಚಾರ ನನಗೆ ಶಾಕಿಂಗ್ ಆಗಿದೆ.
ಇದರಲ್ಲಿ ನನ್ನ ಪಾತ್ರ ಇಲ್ಲ. ನನ್ನ ಕೇಸ್ ಕಳೆದ ಆರು ವರ್ಷದಿಂದ ಹೈಕೋರ್ಟ್‌ನಲ್ಲಿದೆ. ಕಳೆದ ವರ್ಷ ನನ್ನ ದೊಡ್ಡ ತಮ್ಮನ ಕೊಲೆ ಆಗಿದೆ. ಇದರಲ್ಲಿ ಒಬ್ಬ ರಾಜಕಾರಣಿ ಇದ್ದಾನೆ. ಅವನೇ ಇದೆಲ್ಲವನ್ನೂ ಮಾಡುತ್ತಿದ್ದಾನೆ. ಇವರೆಲ್ಲ ಸೇರಿಕೊಂಡು ಜಾಗವನ್ನು ಮಾರಿಕೊಂಡಿದ್ದಾರೆ. 2 ತಿಂಗಳ ಹಿಂದೆಯೇ ನನಗೆ ಇದರ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಇದು ಗಾಳಿ ಸುದ್ದಿ ಆಗಿರಬಹುದು ಎಂದುಕೊಂಡಿದ್ದೆ.
ಆದರೆ, ಈಗ ವಿಷ್ಣುವರ್ಧನ್ ಅವರ ಜಾಗವನ್ನು ತೆಗೆದುಹಾಕಿರುವ ಕಾರಣದಿಂದ ಇವರೆಲ್ಲ ಸೇರಿಕೊಂಡು ಈ ಜಾಗವನ್ನು ಮಾರಾಟ ಮಾಡಿದ್ದಾರೆ ಅನ್ನೋದು ನಿಜವಾಗಿದೆ. ಆದರೆ, ಇದರ ಬಗ್ಗೆ ಕೇಸ್ ಇದೆ. ನಾನು ತಡೆಯಾಜ್ಞೆ ತಂದುಕೊಳ್ಳಬೇಕಿತ್ತು. ಸ್ಟೇ ತರದೇ ಇದ್ದಿದ್ದೇ ತಪ್ಪಾಗಿದೆ. ಈಗ ಒಬ್ಬ ಮುಖ್ಯವ್ಯಕ್ತಿ ಬಂದು ಅಲ್ಲಿನ 10 ಎಕರೆಗೆ ತಾನೇ ಯಜಮಾನ ಎಂದು ಕೇಸ್ ಹಾಕಿದ್ದಾನೆ. ಹೊಸ ಸುಳ್ಳು ಕೇಸ್‌ಅನ್ನು ಅವರು ಫೈಲ್ ಮಾಡಿದ್ದಾರೆ. ಅವರ ವಕೀಲರು ಕೋರ್ಟ್‌ಗೆ ಬಂದಾಗ ಅದನ್ನು ಪ್ರೂವ್ ಮಾಡಿದ್ದೇನೆ. ಇಡೀ ಪ್ರಕರಣದಲ್ಲಿ ಎಷ್ಟು ಫ್ರಾಡ್ ಆಗಿದೆ ಎಂದು ಕೋರ್ಟ್ ಮುಂದೆ ತಂದಿದ್ದೇನೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಬೇರೆ ಯಾರ ಬಳಿಯೂ ಮಾತನಾಡೋಕೆ ನನಗೆ ಇಷ್ಟವಿಲ್ಲ. ವೀರಕಪುತ್ರ ಶ್ರೀನಿವಾಸ್ ಅವರು ಬಾಲಣ್ಣ ಅವರ ಕುಟುಂಬ ನೀಚ ಕುಟುಂಬ ಎಂದಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಈ ಅವಹೇಳನಕಾರಿ ಹೇಳಿಕೆಯನ್ನು ನೀಡಲು ಹೇಗೆ ಸಾಧ್ಯ? ನಮ್ಮ ತಂದೆಗೂ ಗೌರವ ಇದೆ. ನಮಗೂ ಗೌರವವಿದೆ. ನಾವೆಲ್ಲೂ ಗೌರವದಿಂದ ಬಾಳುತ್ತಿದ್ದೇವೆ. ನಮ್ಮ ತಂದೆ ಹೋದ ಬಳಿಕ ಅವರ ಗೌರವ ಕಾಪಾಡಿಕೊಂಡು ನಾನು ಬರುತ್ತಿದ್ದೇನೆ. ಆದರೆ, ಮಾಧ್ಯಮಗಳಿಗೆ ಸತ್ಯ ತಿಳಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಗೀತಾ ಬಾಲಿ ಹೇಳಿದ್ದಾರೆ.
ಎಲ್ಲದಕ್ಕೂ ಗೀತಾ ಬಾಲಿಯೇ ಕಾರಣ ಎಂದ ವೀರಕಪುತ್ರ ಶ್ರೀನಿವಾಸ್: ಗೀತಾ ಬಾಲಿಯವರೇ ಹೇಳಿದ್ದಾರೆ ಒಬ್ಬರಿಗೊಬ್ಬರು ಕೊಲೆ ಮಾಡಿಕೊಳ್ಳುತ್ತಾರೆ ಅಂತಾ. ಇನ್ನು ಗೀತಾ ಬಾಲಿ ಅವರಿಂದಲೇ ಇದೆಲ್ಲವೂ ಶುರುವಾಗಿದ್ದು. ಇವತ್ತು ಅವರು ತಾವೇನೂ ಮಾಡಿಲ್ಲ ಅಂತಾ ಸುಳ್ಳು ಹೇಳ್ತಿದ್ದಾರೆ. ತಾವು ಒಳ್ಳೆಯವರು ಅನ್ನೋ ರೀತಿಯಲ್ಲಿ ಮಾತನಾಡ್ತಿದ್ದಾರೆ ಎಂದು ಹೇಳಿದ್ದಾರೆ.
