ಡಾ.ವಿಷ್ಣುವರ್ಧನ್ ಸಮಾಧಿ ತೆರವು ವಿಚಾರಕ್ಕೆ ವಿಷ್ಣು ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಕುಟುಂಬದವರು ಮತ್ತು ನ್ಯಾಯಾಲಯದ ತೀರ್ಪಿನಿಂದಾಗಿ ಸಮಾಧಿ ತೆರವು ಅನಿವಾರ್ಯವಾಯಿತು ಎಂದು ಸಮಿತಿ ಹೇಳಿದೆ.
ಬೆಂಗಳೂರು (ಆ.8): ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಸಮಾಧಿ ತೆರವು ಮಾಡಿದ ವಿಚಾರಕ್ಕೆ ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾತನಾಡಿದ್ದಾರೆ. ವಿಷ್ಣುವರ್ಧನ್ ನಮ್ಮ ನಡುವೆ ಬುದ್ದನ ತರಹ ಬದುಕಿದವರು. ಅವರು ಬದುಕಿದ್ದಾಗಲೇ ಸಾಕಷ್ಟು ವಿವಾದ ಮಾಡಿದ್ದರು. ಬ್ಯಾನರ್ ಗೆ ಬೆಂಕಿ ಹಚ್ಚಿದ್ದರು. ಪ್ರತಿಭಟನೆ ಮಾಡಿದ್ದರು. ಈಗ ಅವರು ಸತ್ತಮೇಲೂ ಅದನ್ನು ಮುಂದುವರೆಸಿದ್ದಾರೆ. ಒಬ್ಬ ಮೇರು ನಟನಿಗೆ 4 ಅಡಿ ಜಾಗ ಕೊಡೋಕೆ ಆಗದ ನಾವು ಅವರಿಗೆ ಏನು ಕೊಟ್ಟಿದ್ದೀವಿ ಅನ್ನೋದನ್ನ ನೋಡಬೇಕು ಎಂದು ಹೇಳಿದ್ದಾರೆ.
ನಾವು ಕಳೆದ ಹನ್ನೊಂದು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೆವು. ಆದರೆ ಕೋರ್ಟ್ ತೀರ್ಪು ನಮ್ಮ ವಿರುದ್ಧವಾಗಿ ಬಂತು. ಅವರ ಕುಟುಂಬದವರೂ ನಮ್ಮ ವಿರುದ್ಧ ನಿಂತರು. ಆ ಜಾಗದ ಮಾಲಿಕರಾದ ಬಾಲಣ್ಣ ಅವರ ಮಕ್ಕಳು ಮೊಮ್ಮಕ್ಕಳು ಜಾಗ ಕೊಡೋದಿಲ್ಲ ಎಂದು ನೇರವಾಗಿ ಹೇಳಿದರು. ಅಲ್ಲೀಗ ಕಮರ್ಷಿಯಲ್ ಬಿಲ್ಡಿಂಗ್ ಕಟ್ಟೋಕೆ ಹೊರಟಿದ್ದಾರೆ. ಬಾಲಣ್ಣನವರ ಸಮಾಧಿಯನ್ನೂ ಅವರು ಬಿಟಟಿಲ್ಲ.
ವಿಷ್ಣುವರ್ಧನ್ ಫ್ಯಾಮಿಲಿ ಅವರೇ ಆ ಜಾಗ ಬೇಡ ಅಂದಮೇಲೆ, ಅಭಿಮಾನಿಗಳಾಗಿ ನಮಗೆ ಆ ಜಾಗ ಕೇಳುವ ಹಕ್ಕಿಲ್ಲ ಎಂದು ಕೋರ್ಟ್ ಹೇಳಿತು. ಮೈಸೂರಿನಲ್ಲಿ ಸಮಾಧಿ ಆಗಿದೆ ನಿಜ. ಆದರೆ ಅವರು ಕೊನೆಯದಾಗಿ ಮಲಗಿದ ಜಾಗ ಅನ್ನುವ ಭಾವುಕತೆ ನಮಗೆ ಕಾಡುತ್ತಿದೆ. ಅಭಿಮಾನಿಗಳಾಗಿ ನಾವು ಭಾವುಕರಾಗಿದ್ದೇವೆ. ರಾತ್ರೋ ರಾತ್ರಿ ಸಮಾಧಿ ತೆರವು ಮಾಡಿದ್ದಾರೆ. ಈಗ ಆ ಜಾಗದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಮಗೆ ಮಧ್ಯಾಹ್ನ ವಿಚಾರ ಗೊತ್ತಾಯಿತು. ಈಗ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಹೇಳಿದ್ದಾರೆ.
