Dr Vishnuvardhan Memorial: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ನಟ ಬಾಲಣ್ಣನ ಕುಟುಂಬಸ್ಥರಿಗೆ ಸೇರಿದ ಈ ಅಭಿಮಾನ್ ಸ್ಟುಡಿಯೋದಲ್ಲಿ ಈಗ ವಿಷ್ಣು ಸಮಾಧಿ ಇಲ್ಲ.
“ಇಂದು ನಟ ವಿಷ್ಣುವರ್ಧನ್ ಅವರ ( Dr Vishnuvardhan ) ಎರಡನೇ ಸಾವಾಗಿದೆ. ವಿಷ್ಣುವರ್ಧನ್ ಸಮಾಧಿಯನ್ನು ಕೂಡ ಬಿಡಲಿಲ್ಲ. ಇಷ್ಟು ವರ್ಷಗಳಿಂದ ಹೋರಾಟ ಮಾಡಿದ್ರೂ ಕಾಪಾಡೋಕೆ ಯಾರೂ ಬರಲಿಲ್ಲ. ನಾನು ಅವರ ಅಭಿಮಾನಿಯಲ್ಲ, ನಾಯಿ” ಎಂದು ಕನ್ನಡ ನಿರ್ದೇಶಕ ರವಿ ಶ್ರೀವತ್ಸ ಅವರು ಹೇಳಿದ್ದಾರೆ.
“ಕನ್ನಡದ ಮೇರುನಟನನ್ನು ಈ ಥರ ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ. ಇದು ನಿಜಕ್ಕೂ ಬೇಸರ ತಂದಿದೆ” ಎಂದು ಅಭಿಮಾನಿಗಳು, ಡಾ ವಿಷ್ಣುವರ್ಧನ್ ಅವರ ಸಮಾಧಿಯಿದ್ದ ಅಭಿಮಾನ್ ಸ್ಟುಡಿಯೋ ಬಳಿ ಕಣ್ಣೀರು ಹಾಕಿದ್ದಾರೆ. “ಇಲ್ಲಿ ದೊಡ್ಡ ದೊಡ್ಡ ಜನರು ಆಟ ಆಡಿದ್ದಾರೆ, ಅದಕ್ಕೆ ದೇವರು ದೊಡ್ಡದಾಗಿ ಮಾಡ್ತಾರೆ, ಕರ್ಮ ಬಿಡೋದಿಲ್ಲ” ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ರಾತ್ರೋರಾತ್ರಿ ಸಮಾಧಿಯನ್ನು ಉರುಳಿಸಿದ್ದು, ವರಮಹಾಲಕ್ಷ್ಮೀ ಹಬ್ಬದಲ್ಲಿದ್ದ ಕನ್ನಡಿಗರಿಗೆ ದೊಡ್ಡ ಶಾಕ್ ಉಂಟು ಮಾಡಿದೆ. ಅಂದಹಾಗೆ ಅಭಿಮಾನಿಗಳು ಮುಂದೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಮಾಧಿ ನಾಶ ಮಾಡಿದವರಿಗೆ ಹಿಡಿ ಶಾಪ ಹಾಕಿದ್ದಾರೆ.
ಕಣ್ಣೀರು ಹಾಕಿದ ರವಿ ಶ್ರೀವತ್ಸ!
“ನಾನು ಡಾ ವಿಷ್ಣುವರ್ಧನ್ ಅವರ ಅಭಿಮಾನಿ ಅಲ್ಲ. ನಮ್ಮ ಯಜಮಾನ್ರ ಮನೆ ಕಾಯುವ ನಾಯಿ ನಾನು. ನನ್ನ ಬಳಿ ಕಾರ್, ಮನೆ, ದುಡ್ಡು ಎಲ್ಲವೂ ಆ ಯಜಮಾನ ಹಾಕಿದ ಭಿಕ್ಷೆ. ಆ ಯಜಮಾನ ಇಲ್ಲದೆ ನನ್ನ ಸಿನಿಮಾದಲ್ಲಿ ನಟಿಸಿದವರು ಇಲ್ಲ. ನಮ್ಮ ಯಜಮಾನರಿಗೆ ತುಂಬ ಅವಮಾನ ಮಾಡಿದ್ದಾರೆ. ಸಾಕು, ಈ ನರಕ ಅನುಭವಿಸೋಕಾಗಲ್ಲ ಅಂತ ವಿಷ್ಣುವರ್ಧನ್ ಅವರು ಹೊರಟು ಹೋದರು. ಯಾರಾದರೂ ಬಂದು ಕಾಪಾಡ್ತಾರೆ ಎಂದು ನೊಂದು ನೊಂದು ಕಾಯ್ತಿತ್ತೆನೋ ಆ ಜೀವ ಪಾಪ” ಎಂದು ರವಿ ಶ್ರೀವತ್ಸ ಅವರು ಮಾಧ್ಯಮವೊಂದರ ಬಳಿ ಹೇಳಿದ್ದಾರೆ.
“ಇಂದು ವರಮಹಾಲಕ್ಷ್ಮೀ ಹಬ್ಬ, ಪಾಯಸ ಊಟ ಮಾಡಿ, ಒಬ್ಬಟ್ಟು ತಿನ್ನಲಿ. ಇದು ವಿಷ್ಣುವರ್ಧನ್ ಅವರ ಎರಡನೇ ಸಾವು. ಒಂದು ಸಲ ಕಳೆದುಕೊಂಡಾಗ ನೋವು ಬರತ್ತೆ, ಎರಡನೇ ಸಲ ಕಳೆದುಕೊಂಡಾಗ ನೋವು ಬರತ್ತೆ. ಇಂದು ವಿಷ್ಣುವರ್ಧನ್ ಅವರು ಶಾಶ್ವತವಾಗಿ ನಮ್ಮಿಂದ ದೂರ ಆಗಿದ್ದಾರೆ. ನಾನಿಲ್ಲಿ ಬಂದಾಗ ಸಾಹಸಸಿಂಹ ವಿಷ್ಣುವರ್ಧನ್ ಅವರು ಮಲಗಿದ್ದಾರೆ ಅಂತ ಹೇಳ್ತಿದ್ರು, ಇಂದು ಯಾವುದೋ ನಾಯಿ ಅಲ್ಲಿ ಮಲಗಿತ್ತು. ನಾನು ನಾಯಿಯಾಗಿ ಏನು ಮಾಡಕಾಗತ್ತೆ? ಅಲ್ಲಿ ಯಾರು ಮನೆ ಕಟ್ಟುತ್ತಾರೆ ಅಂತ ನೋಡ್ತೀನಿ, ಬ್ರಾಹ್ಮಣನ ಶಾಪ ಸುಮ್ಮನೆ ಬಿಡೋದಿಲ್ಲ, ನಾನು ಕಾಯ್ತೀನಿ” ಎಂದು ರವಿ ಶ್ರೀವತ್ಸ ಹೇಳಿದ್ದಾರೆ.
ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಕೂಡ ಫೇಸ್‌ಬುಕ್ ಲೈವ್ ಬಂದಿದ್ದು, “ಸಮಾಧಿ ಜಾಗ ಕೊಡಿ ಅಂತ ಹೇಳಲು ನೀವು ಕುಟುಂಬಸ್ಥರಲ್ಲ, ನೀವು ಯಾರು ಅಂತ ಹೈಕೋರ್ಟ್ ಜಡ್ಜ್ ಹೇಳಿದ್ದರು. ನಮಗೆ ವಿಷ್ಣು ಕುಟುಂಬಸ್ಥರು ಕೂಡ ಬೆಂಬಲ ಕೊಡಲಿಲ್ಲ. ಸರ್ಕಾರ ಕೂಡ ಕೈಕಟ್ಟಿ ಕುಳಿತಿದೆ. ಇನ್ನು ಬಾಲಣ್ಣನ ಕುಟುಂಬಸ್ಥರು ನೀಚರು. ಅಂಥ ಥರ್ಡ್‌ಗ್ರೇಡ್, ಹಣದ ಹಿಂದೆ ಬಿದ್ದ ಕುಟುಂಬವನ್ನು ನಾವು ಎಲ್ಲಿಯೂ ನೋಡಿಲ್ಲ. ನಾವು ಅಭಿಮಾನಿಗಳಾಗಿ ಇಷ್ಟು ವರ್ಷಗಳ ಕಾಲ ಲಕ್ಷಾಂತರ ರೂಪಾಯಿ ಕೊಟ್ಟು ಹೋರಾಟ ಮಾಡಿದರೂ ಕೂಡ ಪ್ರಯೋಜನ ಆಗಲಿಲ್ಲ” ಎಂದು ಹೇಳಿದ್ದಾರೆ.
