ಕೋಸು, ಹುರುಳಿಕಾಯಿ, ಕರಿಬೇವು... ಅಬ್ಬಬ್ಬಾ ಕೇವಲ 1 ರೂಪಾಯಿಗೆ ಈ ಪರಿ ಭರ್ಜರಿ ತರಕಾರಿ ಸಿಗತ್ತೆ ಎಂದರೆ ಖಂಡಿತಾ ಹಲವರು ನಂಬಲಿಕ್ಕಿಲ್ಲ. ಹಾಗಿದ್ರೆ ಏನಿದು ನೋಡಿ!
ಹಿಂದೆಲ್ಲಾ ಜೇಬಲ್ಲಿ ಒಂದಿಷ್ಟು ದುಡ್ಡು ಇಟ್ಟುಕೊಂಡು ಹೋದರೆ, ಭಾರಿ ಚೀಲದ ತುಂಬ ತರಕಾರಿ ತರುತ್ತಿದ್ದರೆ, ಈಗ ಚೀಲದ ತುಂಬ ದುಡ್ಡು ಕೊಂಡೊಯ್ದರೆ ಜೇಬಿನ ತುಂಬ ತರಕಾರಿ ತರುವ ಕಾಲ ಬಿಡಿ. ಹಾಗೆಂದು ಅಂದಿನ ದುಡ್ಡಿನ ಮೌಲ್ಯಕ್ಕೂ, ಇಂದಿನ ದುಡ್ಡಿನ ಮೌಲ್ಯಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದು ಅಷ್ಟೇ ನಿಜ. ಆಗೆಲ್ಲಾ ಪೈಸೆ ಪೈಸೆ ಲೆಕ್ಕವಾದರೆ, ಈಗ ಕೋಟಿ ಕೋಟಿಗಳಲ್ಲಿಯೇ ಮಾತು. ಅದೆಷ್ಟೋ ಮಂದಿಗೆ ಲಕ್ಷ ಲಕ್ಷ ಎಂದರೆ ಅಲಕ್ಷ್ಯ ಎನ್ನುವ ಸ್ಥಿತಿಯೂ ನಿರ್ಮಾಣವಾಗಿ ಬಿಟ್ಟಿದೆ. ಆ ಮಾತು ಬೇರೆ. ಆದರೆ ಕೇವಲ ಒಂದು ರೂಪಾಯಿಗೆ ಕೋಸು ಹುರುಳಿಕಾಯಿ... ಅದೂ ಇದೂ ಅಂತೆಲ್ಲಾ ಸಿಕ್ಕಿಬಿಟ್ಟರೆ...? ಅರೇ ಇದೇನು ಕನಸಾ ಎಂದುಕೊಂಡ್ರಾ? ಇವತ್ತಿಗೆ ಇದು ಕನಸೇ ನಿಜ. ಆದರೆ ಕೆಲ ವರ್ಷಗಳ ಹಿಂದೆ ಹೀಗೆ ಆಗುತ್ತಿತ್ತು ಎನ್ನುವುದು ಇಂದಿನ ಯುವ ಪೀಳಿಗೆಯವರು ಊಹಿಸಿಕೊಳ್ಳೋದೂ ಕಷ್ಟನೇ.
1977ರಲ್ಲಿ ಬಿಡುಗಡೆಯಾದ ಭಾಗ್ಯವಂತರು (Bhagyavantaru) ಚಿತ್ರದ ಕ್ಲಿಪ್ಪಿಂಗ್ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಈಚೆಗೆ ಅಗಲಿದ ಬಿ.ಸರೋಜಾ ದೇವಿಯವರು ನಾಯಕಿಯಾಗಿದ್ದರು. ಅವರು ತರಕಾರಿ ಬೆಲೆಯಲ್ಲಿ ಚೌಕಾಸಿ ಮಾಡುವ ವಿಡಿಯೋ ಇದಾಗಿದೆ. ಕೋಸಿಗೆ ಒಂದು ರೂಪಾಯಿ, ಹುರುಳಿಕಾಯಿ ಕಿಲೋಗೆ ಒಂದೂವರೆ ರೂಪಾಯಿ, ಕರಿಬೇವು 25 ಪೈಸೆ ಎಂದು ತರಕಾರಿ ಮಾರುವವಳು ಹೇಳಿದಾಗ, ಅದರಲ್ಲಿಯೂ ಚೌಕಾಸಿ ಮಾಡಿ ಒಂದು ರೂಪಾಯಿಗೆ ಭರ್ಜರಿ ತರಕಾರಿ ತೆಗೆದುಕೊಂಡಿರುವ ವಿಡಿಯೋ ಇದು. ಒಂದು ರೂಪಾಯಿ ಎಂದರೆ ಆ ಸಮಯದಲ್ಲಿ ಬಲು ದುಬಾರಿಯೇ ಆಗಿರುವುದು ನಿಜವಾದರೂ, ಇಂದು ಅದನ್ನು ನೋಡಿದವರು ಅರೆ... ಹೀಗೂ ಒಂದು ಕಾಲ ಇತ್ತೆ ಎಂದು ಅಚ್ಚರಿ ಪಡುವುದು ಇದೆ.
ಈಗಿನ ಯುವಜನರು ಇದು ತಮಾಷೆಯ ವಿಡಿಯೋ ಇರಬೇಕು, ಹೀಗೆಲ್ಲಾ ಇತ್ತಾ ಎಂದು ಕಮೆಂಟ್ ಹಾಕುವುದನ್ನು ನೋಡಿದರೆ, ಇನ್ನು ಸ್ವಲ್ಪ ವರ್ಷ ಹೋದರೆ, ಇನ್ನೊಂದು ಜನರೇಷನ್ ಬಂದರೆ ನಿಜಕ್ಕೂ ಇಂಥ ವಿಡಿಯೋಗಳು ತಮಾಷೆಯ ವಸ್ತುವಾಗಿ ಕಂಡರೂ ಅಚ್ಚರಿಯೇನಿಲ್ಲ. ಈ ವಿಡಿಯೋದಲ್ಲಿ 1977ರ ತರಕಾರಿ ಬೆಲೆ ಎಂದು ತಿಳಿಸಲಾಗಿದೆ. ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ (Dr. Raj Kumar) ಮತ್ತು ಬಿ.ಸರೋಜಾದೇವಿ (B.Saroja Devi) ನಟಿಸಿದ್ದಾರೆ. ಇನ್ನು ಭಾಗ್ಯವಂತರು ಚಿತ್ರವು ಹಾಗೂ ಅದರಲ್ಲಿನ ಹಾಡು ಇಂದಿನ ಜನಮಾನಸದಲ್ಲಿ ನೆಲೆಯೂರಿ ನಿಂತಿದೆ. 'ಭಾಗ್ಯವಂತರು' ಸಿನಿಮಾವು ತಮಿಳಿನ 'ದೀರ್ಘ ಸುಮಂಗಲಿ' ಚಿತ್ರದ ರಿಮೇಕ್ ಆಗಿತ್ತು. ಈ ಚಿತ್ರದ ಕ್ಲೈಮ್ಯಾಕ್ಸ್ ನೋಡಲು ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಕಷ್ಟವಾಗುತ್ತಿತ್ತಂತೆ. ನಾಯಕ ಮತ್ತು ನಾಯಕಿಯ ಅಭಿನಯ ನೋಡಿ ತಾವು ಕಣ್ಣೀರು ಹಾಕಿರುವುದಾಗಿ ಪಾರ್ವತಮ್ಮನವರು ಹೇಳಿಕೊಂಡಿದ್ದರು.
ಈ ಚಿತ್ರದಲ್ಲಿ ನಾಯಕ ಕುಮಾರ್ (ರಾಜ್‌ಕುಮಾರ್) ಮತ್ತು ನಾಯಕಿ ಪಾರ್ವತಿ (ಸರೋಜಾದೇವಿ) ದಂಪತಿಯ ಯೌವನದಿಂದ ವೃದ್ಧರಾಗುವವರೆಗಿನ ಜೀವನ ಪಯಣವನ್ನು ಹೇಳಲಾಗಿದೆ. ಈ ದಂಪತಿ ಹೇಗೆ ಒಬ್ಬರಿಗಾಗಿ ಒಬ್ಬರು ಉಸಿರಾಡುತ್ತಾ, ಪ್ರತಿಕ್ಷಣವೂ ತ್ಯಾಗದಿಂದ ದೊರಕುವ ಆನಂದದ ಅಮೃತವನ್ನು ಸವಿಯುತ್ತಾ ಸಾಗುತ್ತಾರೆ ಎಂಬುದನ್ನು ತೋರಿಸುತ್ತದೆ. ಕನ್ನಡ ಚಿತ್ರರಂಗ ಕಂಡು ಈ ಇಬ್ಬರು ಮಹಾ ನಟರ ಜೋಡಿ ಎಂದ ಮೇಲೆ ಕೇಳಬೇಕೆ? ಇಬ್ಬರೂ ತಮ್ಮ ಅಭಿನಯದ ಮೂಲಕ ಈ ಪಾತ್ರಗಳಿಗೆ ಜೀವ ತುಂಬಿದ್ದರು. ಕ್ಲೈಮ್ಯಾಕ್ಸ್ ನೋಡಿ ಪಾರ್ವತಮ್ಮನವರೇ ಕಣ್ಣೀರು ಹಾಕಿದ್ದರು ಎಂದರೆ ಯಾವ ಪರಿಯಲ್ಲಿ ಇದು ಪರಿಣಾಮ ಬೀರಿದೆ ನೋಡಿ...
