ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪದ ಮೇಲೆ ಮುಂಬೈನ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ನಟನ ಮ್ಯಾನೇಜರ್​ ಕೊಟ್ಟ ಪ್ರತಿಕ್ರಿಯೆ ಏನು? 

ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪದ ಮೇಲೆ ಮುಂಬೈನ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗಡೆ ಅವರು ಧ್ರುವ ಸರ್ಜಾ ವಿರುದ್ಧ 3.15 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಕೇಸು ದಾಖಲಾಗಿ ವಿಷಯ ಕೋರ್ಟ್​ನಲ್ಲಿ ಇದ್ದು, ಬಹಳ ದಿನಗಳ ಬಳಿಕ ಇದು ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಇದೀಗ ಧ್ರುವ ಸರ್ಜಾ ಅವರ ಮ್ಯಾನೇಜರ್​ ಅಶ್ವಿನ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ಸುಳ್ಳು ಆರೋಪ ಎಂದಿರುವ ಅವರು ಅಂದು ನಡೆದ ಘಟನೆಯ ಬಗ್ಗೆ ಬಾಸ್​ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. 2.90 ಕೋಟಿ ವಂಚನೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಇದು ಸುಳ್ಳು. ಅಸಲಿಗೆ ಆಗಿದ್ದೇನೆಂದರೆ, ಯೋಧರ ಕುರಿತು ಒಂದು ಸಿನಿಮಾ ಮಾಡುವುದಾಗಿ ನಟನಿಗೆ 2.90 ಕೋಟಿ ಅಡ್ವಾನ್ಸ್​ ಕೊಡಲಾಗಿತ್ತು. ಸುಮಾರು ಐದು ವರ್ಷದ ಮೇಲಾಯ್ತು. ನಾವು ಸಾಕಷ್ಟು ಬಾರಿ ಕೇಳಿಕೊಂಡರೂ ಅದು ಮುಂದುವರೆದಿರಲಿಲ್ಲ. ಸೀರಿಯಲ್​ ಇತ್ಯಾದಿಗಳಲ್ಲಿ ಬಿಜಿ ಇರುವುದಾಗಿ ಅವರು ಹೇಳುತ್ತಲೇ ಬಂದರು. ಕೊನೆಗೆ, ಈ ಬಗ್ಗೆ ಪದೇ ಪದೇ ವಿಚಾರಿಸಿದಾಗ, ಕನ್ನಡದಲ್ಲಿ ಮಾಡುವುದಾದರೆ ದೊಡ್ಡ ಬಜೆಟ್​ ಆಗೋಗುತ್ತೆ. ಕನ್ನಡದಲ್ಲಿ ಅಷ್ಟೊಂದು ಸಕ್ಸಸ್​ ಆಗುವುದು ಕಡಿಮೆ. ಆದ್ದರಿಂದ ಹಿಂದಿ ಅಥವಾ ತೆಲಗುವಿನಲ್ಲಿ ಮಾಡಿ ಆಮೇಲೆ ಕನ್ನಡಕ್ಕೆ ಡಬ್​ಮಾಡಿದ್ರೆ ಆಯಿತು ಎಂದರು. ಆದರೆ ಧ್ರುವ ಅವರು ಅದಕ್ಕೆ ಒಪ್ಪಲಿಲ್ಲ. ಮಾತುಕತೆಯಂತೆಯೇ ಕನ್ನಡದಲ್ಲಿಯೇ ಆಗಬೇಕು ಎಂದರು. ಅಷ್ಟೇ ಅಲ್ಲದೇ ಬಜೆಟ್​ ಹೆಚ್ಚಾಯಿತು ಎಂದರೆ, ನಾವು ಬೇರೆ ರೈಟರ್ಸ್​ ಕಳುಹಿಸಿಕೊಡ್ತೇವೆ. ಅವರು ಕಡಿಮೆ ಬಜೆಟ್​ನಲ್ಲಿ ಮಾಡ್ತಾರೆ ಎಂದು ಕಳುಹಿಸಿಕೊಟ್ಟಿದ್ದೆವು ಎಂದು ಮ್ಯಾನೇಜರ್​ ಹೇಳಿದ್ದಾರೆ.

ಕೊನೆಗೆ ಜೂನ್​ 28ರಂದು ಅವರನ್ನು ಭೇಟಿ ಮಾಡಿದಾಗಲೂ ಕನ್ನಡ ಬೇಡವೇ ಬೇಡ ಎಂದು ಪಟ್ಟು ಹಿಡಿದು ಕುಳಿತರು. ಆಮೇಲೆ ಕನ್ನಡವೇ ಬೇಕೆಂದು ಹೇಳಿದಾಗ ಕನ್​ಫ್ಯೂಷನ್​ನಲ್ಲಿಯೇ ಇದ್ದ ಅವರು ಹೊರಟು ಹೋದರು. ಈ ಬಗ್ಗೆ ಫಿಲ್ಮ್​ ಛೆಂಬರ್​ನಲ್ಲಿ ಕೂಡ ಇದಾಗಲೇ ಮಾತುಕತೆ ನಡೆದಿದೆ. ಆಮೇಲೆ ನೋಡಿದ್ರೆ ಅವರು ವಕೀಲರಿಂದ ದೂರು ದಾಖಲು ಮಾಡಿಸಿದ್ದಾರೆ. ನಾವೇನೂ ಚಿತ್ರ ಮಾಡುವುದಿಲ್ಲ ಎಂದು ಹೇಳಲಿಲ್ಲ. ಅಷ್ಟೇ ಅಲ್ಲದೇ ಅವರು ಸಿನಿಮಾ ಶುರು ಮಾಡಲ್ಲ, ನಮ್ಮ ಅಡ್ವಾನ್ಸ್​ ವಾಪಸ್​ ಕೊಡಿ ಎಂದೂ ಕೇಳಲಿಲ್ಲ. ಈಗ ನೋಡಿದ್ರೆ ಹೀಗೆ ಮಾಡಿದ್ದಾರೆ ಎಂದಿರೋ ಅಶ್ವಿನ್​ ಅವರು, ಇದು ನಡೆದು ತುಂಬಾ ದಿನಗಳಾಗಿದ್ದು, ಯಾರೋ ಈಗ ಮಾಧ್ಯಮದವರಿಗೆ ಲೀಕ್​ ಮಾಡಿದ್ದಾರೆ. ವಕೀಲರ ಮೂಲಕ ಉತ್ತರ ಕೊಟ್ಟಿದ್ದು, ಕೇಸ್​ ನಡೆಯುತ್ತಿದೆ ಎಂದಿದ್ದಾರೆ.

ಧ್ರುವ ಸರ್ಜಾ ವಿರುದ್ಧ ಆರೋಪ ಏನು?

ಅದೇ ಇನ್ನೊಂದೆಡೆ, ರಾಘವೇಂದ್ರ ಹೆಗಡೆ ನೀಡಿದ ಮಾಹಿತಿಯ ಪ್ರಕಾರ, 2016ರಲ್ಲಿ ತಮ್ಮ ಮೊದಲ ಚಿತ್ರದ ಯಶಸ್ಸಿನ ಬಳಿಕ ಧ್ರುವ ಸರ್ಜಾ ಅವರೊಂದಿಗೆ ಕೆಲಸ ಮಾಡಲು ಬಯಸಿದರು. 2016ರಿಂದ 2018ರವರೆಗೆ ಸರ್ಜಾ ನಿರಂತರ ಸಂಪರ್ಕದಲ್ಲಿದ್ದು, ‘ದಿ ಸೋಲ್ಜರ್’ ಚಿತ್ರದ ಸ್ಕ್ರಿಪ್ಟ್ ನೀಡಿದರು. ಅವರ ನಿರಂತರ ವಿನಂತಿ ಹಾಗೂ ಒತ್ತಾಯದ ಹಿನ್ನೆಲೆಯಲ್ಲಿ ಸಹಕರಿಸಲು ಒಪ್ಪಿಕೊಂಡ ಹೆಗಡೆ, ಸರ್ಜಾ ಅವರ ಬೇಡಿಕೆಯಂತೆ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ 3 ಕೋಟಿ ರೂಪಾಯಿ ನೀಡಿದರು. ಈ ಹಣವನ್ನು ಅವರು ಒಂದು ಫ್ಲ್ಯಾಟ್ ಖರೀದಿಸಲು ಬಳಸಿಕೊಳ್ಳುವುದಾಗಿ ಸರ್ಜಾ ಭರವಸೆ ನೀಡಿದ್ದರು. ಹೆಗಡೆ ಅವರು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು, ತಮ್ಮ ನಿರ್ಮಾಣ ಕಂಪನಿಗಳಾದ RH ಎಂಟರ್‌ಟೈನ್‌ಮೆಂಟ್ ಹಾಗೂ ರೂ 9 ಎಂಟರ್‌ಟೈನ್‌ಮೆಂಟ್ ಮೂಲಕ ಮತ್ತು ವೈಯಕ್ತಿಕ ನಿಧಿಯಿಂದ ಒಟ್ಟು ₹3.15 ಕೋಟಿಯನ್ನು ಫೆಬ್ರವರಿ 21, 2019ರ ಒಳಗೆ ವರ್ಗಾಯಿಸಿದರು ಎಂದಿದ್ದಾರೆ.

ಒಪ್ಪಂದದ ಪ್ರಕಾರ ಚಿತ್ರೀಕರಣ ಜನವರಿ 2020ರಲ್ಲಿ ಪ್ರಾರಂಭವಾಗಿ ಜೂನ್ 2020ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಣ ಪಡೆದ ನಂತರ, ಸರ್ಜಾ ಪದೇಪದೇ ಡೇಟ್ಸ್ ಮುಂದೆ ಹಾಕುತ್ತಲೇ ಬಂದಿದ್ದಾರೆ, ನಂತರ COVID-19 ಲಾಕ್‌ಡೌನ್ ನಂತರವೂ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೆಗಡೆ ಆರೋಪಿಸಿದ್ದಾರೆ. ಅಲ್ಲದೆ, ಸ್ಕ್ರಿಪ್ಟ್ ರೈಟರ್ ಹಾಗೂ ಪ್ರಚಾರ ಸಲಹೆಗಾರರಿಗೆ ಹೆಚ್ಚುವರಿ ಪಾವತಿಗಳನ್ನು ಒತ್ತಾಯಿಸಿ, ಒಟ್ಟು ವೆಚ್ಚವನ್ನು ₹3.43 ಕೋಟಿಗೆ ಹೆಚ್ಚಿಸಿದರು. ಕೊನೆಗೆ ಸರ್ಜಾ ಯೋಜನೆಯಿಂದ ಹಿಂದೆ ಸರಿದು, ಕರೆಗಳಿಗೆ ಪ್ರತಿಕ್ರಿಯೆ ನೀಡದೆ, ಸಭೆಗಳಿಗೆ ಹಾಜರಾಗದೆ, ಮುಂದುವರಿಸಲು ಸಾಧ್ಯವಿಲ್ಲವೆಂದು ಅಲ್ಲಗಳೆದಿದ್ದಾರೆ. ಹೆಗಡೆ ಅವರು 2021ರಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್‌ಗೆ ಬಂದ ಹೈದರಾಬಾದ್ ಮೂಲದ ಪೀಪಲ್ ಮೀಡಿಯಾ ಫ್ಯಾಕ್ಟರಿಯ ಪತ್ರವನ್ನು ಉಲ್ಲೇಖಿಸಿದ್ದು, ಅದರಲ್ಲಿ ಸರ್ಜಾ ಮತ್ತೊಂದು ಯೋಜನೆಗೆ ಹಣ ಪಡೆದು ಕೆಲಸ ನಿರಾಕರಿಸಿದ್ದಾಗಿ ಮತ್ತು ಮಾಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾಗಿ ತಿಳಿಸಲಾಗಿದೆ.

ಹಣಕಾಸಿನ ವ್ಯವಾಹರದ ಕೇಸ್​:

ಅಂಬೋಲಿ ಪೊಲೀಸರು, ಹೆಗಡೆ ಸಲ್ಲಿಸಿದ ಹಣಕಾಸಿನ ದಾಖಲೆಗಳು, ಒಪ್ಪಂದಗಳು ಹಾಗೂ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದು, 2018ರಿಂದ 18% ಬಡ್ಡಿದರದಲ್ಲಿ ಒಟ್ಟಾರೆ ನಷ್ಟ ₹9.58 ಕೋಟಿಗೂ ಮೀರಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 316(2) (ಅಪರಾಧಿ ನಂಬಿಕೆ ಉಲ್ಲಂಘನೆ) ಮತ್ತು 318(4) (ವಂಚನೆ ಹಾಗೂ ಆಸ್ತಿ ಹಸ್ತಾಂತರಕ್ಕೆ ಅಪ್ರಾಮಾಣಿಕ ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ದೂರು ಸ್ವೀಕರಿಸಿದ ಬಳಿಕ API ಪ್ರದೀಪ್ ಫಂಡೆ ಸರ್ಜಾಗೆ ಎರಡು ಬಾರಿ ಸಮನ್ಸ್ ಕಳುಹಿಸಿದರು. ಹಾಜರಾಗದೆ, ಸರ್ಜಾ ಬೆಂಗಳೂರಿನ ನ್ಯಾಯಾಲಯದಿಂದ 10 ದಿನಗಳ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಪಡೆದು, ಜುಲೈ 30ರಂದು ದಿನೋಶಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆಗಸ್ಟ್ 5ರಂದು ಮಧ್ಯಂತರ ರಕ್ಷಣೆಯೊಂದಿಗೆ ₹50,000 ಜಾಮೀನು ನೀಡಲು ನ್ಯಾಯಾಲಯ ಆದೇಶಿಸಿದ್ದು, ಪ್ರಕರಣವನ್ನು ಆಗಸ್ಟ್ 14, 2025ರವರೆಗೆ ಮುಂದೂಡಲಾಗಿದೆ.