ನಟ ಯಶ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಹಿಂದಿ ಭಾಷೆಯಲ್ಲಿನ ಲಿಂಗ ಸಂಬೋಧನೆಯ ಗೊಂದಲದಿಂದಾಗಿ ತಾನು ಹಿಂದಿ ಮಾತನಾಡಲು ಹಿಂಜರಿಯುವುದಾಗಿ ಹೇಳಿಕೊಂಡಿದ್ದಾರೆ. ಅದರ ವಿಡಿಯೋ ಈಗ ವೈರಲ್ ಆಗಿದೆ.
ಹಿಂದಿ ನಮ್ಮ ರಾಷ್ಟ್ರಭಾಷೆ ಎನ್ನುವುದು ಹಿಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಅಸಲಿಗೆ ಭಾರತಕ್ಕೆ ಅಧಿಕೃತ ರಾಷ್ಟ್ರಭಾಷೆ ಎಂದು ಯಾವುದನ್ನೂ ಘೋಷಿಸಲಾಗಿಲ್ಲ, ಆದರೆ ಹಿಂದಿ ಮತ್ತು ಇಂಗ್ಲಿಷ್ ಭಾರತದ ಅಧಿಕೃತ ಭಾಷೆಗಳು ಅಷ್ಟೇ. 1949ರ ಸೆಪ್ಟೆಂಬರ್ 14 ರಂದು, ಸಂವಿಧಾನ ಸಭೆಯು ಹಿಂದಿಯನ್ನು ದೇವನಾಗರಿ ಲಿಪಿಯಲ್ಲಿ ಅಧಿಕೃತ ಭಾಷೆಯಾಗಿ ಅಂಗೀಕರಿಸಿತು. ಆದಾಗ್ಯೂ, ಇದು ರಾಷ್ಟ್ರೀಯ ಭಾಷೆಯಲ್ಲ, ಬದಲಿಗೆ ಅಧಿಕೃತ ಭಾಷೆಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಂದು ರಾಜಕೀಯ ಕಾರಣದಿಂದಲೇ ಹಿಂದಿ ಎಂದರೆ ಉರಿದು ಬೀಳುವ ದೊಡ್ಡ ವರ್ಗವೇ ಸೃಷ್ಟಿಯಾಗಿದೆ. ಹಲವಾರು ದಶಕಗಳವರೆಗೆ ನಮ್ಮನ್ನು ಗುಲಾಮರನ್ನಾಗಿಸಿಕೊಂಡಿರೋ ಬ್ರಿಟಿಷರ ಇಂಗ್ಲಿಷ್ ಭಾಷೆಯನ್ನು ಕಣ್ಣಿಗೆ ಒತ್ತಿಕೊಂಡಿರುವ ಒಂದಷ್ಟು ಜನರು ಹಿಂದಿ ಎಂದರೆ ಗುರ್ ಎನ್ನಲು ಬೇರೆಯದ್ದೇ ಕಾರಣ ಇವೆ. ಕನ್ನಡ ನಾಡಿನಲ್ಲಿಯೇ ಹುಟ್ಟಿ ಕನ್ನಡ ಬರದಿದ್ದರೂ ಖುಷಿಯಲ್ಲಿ ಹೇಳಿಕೊಳ್ಳುವವರು ಇಂಗ್ಲಿಷ್ ಬರಲ್ಲ ಎಂದು ಹೇಳದೇ ಪರದಾಡುವ ಸ್ಥಿತಿಯೂ ಇದೆ.
ಭಾಷಾ ಕಿತ್ತಾಟ
ಒಟ್ಟಿನಲ್ಲಿ ಭಾಷೆಯ ಬಗ್ಗೆ ಸದಾ ಕಿತ್ತಾಟಗಳು ನಡೆಯುತ್ತಲೇ ಇರುತ್ತವೆ. ನಮ್ಮ ಭಾಷೆಯನ್ನು ಮೊದಲು ಶುದ್ಧವಾಗಿ ಕಲಿಯುವುದರ ಜೊತೆಗೆ ಇತರ ಭಾಷೆಗಳನ್ನು ಕಲಿಯುವುದು ಒಳ್ಳೆಯದೇ. ಹಾಗೆಂದು ಎಲ್ಲರಿಗೂ ಎಲ್ಲ ಭಾಷೆಗಳೂ ಬರಬೇಕೆಂದೇನೂ ಇಲ್ಲವಲ್ಲ. ಒಂದು ಭಾಷೆಯ ಶಬ್ದ ಇನ್ನೊಂದು ಭಾಷೆಯಲ್ಲಿ ಕೆಟ್ಟ ಶಬ್ದ ಅನ್ನಿಸಿಕೊಳ್ಳುವುದೂ ಇದೆ. ಇದೇ ಕಾರಣಕ್ಕೆ ಬೇರೆ ಭಾಷೆ ಮಾತನಾಡುವಾಗ ಆ ಭಾಷೆ ಗೊತ್ತಿದ್ದರೂ ಮಾತನಾಡಲು ಭಯ ಎನ್ನಿಸುವುದು ಉಂಟು. ಅದರಲ್ಲಿಯೂ ಪುರುಷ ಮತ್ತು ಮಹಿಳೆಯರನ್ನು ಸಂಬೋಧಿಸುವಾಗ ಎಡವಟ್ಟು ಆಗುವುದು ಸಹಜ. ಅದೇ ರೀತಿ ಹಿಂದಿಯಲ್ಲಿಯೂ ಸಾಮಾನ್ಯವಾಗಿ ಎಡವಟ್ಟು ಆಗುತ್ತದೆ.
ಹಿಂದಿ ಬಗ್ಗೆ ಯಶ್
ಆ ಬಗ್ಗೆಯೂ ಇದೀಗ ನಟ ಯಶ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಇದು ತಮಾಷೆ ಎನ್ನಿಸಿದರೂ, ನಮ್ಮ ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡುವಾಗ ಇಂಥ ಸಮಸ್ಯೆಯನ್ನು ಬಹುತೇಕ ಎಲ್ಲರೂ ಎದುರಿಸುವುದು ಇದ್ದೇ ಇದೆ. ಅದೇ ರೀತಿ ಯಶ್ ಅವರಿಗೂ ಆಗಿದೆ. ನೀವು ಹಿಂದಿಯನ್ನು ಚೆನ್ನಾಗಿ ಮಾತನಾಡುತ್ತೀರಾ, ಹಿಂದಿಯಲ್ಲಿಯೇ ಮಾತನಾಡಿ ಎಂದು ಸಂದರ್ಶಕರೊಬ್ಬರು ಯಶ್ ಅವರನ್ನು ಕೇಳಿದ್ದಾರೆ. ಅದಕ್ಕೆ ಯಶ್ ಅವರು, ಬೋಲ್ತಿ ಹೈ, ಬೋಲ್ತೇ ಹೋ... ಇವೆಲ್ಲಾ ಸಿಕ್ಕಾಪಟ್ಟೆ ಕನ್ಫ್ಯೂಸ್, ಗಂಡಸು, ಹೆಂಗಸು ಹೇಳೋದು ಕಷ್ಟ. ಅದಕ್ಕೇ ಹಿಂದಿ ಮಾತನಾಡುವುದಿಲ್ಲ ಎಂದಿದ್ದಾರೆ. ಒಂದು ವೇಳೆ ತಪ್ಪು ಹೇಳಿ ಏನೇನೋ ಆದ್ರೆ ಅದು ಚೆನ್ನಾಗಿರಲ್ಲ ಎಂದಿದ್ದಾರೆ. ಆಗ ಅಲ್ಲಿದ್ದ ನಟಿ ಬಿದ್ದೂ ಬಿದ್ದೂ ನಕ್ಕಿದ್ದಾರೆ.
ನಟನ ಕುರಿತು...
ಇನ್ನು ನಟನ ಕುರಿತು ಹೇಳುವುದಾದರೆ, ರಾಕಿಂಗ್ ಸ್ಟಾರ್ ಎಂದೇ ಬಿರುದು ಪಡೆದಿರುವ ನಟ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪ್ಯಾನ್ ವರ್ಲ್ಡ್ ಸಿನಿಮಾಗಳಲ್ಲಿ ಇದೀಗ ಬಣ್ಣ ಹಚ್ಚುತ್ತಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲ, ನಿರ್ಮಾಪಕರಾಗಿಯೂ ಎರಡೂ ಸಿನಿಮಾಗಳ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಯಾವುದೇ ಸಿನಿಮಾ ಇಲ್ಲದೇ ಬಂದ ಬಸ್ ಡ್ರೈವರ್ ಮಗ ಯಶ್ ಇವತ್ತು ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ.ಮುಂದೆ ಹಾಲಿವುಡ್ ಮಂದಿ ಕೂಡ ಇತ್ತ ನೋಡುವಂತೆ ಸಿನಿಮಾಗಳನ್ನು ಕಟ್ಟಿಕೊಡುವ ಕನಸು ಕಂಡಿದ್ದಾರೆ. ಅದನ್ನು ನನಸು ಮಾಡಿಕೊಳ್ಳುವತ್ತ ಮುನ್ನಡೆಯುತ್ತಿದ್ದಾರೆ. ಮುಂದೆ ನನ್ನ ಮಗ ಯಶ್ ನಟನೆಯ ಸಿನಿಮಾ ನಿರ್ಮಾಣ ಮಾಡಲು 2000 ಕೋಟಿ ರೂ. ಬಂಡವಾಳ ಬೇಕು ಎಂದು ತಾಯಿ ಪುಷ್ಪಾ ಹೆಮ್ಮೆಯಿಂದ ಹೇಳಿದ್ದೂ ಇದೆ.
