ತಮ್ಮ 52ನೇ ಹುಟ್ಟುಹಬ್ಬದಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಕಿಚ್ಚ ಸುದೀಪ್, ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಸುಳಿವು ನೀಡಿದ್ದಾರೆ. ಸ್ಮಾರಕದ ನೀಲನಕ್ಷೆ ಸಿದ್ಧವಾಗಿದ್ದು, ಸ್ಥಳದ ಕುರಿತಾದ ಕಾನೂನು ಹೋರಾಟ ನಡೆಯುತ್ತಿದ್ದರೂ, ತಾವು ಕೆಲಸ ಮುಂದುವರೆಸುತ್ತಿರುವುದಾಗಿ ತಿಳಿಸಿದ್ದಾರೆ. 

ಬೆಂಗಳೂರು (ಸೆ.1): ನಟ ಕಿಚ್ಚ ಸುದೀಪ್‌ ತಮ್ಮ 52ನೇ ವರ್ಷದ ಜನ್ಮದಿನದ ನಿಮಿತ್ತ ಮಾಧ್ಯಮಗಳ ಜೊತೆ ಮಾತನಾಡಿದರು. ಸೆ. 2 ರಂದು ಅವರು ಜನ್ಮದಿನ ಆಚರಿಸಿಕೊಳ್ಳಲಿದ್ದರೂ, ನಾಳೆ ಅವರು ಸಿಗಲು ಸಾಧ್ಯವಾಗದ ಕಾರಣ ಸೋಮವಾರದಂದೇ ಅಭಿಮಾನಿಗಳು ಹಾಗೂ ಮಾಧ್ಯಮವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಹಲವು ವಿಚಾರಗಳ ಬಗ್ಗೆ ತಿಳಿಸಿದರು. ಈ ವೇಳೆ ಅವರಿಗೆ ಮಾಧ್ಯಮದವರಿಂದ ಎದುರಾದ ಪ್ರಮುಖ ಪ್ರಶ್ನೆ ಸಾಹಸಸಿಂಹ ವಿಷ್ಣುವರ್ಧನ್‌ ಅವರ ಸ್ಮಾರಕ. ಈ ಬಗ್ಗೆ ನಾಳೆ ಸರಿಯಾದ ಚಿತ್ರಣ ಸಿಗಲಿದೆ ಎಂದು ಸುದೀಪ್‌ ಹೇಳಿದ್ದಾರೆ.

'ವಿಷ್ಣು ಸರ್ ಸ್ಮಾರಕಕ್ಕೆ ನಾಳೆ ನಿಮಗೆ ಸರಿಯಾದ ಚಿತ್ರಣ ಸಿಗುತ್ತೆ. ಬ್ಲ್ಯೂ ಪ್ರಿಂಟ್ ಸಿಗುತ್ತೆ, ಲೈಬ್ರರಿ ಇದೆ, ತುಂಬಾ ಚೆನ್ನಾಗಿ ಬಂದಿದೆ. ಆ ಜಾಗದ ಸಮಸ್ಯೆ ಇರೋದು ಅದರ ಪಾಡಿಗೆ ಅದು ಆಗುತ್ತಿದ. ನಾನು ನಮ್ಮ ಕೆಲಸ ಮುಂದುವರೆಸಿದ್ದೀನೆ. ನಮ್ಮ ಕೆಲಸ ನಾವು ಮಾಡೋಣ ಅಂತ , ಏನೂ ಆಗದೇ ಇರೋದ್ರಿಂದ ಏನಾದ್ರೂ ನಾವೇ ಮಾಡೋಣ ಅಂತ ಈ ಹೆಜ್ಜೆ ಇಟ್ಟಿದ್ದೀವಿ. ವಿಷ್ಣುವರ್ಧನ್ ಅವರ ಜಾಗ ಖರೀದಿ ಸೇರಿದಂತೆ ಸ್ಮಾರಕ ಹೇಗಿರಲಿದೆ ಎಂಬುದು ಅದರಲ್ಲಿ ಗೊತ್ತಾಗಲಿದೆ. ಜಾಗ ಎಲ್ಲಿ ಅನ್ನೋದು ಗೊತ್ತಾಗಲಿದೆ. ಒಂದು ಕಡೆ ಆ ಬಗ್ಗೆ ಕಿತ್ತಾಟ ನಡೀತಾ ಇದೆ. ಕಾನೂನು ಹೋರಾಟ ಕೂಡ ಇದೆ. ಅದರ ಪಾಡಿಗೆ ಅದು ನಡೆಯಲಿ. ನಮ್ಮ ಪಾಡಿಗೆ ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದ ಬಗ್ಗೆ ಮಾತನಾಡಿದ ಅವರು, 'ನಮಗೂ ಜವಾಬ್ದಾರಿ ಬೇಕಾಗುತ್ತೆ. ಕಾಲ್ತುಳಿತ ಬಗ್ಗೆ ಬೇಸರ ಇದೆ. ಇಲ್ಲಿ ನಾವು ಮುಂಜಾಗ್ರತೆ ತೆಗೆದುಕೊಂಡಿದ್ದೇವೆ. ಹುಷಾರಾಗಿ ಬನ್ನಿ ಹುಷಾರಾಗಿ ಹೋಗಿ ಅಂತೀವಿ. ಜಾಸ್ತಿ ಜನ ಸೇರಿದಾಗ ಎಚ್ಚರಿಕೆಯಿಂದ ಇರಬೇಕು. ರಾತ್ರಿ ನಾನು ಇಲ್ಲಿ ಸಿಗೋಕೆ ಸಾಧ್ಯ ಇಲ್ಲ. ಅದಕ್ಕೆ ನಾನು ಈಗ ಸಿಕ್ಕಿರೋದು ಎಂದು ಹೇಳಿದ್ದಾರೆ.

ಒಂದು ಕಥೆ ಬರೆದಿದ್ದೀನಿ ಎಂದ ಸುದೀಪ್‌

ನಾನು ನಿರ್ದೇಶನ ಮಾಡೋದರ ಬಗ್ಗೆಯೂ ಹಿಂದೆ ಹೇಳಿದ್ದೆ. ಒಂದು ಖುಷಿಯಾಗಿ ಕಥೆ ಬರೆದಿದ್ದೀನಿ. ನನ್ನ ಸ್ಟೈಲ್ ಕಥೆ, ವಾರ್ಮ್ ಆಗಿ ಇರುತ್ತೆ. ಪ್ರೊಸೆಸಿಂಗ್ ನಲ್ಲಿದೆ ಎಂದು ತಿಳಿಸಿದ್ದಾರೆ. ಇನ್ನು ಸ್ಪರ್ಶ-2 ಸಿನಿಮಾ ಇಲ್ಲ. ನೀವು ದೇಸಾಯಿ ಅವರನ್ನ ಬಡಿದೆಬ್ಬಿಸುತ್ತಿದ್ದೀರಾ. ಅವರು ನಮ್ಮ ಗುರುಗಳು ಎಂದಿದ್ದಾರೆ.

ಅದು ಸಾಧು ಕೋಕಿಲ ಮಾಡಿದ ಕಿತಾಪತಿ

ಡಿಸಿಎಂ ಡಿಕೆ ಶಿವಕುಮಾರ್‌ ಈ ಹಿಂದೆ ಕಲಾವಿದರ ನಟ್ಟು-ಬೋಲ್ಟು ಟೈಟ್‌ ಮಾಡ್ತೀನಿ ಎಂದು ಹೇಳಿದ್ದ ಕೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಮಾತನಾಡಿದ ಸುದೀಪ್‌, ಡಿಕೆ ಸಾಹೇಬ್ರು ಹೇಳಿರೋದರ ಹಿಂದೆ ಸಾಧು ಕಿತಾಪತಿ ಇದೆ. ಅವರೇ ಹೇಳ್ತಾರೆ, ಎಲ್ಲರನ್ನೂ ಕರೆದ್ರೆ ಮೇಂಟೇನ್ ಮಾಡೋಕಾಗಲ್ಲ ಅಂತ ಎಂದು ಸುದೀಪ್‌ ತಿಳಿಸಿದ್ದಾರೆ.

ಧ್ರುವ , ಶಿವಣ್ಣ , ಧನಂಜಯ್ ಸಿಡಿಪಿ ರಿಲೀಸ್ ಬಗ್ಗೆ ಮಾತನಾಡಿದ ಅವರು, 'ಧ್ರುವ ನನ್ನ ತಮ್ಮನ‌ ಥರ. ಧ್ರುವ ನೋಡೋಕೆ ಗುರ್ರ್ ಅಂತಾರೆ, ಸ್ವೀಟ್ ಹುಡುಗ ಅವರು.ಡಾಲಿ ನನಗೆ ಲಾಂಗ್ ಬ್ಯಾಕ್ ಪರಿಚಯ. ಶಿವಣ್ಣ ಯಾವಾಗ್ಲೂ ನನಗೆ ಫ್ಯಾಮಿಲ. ಇನ್ನು ಯಶ್‌ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ತುಂಬಾ ಎತ್ತರ ಬೆಳೆದಿದ್ದಾರೆ ಎಂದು ಸುದೀಪ್‌ ತಿಳಿಸಿದ್ದಾರೆ.