ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಆಚರಿಸಲು ಅನುಮತಿ ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಸ್ಟುಡಿಯೋ ಆಸ್ತಿ ಮಾಲೀಕತ್ವದ ಕುರಿತು ಕಾನೂನು ವಿವಾದವಿರುವುದರಿಂದ, ಈ ಮನವಿಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿದೆ.  ಅಭಿಮಾನಿಗಳಿಗೆ ನಿರಾಸೆ.

ಬೆಂಗಳೂರು (ಸೆ.16): ಕನ್ನಡ ಚಲನಚಿತ್ರರಂಗದ ಮೇರು ನಟ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆಯನ್ನು ಅವರ ಪುಣ್ಯಭೂಮಿ ಇರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ಆಚರಿಸಲು ಅನುಮತಿ ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ (ರಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆ ಆಯೋಜಿಸಲು ಅವಕಾಶ ನೀಡುವಂತೆ ಮತ್ತು ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡುವಂತೆ ಟ್ರಸ್ಟ್ ಮನವಿ ಮಾಡಿತ್ತು. ಆದರೆ, ಅಭಿಮಾನ್ ಸ್ಟುಡಿಯೋ ಆವರಣದ ಆಸ್ತಿ ಮಾಲೀಕತ್ವದ ಕುರಿತು ರಾಜ್ಯ ಸರ್ಕಾರ ಮತ್ತು ಸ್ಟುಡಿಯೋ ನಡುವೆ ಕಾನೂನು ವಿವಾದ ಇರುವ ಕಾರಣ, ಹೈಕೋರ್ಟ್ ಈ ಮನವಿಯನ್ನು ಪರಿಗಣಿಸಲು ನಿರಾಕರಿಸಿದೆ.

ಈ ಕುರಿತು 2025ರ ಜನವರಿ 13ರಂದು ಹೈಕೋರ್ಟ್ ಈಗಾಗಲೇ ಒಂದು ಆದೇಶವನ್ನು ನೀಡಿದೆ. ಆ ಆದೇಶದಲ್ಲಿ, ವಿಶೇಷ ಜಿಲ್ಲಾಧಿಕಾರಿಗೆ ಕೆಲವು ನಿರ್ದೇಶನಗಳನ್ನು ನೀಡಲಾಗಿದ್ದು, ಈ ವಿಷಯದ ಕುರಿತು ಮತ್ತೆ ಬೇರೆ ರೀತಿಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದ್ದರಿಂದ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗಿದೆ.

ಬಿ.ಎಸ್. ಕಾರ್ತಿಕ್ ಅವರಿಗೆ ಹೈಕೋರ್ಟ್ ನೋಟಿಸ್

ಈ ಮಧ್ಯೆ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಡಾ. ವಿಷ್ಣುವರ್ಧನ್ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಹಾಗೂ ಅಭಿಮಾನ್ ಸ್ಟುಡಿಯೋದ ಬಿ.ಎಸ್. ಕಾರ್ತಿಕ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಲಾಗಿದೆ.

'ಕರ್ನಾಟಕ ರತ್ನ' ಡಾ. ವಿಷ್ಣುವರ್ಧನ್‌ ನಟನೆಯ ಸೂಪರ್‌ಹಿಟ್‌ ಸಿನಿಮಾಗಳು, ಸಾಹಸಸಿಂಹನ ಯಾವ ಫಿಲ್ಮ್‌ ನಿಮಗಿಷ್ಟ?

ಈ ನಿರ್ಧಾರವು ವಿಷ್ಣುವರ್ಧನ್ ಅಭಿಮಾನಿಗಳಿಗೆ ಹಾಗೂ ಟ್ರಸ್ಟ್‌ಗೆ ನಿರಾಸೆ ಉಂಟು ಮಾಡಿದೆ. ಹಲವು ವರ್ಷಗಳಿಂದ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಹಾಗೂ ಜನ್ಮದಿನಾಚರಣೆಗಳ ಆಯೋಜನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟ ಮುಂದುವರೆದಿದೆ. ಅಭಿಮಾನಿಗಳ ಆಶಯಕ್ಕೆ ಹೈಕೋರ್ಟ್‌ನ ಈ ಆದೇಶ ಮತ್ತೊಂದು ಹಿನ್ನಡೆಯನ್ನುಂಟು ಮಾಡಿದೆ.

ವಿವಾದದ ಇತಿಹಾಸ:

ಡಾ. ವಿಷ್ಣುವರ್ಧನ್ ಅವರು 2009ರಲ್ಲಿ ನಿಧನರಾದಾಗ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅಂದಿನಿಂದ, ಸರ್ಕಾರವು ವಿಷ್ಣುವರ್ಧನ್ ಅವರ ಸ್ಮಾರಕವನ್ನು ಇಲ್ಲೇ ನಿರ್ಮಿಸಬೇಕೆಂಬುದು ಅಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿತ್ತು. ಈ ಸ್ಥಳವು ಅಭಿಮಾನ್ ಸ್ಟುಡಿಯೋ ಮಾಲೀಕತ್ವದಲ್ಲಿದ್ದು, ನಂತರ ಇದನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಆಸ್ತಿ ವಿವಾದ ಇತ್ಯರ್ಥವಾಗದ ಕಾರಣ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಅಭಿಮಾನಿಗಳು ಆರೋಪಿಸಿದ್ದರು. ಇದಾದ ಬಳಿಕ, ಬೆಂಗಳೂರಿನ ಕೆಲಗೇರಿ ಬಳಿ ಸ್ಮಾರಕ ನಿರ್ಮಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ವಿಷ್ಣುವರ್ಧನ್ ಅಭಿಮಾನಿಗಳು ಮತ್ತು ಅವರ ಕುಟುಂಬ ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದರು. ಈ ಎಲ್ಲಾ ವಿವಾದಗಳ ನಡುವೆಯೇ ಈಗ ಹುಟ್ಟುಹಬ್ಬ ಆಚರಣೆಯ ಕುರಿತ ಅರ್ಜಿ ವಜಾಗೊಂಡಿದೆ.