Actor Ajay Rao Sapna Divorce: ನಟ ಅಜಯ್‌ ರಾವ್‌ ಹಾಗೂ ಸಪ್ನಾ ರಾವ್‌ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಜಯ್‌ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಕೊಟ್ಟಿದ್ದಾರೆ. 

ಕನ್ನಡ ನಟ ಅಜಯ್‌ ರಾವ್‌ ಅವರಿಂದ ಪತ್ನಿ ಸಪ್ನಾ ರಾವ್‌ ಅವರು ಡಿವೋರ್ಸ್‌ ಬೇಕು ಎಂದು ಕೋರ್ಟ್‌ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ಹಿಂಸೆ ಎಂಬ ಕಾರಣ ನೀಡಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರಂತೆ. ಈ ಬಗ್ಗೆ ಅಜಯ್‌ ರಾವ್‌ ಅವರು ಸೋಶಿಯಲ್‌ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.

ಅಜಯ್‌ ರಾವ್‌ ಹೇಳಿದ್ದೇನು?

ಎಲ್ಲಾ ಅಭಿಮಾನಿಗಳಿಗೆ, ಮಾಧ್ಯಮಗಳಿಗೆ,

ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ,

ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ದೂರವಿಡುವಂತೆ ತಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಪ್ರತಿಯೊಂದು ಕುಟುಂಬವೂ ಸವಾಲುಗಳನ್ನು ಎದುರಿಸುತ್ತದೆ, ಅವುಗಳನ್ನು ಖಾಸಗಿಯಾಗಿ ಉಳಿಯುವುವಂತೆ ಸಹಕರಿಸಿ ಎಂದು ಎಲ್ಲರಲ್ಲಿ ಹೃತ್ತೂರ್ವಕ ವಿನಂತಿ.

ನಿಮ್ಮ ಮನವೊಲಿಕೆ, ಬೆಂಬಲ ಮತ್ತು ವಿವೇಕ ನಮಗೆ ಅತ್ಯಂತ ಮುಖ್ಯ.

ಕೃತಜ್ಞತೆಯಿಂದ, ಅಜೇಯ ರಾವ್‌

ಡಿವೋರ್ಸ್‌ ವಿಷಯ ಗೊತ್ತಿಲ್ಲ

ಆರಂಭದಲ್ಲಿ ಈ ವಿಚಾರವಾಗಿ ಅಜಯ್‌ ರಾವ್‌ ಅವರನ್ನು ಸಂಪರ್ಕಿಸಿದಾಗ, “ನನಗೆ ಗೊತ್ತಿಲ್ಲ. ಪತ್ನಿ ಹತ್ತಿರ ಮಾತನಾಡ್ತೀನಿ, ಆಮೇಲೆ ಹೇಳ್ತೀನಿ” ಎಂದರು. ಅದಾದ ಬಳಿಕ ಸಪ್ನಾ ಫೋನ್‌ ಕೂಡ ಸ್ಚಿಚ್‌ ಆಫ್‌ ಆಗಿತ್ತು. ಆ ಬಳಿಕ ಅಜಯ್‌ ರಾವ್‌ ಕೂಡ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು. ಈಗ ಅವರು ಸೋಶಿಯಲ್‌ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಲವ್‌ ಮ್ಯಾರೇಜ್‌ ಆಗಿದ್ದ ಜೋಡಿ

ಅಂದಹಾಗೆ ಅಜಯ್‌ ರಾವ್‌ ಪತ್ನಿ ಸಪ್ನಾ ಅವರು ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹೆಸರಿನ ಮುಂದಿದ್ದ ಅಜಯ್‌ ರಾವ್‌ ಹೆಸರನ್ನು ತೆಗೆದು ಹಾಕಿದ್ದಾರೆ. ಸಪ್ನಾ ಎಚ್‌ ಎನ್‌ ಎಂದು ಹೆಸರು ಇಟ್ಟುಕೊಂಡಿದ್ದಾರೆ. ಗಂಡ ಹೆಂಡತಿ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದಾರೆ. 2014ರಲ್ಲಿ ಈ ಜೋಡಿ ಪ್ರೀತಿಸಿ, ಮದುವೆಯಾಗಿತ್ತು. ಕಳೆದ ವರ್ಷವಷ್ಟೇ ಅವರು ಹೊಸ ಮನೆಗೆ ಕಾಲಿಟ್ಟಿದ್ದರು. ಆ ವೇಳೆ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದ್ದರು, ಈ ಜೋಡಿಗೆ ಆರು ವರ್ಷದ ಮುದ್ದಾದ ಮಗಳಿದ್ದಾಳೆ.

ಅಜಯ್‌ ರಾವ್‌ ಸಿನಿಮಾಗಳಿವು!

ಅಜಯ್‌ ರಾವ್‌ ಅವರು ʼಎಕ್ಸ್‌ಕ್ಯೂಸ್‌ ಮೀʼ, ʼಅಮೃತವಾಣಿʼ, ʼತಾಜ್‌ ಮಹಲ್‌ʼ, ʼಜಾಜಿ ಮಲ್ಲಿಗೆʼ, ʼಕೃಷ್ಣನ್‌ ಲವ್‌ ಸ್ಟೋರಿʼ, ʼಕೃಷ್ಣನ್‌ ಮ್ಯಾರೇಜ್‌ ಸ್ಟೋರಿʼ, ʼಕೃಷ್ಣ ರುಕ್ಕುʼ, ʼಕೃಷ್ಣಲೀಲಾʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ʼಯುದ್ಧಕಾಂಡʼ ಸಿನಿಮಾ ಮೂಲಕ ಅವರು ನಿರ್ಮಾಪಕರಾಗಿ ಕೂಡ ಬಡ್ತಿ ಪಡೆದಿದ್ದರು.