ಕನ್ನಡ ಚಿತ್ರರಂಗದಲ್ಲಿ ಒಂದೇ ಹೆಸರಿನ ಚಿತ್ರದಲ್ಲಿ ಮೂರು ಜನರು ನಟಿಸಿದ್ದಾರೆ. ಅದೂ ಕೂಡ ಅಪ್ಪ-ಮಗ-ಮಗ. ಅಂದರೆ, ಒಂದೇ ಮನೆಯ ಮೂವರು, ಅದೂ ಕೂಡ ಅಪ್ಪ ಹಾಗೂ ಇಬ್ಬರು ಮಕ್ಕಳು ಒಂದೇ ಶಿರ್ಷಿಕೆಯ ಚಿತ್ರದಲ್ಲಿ ನಟಿಸಿದ್ದಾರೆ. ಗೆಸ್ ಮಾಡ್ತೀರಾ ಅದು ಯಾವ ಚಿತ್ರ ಹಾಗೂ ಯಾರು?
ತಂದೆ ಹಾಗೂ ಇಬ್ಬರು ಮಕ್ಕಳು ಬೇರೆ ಬೇರೆಯಾಗಿ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ!
ಕನ್ನಡ ಚಿತ್ರರಂಗದಲ್ಲಿ (Sandalwood) ಸಾಕಷ್ಟು ದಾಖಲೆಗಳು ನಿರ್ಮಾಣವಾಗಿರುವುದು ಗೊತ್ತೇ ಇದೆ. ಅದು ಹಲವಾರು ಬಾರಿ ಬೆಳಕಿಗೆ ಬಂದಿರುವುದಿಲ್ಲ. ಇಲ್ಲೊಂದು ಸಂಗತಿಯಿದೆ, ಸಾಕಷ್ಟು ಜನರಿಗೆ ಇದು ತಿಳಿದರಲಿಕ್ಕಿಲ್ಲ. ಅದೇನು ಗೊತ್ತಾ? ಕನ್ನಡ ಚಿತ್ರರಂಗದಲ್ಲಿ ಒಂದೇ ಹೆಸರಿನ ಚಿತ್ರದಲ್ಲಿ ಮೂರು ಜನರು ನಟಿಸಿದ್ದಾರೆ. ಅದೂ ಕೂಡ ಅಪ್ಪ-ಮಗ-ಮಗ. ಅಂದರೆ, ಒಂದೇ ಮನೆಯ ಮೂವರು, ಅದೂ ಕೂಡ ಅಪ್ಪ ಹಾಗೂ ಇಬ್ಬರು ಮಕ್ಕಳು ಒಂದೇ ಶಿರ್ಷಿಕೆಯ ಚಿತ್ರದಲ್ಲಿ ನಟಿಸಿದ್ದಾರೆ.
ಗೆಸ್ ಮಾಡ್ತೀರಾ ಅದು ಯಾವ್ದು ಅಂತ? ಹೌದು, ಕನ್ನಡ ಚಿತ್ರರಂಗದಲ್ಲಿ ಅಂತಹ ಒಂದು ದಾಖಲೆ ಇದೆ. 1973ರಲ್ಲಿ ಡಾ ರಾಜ್‌ಕುಮಾರ್ (Dr Rajkumar) ನಟನೆಯ 'ಗಂಧದ ಗುಡಿ' ಸಿನಿಮಾ (Gandhada Gudi) ತೆರೆಗೆ ಬಂದಿತ್ತು. ಆ ಚಿತ್ರದಲ್ಲಿ ನಟ ವಿಷ್ಣುವರ್ಧನ್ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆ ಚಿತ್ರವು ಸೂಪರ್ ಹಿಟ್ ಅಗಿತ್ತು, ಜೊತೆಗೆ ಹಲವು ವಿವಾದಗಳಿಗೂ ಕಾರಣವಾಗಿತ್ತು. ಈಗಲೂ ಕೂಡ ಆ ಚಿತ್ರದ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಲು ಇಡೀ ಚಿತ್ರರಂಗ ವಿಫಲವಾಗಿದೆ ಎನ್ನಬಹುದು.
ಬಳಿಕ, 1994ರಲ್ಲಿ ಡಾ ರಾಜ್‌ಕುಮಾರ್ ಅವರ ಮೊದಲ ಮಗ ಶಿವರಾಜ್‌ಕುಮಾರ್ (Shivarajkumar) ಅವರು 'ಗಂಧದ ಗುಡಿ ಭಾಗ 2' ಹೆಸರಿನ ಚಲನಚಿತ್ರದಲ್ಲಿ ನಟಿಸಿದ್ದಾರೆ. ಇದು ಸಾಹಸಪ್ರಧಾನ ಚಲನಚಿತ್ರವಾಗಿದ್ದು, ಈ ಚಿತ್ರದ ನಿರ್ದೇಶಕ ವಿಜಯ್ ಮತ್ತು ನಿರ್ಮಾಪಕ ಎಂ.ಪಿ. ಶಂಕರ್. ಮೂಲ 'ಗಂಧದ ಗುಡಿ' (1973) ಚಿತ್ರದಲ್ಲಿ ನಟಿಸಿದ್ದ ಡಾ. ರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮತ್ತೊಂದು ಗಂಧದ ಗುಡಿ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಬಂದಿದೆ.
ಪುನೀತ್ ರಾಜ್‌ಕುಮಾರ್ ‘ಗಂಧದ ಗುಡಿ’
ಇನ್ನು, ಡಾ ರಾಜ್‌ಕುಮಾರ್ ಕಿರಿಯ ಮಗ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 'ಗಂಧದ ಗುಡಿ' 2022 ರಲ್ಲಿ ಬಿಡುಗಡೆಯಾದ ಕನ್ನಡ ಡಾಕ್ಯುಮೆಂಟರಿ-ಡ್ರಾಮಾ ಚಲನಚಿತ್ರವಾಗಿದೆ. ಇದು ಪುನೀತ್ ಅವರ ಕನಸಿನ ಯೋಜನೆಯಾಗಿತ್ತು ಮತ್ತು ಅವರ ಅಂತಿಮ ಚಲನಚಿತ್ರವೂ ಹೌದು. ಈ ಚಿತ್ರವು ಕರ್ನಾಟಕದ ಪರಿಸರ, ವನ್ಯಜೀವಿಗಳು ಮತ್ತು ಪ್ರಕೃತಿ ಸೌಂದರ್ಯವನ್ನು ಅನಾವರಣಗೊಳಿಸಿದೆ. ಇದು 2022 ರ ಅಕ್ಟೋಬರ್ 28 ರಂದು ಬಿಡುಗಡೆಯಾಯಿತು.
ಈ ಚಿತ್ರದ ಇತಿಹಾಸ!
ಈ ಚಿತ್ರದ ಶೀರ್ಷಿಕೆಯು 1973 ರ ಪುನೀತ್ ಅವರ ತಂದೆ ಡಾ. ರಾಜ್‌ಕುಮಾರ್ ನಟಿಸಿದ್ದ ಅದೇ ಹೆಸರಿನ ಚಲನಚಿತ್ರದಿಂದ ಸ್ಫೂರ್ತಿ ಪಡೆದಿದೆ. ಸಿನಿಮಾದ ಸಾರಾಂಶ: ಈ ಡಾಕ್ಯು-ಡ್ರಾಮಾ ಚಲನಚಿತ್ರವು ನಿರ್ದೇಶಕ ಅಮೋಘವರ್ಷ ಅವರೊಂದಿಗೆ ಪುನೀತ್ ರಾಜ್‌ಕುಮಾರ್ ಅವರ ಕರ್ನಾಟಕದ ಅರಣ್ಯ ಪ್ರದೇಶಗಳ ಪ್ರವಾಸವನ್ನು ತೋರಿಸುತ್ತದೆ.
ಪುನೀತ್ ಅವರ ಪಾತ್ರ
ಈ ಗಂಧದ ಗುಡಿ ಡಾಕ್ಯುಮೆಂಟರಿಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ ನಿಜವಾದ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದರೆ, ಯಾವುದೇ ಮೇಕಪ್ ಇಲ್ಲ, ಪಾತ್ರವಿಲ್ಲ, ಪಾತ್ರವೇ ಇಲ್ಲದಿದ್ದರಿಂದ ಅದಕ್ಕೆ ಅಂತ ಸಪರೇಟ್ ಕಾಸ್ಟ್ಯೂಮ್‌ಗಳಿಲ್ಲ. ಹೀಗಾಗಿ ಪುನೀತ್ ನಟನೆಯ ಈ ಚಿತ್ರದಲ್ಲಿ, ಅಂದರೆ ಅವರ ಅಂತಿಮ ಚಿತ್ರದಲ್ಲಿ ನಾವು ಅವರನ್ನು ಇದ್ದ ರೂಪದಲ್ಲೇ ನೋಡಿದ್ದೇವೆ, ಮುಂದೆ ನೋಡುವವರು ಕೂಡ ಹಾಗೇ ನೋಡಬಹುದು.
ಒಟ್ಟಿನಲ್ಲಿ, ಭಾರತದ ಇತಿಹಾಸದಲ್ಲಿ 'ಗಂಧದಗುಡಿ' ಶೀರ್ಷಿಕೆಯಲ್ಲಿ ತಂದೆ ಹಾಗೂ ಇಬ್ಬರು ಮಕ್ಕಳು ಬೇರೆ ಬೇರೆಯಾಗಿ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದು ವಿಶೇಷ ಹಾಗೂ ಏಕೈಕ ಸಂಗತಿ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ದಾಖಲೆ ನಿರ್ಮಾಣವಾಗಿದೆ ಎನ್ನಬಹುದು.
