ನಟ ದರ್ಶನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ನಟ ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ರೌಡಿಶೀಟರ್ ಬೇಕರಿ ರಘು ಮತ್ತು ಯಶಸ್ವಿನಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಈ ಬಂಧನ ನಡೆದಿದೆ.
ಬೆಂಗಳೂರು ಗ್ರಾಮಾಂತರ (ಸೆ.10): ನಟ ದರ್ಶನ್ ಬಗ್ಗೆ ಹಗುರವಾಗಿ ಮಾತನಾಡಿದ ನಟ ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ರೌಡಿಶೀಟರ್ ಬೇಕರಿ ರಘು ಮತ್ತು ಪ್ರಕರಣದ ಮತ್ತೊಬ್ಬ ಆರೋಪಿ ಯಶಸ್ವಿನಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ತಿಂಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಸಿವಿಲ್ ಕೋರ್ಟ್‌ಗೆ ಹಾಜರಾಗಿದ್ದ ರೌಡಿಶೀಟರ್ ರಘು, ಬಂಧನಕ್ಕೂ ಮುನ್ನವೇ ಜಾಮೀನು ಪಡೆದುಕೊಂಡಿದ್ದನು. ಆದರೆ, ಜಾಮೀನು ಪಡೆಯುವ ಮುನ್ನವೇ ಆತನನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದರೂ, ವಿಫಲವಾಗಿತ್ತು. ಇನ್ನು ನ್ಯಾಯಾಲಯವು ರಘುಗೆ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅದರಂತೆ, ಪ್ರತಿ ಭಾನುವಾರ ಕಡ್ಡಾಯವಾಗಿ ಪೊಲೀಸ್ ಠಾಣೆಗೆ ಬಂದು ಸಹಿ ಹಾಕುವಂತೆ ಸೂಚಿಸಲಾಗಿತ್ತು.
ಜಾಮೀನು ಷರತ್ತುಗಳ ಉಲ್ಲಂಘಿಸಿದ ರಘು
ಆದರೆ, ರಘು ಈ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಯಶಸ್ವಿನಿ ಎಂಬ ಮತ್ತೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಬಂಧನದ ಮೂಲಕ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ನಟ ಪ್ರಥಮ್‌ಗೆ ಬೆದರಿಕೆ ಹಾಕಿದ ಪ್ರಕರಣವು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಆರೋಪಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ಅವರನ್ನು ಮತ್ತೆ ಬಂಧಿಸಿರುವುದು ಕಾನೂನು ಪ್ರಕ್ರಿಯೆಯನ್ನು ಮುಂದುವರೆಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಕುರಿತು ಹೆಚ್ಚಿನ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಇದನ್ನೂ ಓದಿ: Bigg Bossನಿಂದ ಬಂದ 50 ಲಕ್ಷ ಏನ್ ಮಾಡಿದ್ರು ವಿನ್ನರ್ ಪ್ರಥಮ್? ಗುಟ್ಟು ರಿವೀಲ್ ಮಾಡಿದ ನಟ
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ ನಟ ಪ್ರಥಮ್‌ನನ್ನು ತಾನು ಬರ್ತಡೇ ಮಾಡಿಕೊಳ್ಳುವ ಸ್ಥಳಕ್ಕೆ ಕರೆಸಿಕೊಂಡಿದ್ದ ಬೇಕರಿ ರಘು, ನಮ್ಮ ಬಾಸ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತೀಯ ಎಂದು ಆಕ್ರೋಶ ಹೊರಹಾಕಿ ಡ್ರ್ಯಾಗರ್ ತೋರಿಸಿ ಚುಚ್ಚುವುದಾಗಿ ಪ್ರಾಣ ಬೆದರಿಕೆ ಹಾಕಿದ್ದರು. ಈ ಸ್ಥಳದಲ್ಲಿ ಬಿಗ್‌ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ಸ್ಥಳದಲ್ಲಿದ್ದರೂ ನಟ ಪ್ರಥಮ್ ನೆರವಿಗೆ ಬರಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು.
ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲ ಪೊಲೀಸ್ ವರಿಷ್ಠಾಧಿಕಾರಿಗಳು ನಟ ಪ್ರಥಮ್‌ಗೆ ಕರೆ ಮಾಡಿ ಹಲ್ಲೆ ಮಾಡಲಾಗಿದೆಯೇ ಎಂಬ ಮಾಹಿತಿ ಪಡೆದುಕೊಂಡಿದ್ದರು. ಈ ವೇಳೆ ಕೇವಲ ಮಾಹಿತಿ ನೀಡಿದ್ದ ಪ್ರಥಮ್, 2 ದಿನದೊಳಗೆ ಹೋಗಿ ದೂರು ದಾಖಲಿಸಿದ್ದರು. ಇದಾದ ನಂತರ ಪೊಲೀಸರು ಬೇಕರಿ ರಘು ಹಾಗೂ ಯಶಸ್ವಿನಿಯನ್ನು ಬಂಧಿಸಿದ್ದರು. ಆದರೂ, ಜಾಮೀನಿನ ಮೇಲೆ ಹೊರಬಂದರೂ ಷರತ್ತುಗಳನ್ನು ಪಾಲಿಸದೇ ಪುನಃ ಬಂಧನಕ್ಕೆ ಒಳಗಾಗಿದ್ದಾರೆ.
