ನನ್ನ ಈ ಮೊದಲ ಪುಸ್ತಕವನ್ನು ಡಾ. ವಿಷ್ಣುವರ್ಧನ್ ಅವರಿಗೆ ಅರ್ಪಿಸುತ್ತೇನೆ. 2008ರಲ್ಲಿ ‘ಇಜ್ಜೋಡು’ ಚಿತ್ರದಿಂದ ಬರವಣಿಗೆ ಶುರುವಾಯಿತು. ಮುಂದೆ 6 ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿದ್ದೇನೆ ಎಂದು ಅನಿರುದ್ಧ ಜಟ್ಕರ್ ಹೇಳಿದರು.
‘ನಾನು ಬರವಣಿಗೆ ಶುರು ಮಾಡಿದ್ದು ಎಂ ಎಸ್ ಸತ್ಯು ನಿರ್ದೇಶನದ ‘ಇಜ್ಜೋಡು’ ಚಿತ್ರದಿಂದ. ಆ ಚಿತ್ರದ ಒಂದು ದೃಶ್ಯದಲ್ಲಿ ಸಂಭಾಷಣೆ ಹೀಗಿದ್ದರೆ ಚೆಂದ ಎಂದು ನಾನು ನಿರ್ದೇಶಕ ಸತ್ಯು ಅವರಿಗೆ ಹೇಳಿದೆ. ನಾನು ಹೇಳಿದ ಸಂಭಾಷಣೆಯನ್ನೇ ಅವರು ಚಿತ್ರದಲ್ಲಿ ಬಳಸಿಕೊಂಡರು. ಅಲ್ಲಿಂದ ಬರವಣಿಗೆಯ ಆಸಕ್ತಿ ಹುಟ್ಟಿಕೊಂಡಿತು’.
- ಹೀಗೆ ಹೇಳಿಕೊಂಡಿದ್ದು ನಟ ಅನಿರುದ್ಧ ಜಟ್ಕರ್. ಇವರು ಬರೆದಿರುವ ‘ಸಾಲುಗಳ ನಡುವೆ’ಪುಸ್ತಕವನ್ನು ಇತ್ತೀಚೆಗೆ ಡಾ ಭಾರತಿ ವಿಷ್ಣುವರ್ಧನ್, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಹಾಗೂ ಪ್ರಕಾಶಕ ಜಮೀಲ್ ಸಾವಣ್ಣ ಬಿಡುಗಡೆ ಮಾಡಿದರು. ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.
ಅನಿರುದ್ಧ ಜತಕರ, ‘ನನ್ನ ಈ ಮೊದಲ ಪುಸ್ತಕವನ್ನು ಡಾ. ವಿಷ್ಣುವರ್ಧನ್ ಅವರಿಗೆ ಅರ್ಪಿಸುತ್ತೇನೆ. 2008ರಲ್ಲಿ ‘ಇಜ್ಜೋಡು’ ಚಿತ್ರದಿಂದ ಬರವಣಿಗೆ ಶುರುವಾಯಿತು. ಮುಂದೆ 6 ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿದ್ದೇನೆ. ಭಾರತಿ ವಿಷ್ಣುವರ್ಧನ್ ಅವರ ಕುರಿತು ಮಾಡಿದ ಸಾಕ್ಷ್ಯಚಿತ್ರಕ್ಕೂ ನಾನೇ ಬರೆದಿದ್ದೇನೆ. ಈ ಚಿತ್ರಕ್ಕೆ ನನಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಆನಂತರ ಕನ್ನಡ ಹಾಗೂ ಆಂಗ್ಲ ಭಾಷೆಯ ಪ್ರಮುಖ ದಿನಪತ್ರಿಕೆಗಳಿಗೆ ಲೇಖನ ಬರೆದಿದ್ದೇನೆ. ಈ ಲೇಖನಗಳ ಜೊತೆಗೆ ಕೆಲವು ಹೊಸ ಲೇಖನಗಳು ಸೇರ್ಪಡೆಗೊಂಡು ‘ಸಾಲುಗಳ ನಡುವೆ’ ಪುಸ್ತಕ ಮೂಡಿ ಬಂದಿದೆ. ಇದು ನಲವತ್ತು ಪ್ರಬಂಧಗಳ ಸಂಕಲನ’ ಎಂದರು.
ವಿಷ್ಣುವರ್ಧನ್ ನೋಡಿದ್ದರೆ ಖುಷಿ ಪಡುತ್ತಿದ್ದರು
ಭಾರತಿ ವಿಷ್ಣುವರ್ಧನ್ ಅವರು, ‘ಅನಿರುದ್ದ ಬರೆದಿರುವ ಈ ಪುಸ್ತಕ ನಮ್ಮ ಯಜಮಾನರು ವಿಷ್ಣುವರ್ಧನ್ ಅವರು ನೋಡಿದ್ದರೆ ಬಹಳ ಖುಷಿ ಪಡುತ್ತಿದ್ದರು’ ಎಂದರು. ಜೋಗಿ ಅವರು, ‘ಅನಿರುದ್ಧ ಜತಕರ ಅವರನ್ನು ಇಪ್ಪತ್ತೈದು ವರ್ಷಗಳಿಂದ ಬಲ್ಲೆ. ಅನಿರುದ್ಧ ಹಾಗೂ ಅವರ ಸಹೋದರಿ ಅರುಂಧತಿ ಇಬ್ಬರು ನಾಟಕ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಈಗ ಅನಿರುದ್ಧ ‘ಸಾಲುಗಳ ನಡುವೆ’ ಪುಸ್ತಕ ಬರೆದಿದ್ದಾರೆ. ಅದನ್ನು ನಾನು ಓದಿದ್ದೇನೆ. ಕೆಲವು ಪ್ರಬಂಧಗಳು ಮನಸ್ಸಿಗೆ ಬಹಳ ಹತ್ತಿರವಾದವು’ ಎಂದರು.
