ನಟ ದಿವಂಗತ ಡಾ। ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ 2 ಎಕರೆ ಜಾಗದಲ್ಲಿ ಸಿದ್ಧವಾಗಲಿರುವ ಡಾ। ವಿಷ್ಣುವರ್ಧನ್ ಅಭಿಮಾನ ಕ್ಷೇತ್ರದ ನೀಲ ನಕ್ಷೆ ಬಿಡುಗಡೆಯಾಗಿದೆ.
ಬೆಂಗಳೂರು (ಸೆ.19): ನಟ ದಿವಂಗತ ಡಾ। ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ 2 ಎಕರೆ ಜಾಗದಲ್ಲಿ ಸಿದ್ಧವಾಗಲಿರುವ ಡಾ। ವಿಷ್ಣುವರ್ಧನ್ ಅಭಿಮಾನ ಕ್ಷೇತ್ರದ ನೀಲ ನಕ್ಷೆ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕ್ಷೇತ್ರದ ನೀಲಿ ನಕ್ಷೆಯನ್ನು ಬಿಡುಗಡೆ ಮಾಡಿದ್ದಾರೆ. ಕಿಚ್ಚ ಸುದೀಪ್, ಉದ್ಯಮಿ ಅಶೋಕ್ ಖೇಣಿ ಹಾಗೂ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಜೊತೆಗೂಡಿ ಈ ಅಭಿಮಾನಿ ಕ್ಷೇತ್ರಕ್ಕೆ ಅಗತ್ಯವಿರುವ 2 ಎಕರೆ ಜಾಗವನ್ನು ಖರೀದಿ ಮಾಡಿದ್ದಾರೆ.
ಈ ಜಾಗದಲ್ಲಿ ಡಾ.ವಿಷ್ಣು ಅವರ 25 ಅಡಿಯ ಪ್ರತಿಮೆ, ಧ್ಯಾನ ಮಂದಿರ, ಪುಸ್ತಕ ಭಂಡಾರ, ಫೋಟೋ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗುತ್ತದೆ. ಮಧ್ಯಾಹ್ನ ಎರಡು ಗಂಟೆ ಸಮಯಕ್ಕೆ ಸೂರ್ಯನ ಕಿರಣಗಳು ವಿಷ್ಣು ಅವರ ಅಮೃತ ಶಿಲೆಯ ಪ್ರತಿಮೆ ಮೇಲೆ ಬೀಳುವಂತೆ ಧ್ಯಾನ ಮಂದಿರವನ್ನು ವಿನ್ಯಾಸ ಮಾಡಲಾಗುತ್ತದೆ ಎಂದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಪ್ರತಿದಿನ ಸಂಜೆ 6.30ಕ್ಕೆ ಲೇಸರ್ ಶೋ ನಡೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಒಂದು ವರ್ಷದಲ್ಲಿ ಪೂರ್ಣ
ನೀಲ ನಕ್ಷೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್ ಅವರು, ‘ಅಭಿಮಾನ ಕ್ಷೇತ್ರದ ನಿರ್ಮಾಣಕ್ಕಾಗಿ ಕೇವಲ 500 ಮಂದಿ ಅಭಿಮಾನಿಗಳಿಂದ ಮಾತ್ರ ದೇಣಿಗೆ ಸಂಗ್ರಹ ಮಾಡಲಾಗುವುದು. ಡಾ.ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ ನಿರ್ಮಾಣವನ್ನು ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಈಗ ಜಾಗದ ಕುರಿತು ಯಾವುದೇ ಮಾಹಿತಿ ನೀಡಲಾಗದು. ಯಾಕೆಂದರೆ ಆ ಜಾಗದ ಮಾಹಿತಿ ಸಿಕ್ಕ ತಕ್ಷಣ ವಿಷ್ಣುವರ್ಧನ್ ಅವರ ವಿಷಯದಲ್ಲಿ ವಿವಾದಗಳು ಇದ್ದೇ ಇರುತ್ತವೆ ಎಂಬ ಕಾರಣಕ್ಕೆ ಮುಂಜಾಗ್ರತೆ ಕ್ರಮವಾಗಿ ಆ ಜಾಗವನ್ನು ಈಗ ಬಹಿರಂಗಪಡಿಸಲಾಗುವುದಿಲ್ಲ. ಇದರ ಖರ್ಚು ವೆಚ್ಚಗಳು ಹಾಗೂ ಹಣಕಾಸು ನಿರ್ವಹಣೆ ಮುಂತಾದ ವಿಷಯಗಳು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನಡೆಯಲಿವೆ’ ಎಂದು ಹೇಳಿದರು.
