Weekend Marriage: ಜನರು ತಮ್ಮ ಲೈಫ್ ಬ್ಯಾಲೆನ್ಸ್ ಮಾಡೋದಕ್ಕೆ ಹೊಸ ಹೊಸ ವಿಧಾನ ಅನುಸರಿಸ್ತಾ ಇದ್ದಾರೆ. ಇದ್ರಲ್ಲಿ ವೀಕೆಂಡ್ ಮ್ಯಾರೇಜ್ ಕೂಡ ಒಂದು. ಜಪಾನ್ ನಲ್ಲಿ ಹುಟ್ಟಿಕೊಂಡು ಇಡೀ ಪ್ರಪಂಚಕ್ಕೆ ಇಷ್ಟವಾಗಿರುವ ಈ ವೀಕೆಂಡ್ ಮ್ಯಾರೇಜ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಿಂದಿನಂತೆ ಮದುವೆಯಾದ್ಮೇಲೆ ದಂಪತಿ (couple) ಒಟ್ಟಿಗೆ ಜೀವನ ನಡೆಸಲು ಈಗ ಸಾಧ್ಯವಾಗ್ತಿಲ್ಲ. ದುಬಾರಿ ಲೈಫ್ ನಲ್ಲಿ ಬೇರೆ ಬೇರೆ ಊರುಗಳಲ್ಲಿ ಕೆಲ್ಸ ಮಾಡೋದು ಅನಿವಾರ್ಯವಾಗಿದೆ. ಒಂದೇ ಸೂರಿನಡಿ ದಂಪತಿ ಇದ್ರೂ ಕೆಲ್ಸದ ಒತ್ತಡದಿಂದಾಗಿ ಪರಸ್ಪರ ಸಿಗೋದು ಅಪರೂಪ ಎನ್ನುವಂತಾಗಿದೆ. ಇಡೀ ದಿನ ಕೆಲ್ಸ ಮಾಡಿ ದಣಿಯುವ ಜನರು ರಾತ್ರಿಯಾಗ್ತಿದ್ದಂತೆ ಹಾಸಿಗೆ ಸೇರ್ತಾರೆ. ಇನ್ನು ಕೆಲವರು ರಾತ್ರಿ ಡ್ಯೂಟಿಗೆ ಹೋಗೋದ್ರಿಂದ ಸಂಗಾತಿ ಭೇಟಿಯಾಗೋದೇ ಕಷ್ಟ. ವೃತ್ತಿ ಜೊತೆ ದಾಂಪತ್ಯ ಜೀವನವನ್ನು ಸರಿದೂಗಿಸಿಕೊಳ್ಳಲು ಈಗ ಯುವ ಪೀಳಿಗೆ ಹೊಸ ಟ್ರೆಂಡ್ ಶುರು ಮಾಡಿದೆ. ಅದೇ ವೀಕೆಂಡ್ ಮ್ಯಾರೇಜ್.
ವೀಕೆಂಡ್ ಮ್ಯಾರೇಜ್ (weekend marriage) ಅಂದ್ರೆ ಏನು? : ವಾರಾಂತ್ಯದಲ್ಲಿ ಮದುವೆ ಆಗೋದು ವೀಕೆಂಡ್ ಮ್ಯಾರೇಜ್ ಅಲ್ಲ. ವಾರಾಂತ್ಯದಲ್ಲಿ ಸಂಗಾತಿ ಜೊತೆ ಸಮಯ ಕಳೆಯೋದು ವೀಕೆಂಡ್ ಮ್ಯಾರೇಜ್. ಯಸ್. ವಾರ ಪೂರ್ತಿ ಕೆಲ್ಸ ಮಾಡುವ ದಂಪತಿ, ವಾರಾಂತ್ಯದಲ್ಲಿ ಒಟ್ಟಿಗೆ ಸಮಯ ಕಳೆಯಲು ಪ್ಲಾನ್ ಮಾಡ್ತಿದ್ದಾರೆ. ವಾರದ ಎರಡು ದಿನ ಸಂಗಾತಿ ಒಟ್ಟಿಗೆ ಇರ್ತಾರೆ. ಯಾವುದೇ ಫೋನ್ ಇಲ್ಲ, ಲ್ಯಾಪ್ ಟಾಪ್ ಇಲ್ಲ, ಕೆಲ್ಸ ಇಲ್ಲ. ಆದಷ್ಟು ಸಮಯ ಒಟ್ಟಿಗೆ ಕುಳಿತು, ತಮ್ಮಿಷ್ಟದ ಕೆಲ್ಸವನ್ನು ಮಾಡ್ತಾ ದಾಂಪತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಸ್ತಿದ್ದಾರೆ. ಇದನ್ನೇ ವೀಕೆಂಡ್ ಮ್ಯಾರೇಜ್ ಅಂತ ಕರೆಯಲಾಗ್ತಿದೆ.
ಗಂಡ- ಹೆಂಡ್ತಿ ಇಬ್ಬರೂ ಈಗ ಕೆಲ್ಸಕ್ಕೆ ಹೋಗ್ತಿದ್ದಾರೆ. ದಾಂಪತ್ಯದ ನೆಪದಲ್ಲಿ ವೃತ್ತಿ ಬದುಕು ಹಾಳು ಮಾಡ್ಕೊಳ್ಳೋದು ಮಹಿಳೆಗೆ ಇಷ್ಟವಿಲ್ಲ. ಅಂಥವರು, ತಮ್ಮ ಪರ್ಸನಲ್ ಲೈಫ್ ಹಾಗೂ ಪ್ರೊಫೇಷನಲ್ ಲೈಫ್ ಬ್ಯಾಲೆನ್ಸ್ ಮಾಡಲು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ವೀಕೆಂಡ್ ಮ್ಯಾರೇಜ್ ಮೂಲಕ ತಮ್ಮ ಸಂಬಂಧವನ್ನು ಬಲಪಡಿಸಲು ಬಯಸ್ತಿದ್ದಾರೆ. ಈ ಮ್ಯಾರೇಜ್ ಅನೇಕರಿಗೆ ಪ್ರಯೋಜನಕಾರಿಯಾಗಿದೆ.
ವೀಕೆಂಡ್ ಮ್ಯಾರೇಜ್ ರೂಲ್ಸ್ ಏನು? : ವಾರದ ಐದು ದಿನ ದಂಪತಿ ತಮ್ಮ ವೃತ್ತಿ ಮೇಲೆ ಗಮನವನ್ನು ಕೇಂದ್ರೀಕರಿಸ್ತಾರೆ. ಸ್ನೇಹಿತರ ಜೊತೆ ಸಮಯ ಕಳೀತಾರೆ. ತಮ್ಮ ಹವ್ಯಾಸದಲ್ಲಿ ಬ್ಯುಸಿಯಾಗ್ತಾರೆ. ವಾರದ ಐದು ದಿನ ಅವರು ಏನು ಮಾಡಿದ್ರೂ ಸಂಗಾತಿ ಅವರನ್ನು ಪ್ರಶ್ನಿಸೋದಿಲ್ಲ. ವಾರಾಂತ್ಯದಲ್ಲಿ ಇಬ್ಬರು ಭೇಟಿಯಾಗ್ತಾರೆ. ತಮ್ಮ ಸಂಬಂಧ ಬಲಪಡಿಸಲು ಸಾಕಷ್ಟು ಸಮಯ ನೀಡ್ತಾರೆ.
ವೀಕೆಂಡ್ ಮ್ಯಾರೇಜ್ ಪ್ಲಾನ್ ಇದ್ರೆ ಏನು ಮಾಡ್ಬೇಕು? : ಮೊದಲು ಮಾಡ್ಬೇಕಾದ ಕೆಲ್ಸ ವಾರದಲ್ಲಿ ಎರಡು ದಿನ ಬಿಡುವು ಪಡೆಯೋದು. ಶುಕ್ರವಾರ ಸಂಜೆ ಇಬ್ಬರು ಕುಳಿತು ಮರುದಿನದ ಪ್ಲಾನ್ ಸಿದ್ಧಪಡಿಸಿ. ಸಿನಿಮಾ ಅಥವಾ ಪ್ರವಾಸದ ಪ್ಲಾನ್ ಮಾಡ್ಬಹುದು. ಒಳ್ಳೆ ರೆಸ್ಟೋರೆಂಟ್ ನಲ್ಲಿ ಡಿನ್ನರ್ ಪ್ಲಾನ್ ಮಾಡ್ಬಹುದು. ಇಬ್ಬರು ಮನೆಯಲ್ಲೇ ಒಟ್ಟಿಗೆ ಅಡುಗೆ ಮಾಡ್ಬಹುದು. ಒಂದಿಷ್ಟು ಹರಟೆ, ಆಟ, ವಾಕಿಂಗ್ ಅಂತ ಇಬ್ಬರು ಒಟ್ಟಿಗಿರಬೇಕು. ಮೊಬೈಲ್, ಲ್ಯಾಪ್ ಟಾಪ್, ಆಫೀಸ್ ಕೆಲ್ಸ, ಸ್ನೇಹಿತರು ಎಲ್ಲವನ್ನು ಈ ದಿನ ದೂರ ಇಡಿ. ನಿಮ್ಮ ಹಳೆ ಫೋಟೋ, ಲೆಟರ್, ಮೆಸ್ಸೇಜ್ ನೋಡಿ ಅದನ್ನು ನೆನಪು ಮಾಡ್ಕೊಳ್ಬಹುದು, ಅದ್ರ ಬಗ್ಗೆ ಮಾತನಾಡ್ಬಹುದು. ಯಾವುದೇ ಕಾರಣಕ್ಕೂ ಸೋಶಿಯಲ್ ಮೀಡಿಯಾ ಸುದ್ದಿಗೆ ಹೋಗ್ಬೇಡಿ.
ಈ ಪ್ರವೃತ್ತಿ ಮೊದಲು ಜಪಾನ್ ನಲ್ಲಿ ಶುರುವಾಯ್ತು. ಈಗ ಎಲ್ಲ ಕಡೆ ಹರಡಿದೆ. ಇದ್ರಲ್ಲಿ ಲಾಭದ ಜೊತೆ ನಷ್ಟವೂ ಇದೆ. ಸಂಗಾತಿ ಮಧ್ಯೆ ಭಾವನಾತ್ಮಕ ಸಂಬಂಧ ಬೆಳೆಯಲು ಕಡಿಮೆ ಸಮಯ ಸಿಗುತ್ತೆ. ಇಬ್ಬರೂ ಮಕ್ಕಳನ್ನು ಬೆಳೆಸಲು ಸಾಧ್ಯವಾಗೋದಿಲ್ಲ. ಇಲ್ಲಿ ನಂಬಿಕೆ ಕೊರತೆ ಕಾಡುವ ಸಾಧ್ಯತೆಯೂ ಇದೆ. ತಿಳುವಳಿಕೆ ಹೊಂದಿರುವ ಮತ್ತು ಉತ್ತಮ ಕಮ್ಯೂನಿಕೇಷನ್ ಇದ್ರೆ ಇದು ಸಮಸ್ಯೆ ಎನ್ನಿಸುವುದಿಲ್ಲ.
