ಕೋರ್ಟ್ ಡಿವೋರ್ಸ್, ಜೀವನಾಂಶಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ಮಹಿಳೆ ಮಾಡಿದ ಯಾವುದೇ ಆರೋಪಕ್ಕೆ ಸಾಕ್ಷ್ಯವಿಲ್ಲ ಎಂದು ಕೋರ್ಟ್ ಹೇಳಿದೆ. 

ಪತಿ ಮೇಲೆ ಗಂಭೀರ ಆರೋಪ ಮಾಡಿ, ಜೀವನಾಂಶ (Alimony)ಕ್ಕೆ ಬೇಡಿಕೆ ಇಟ್ಟಿದ್ದ ಮಹಿಳೆಯೊಬ್ಬಳ ಅರ್ಜಿಯನ್ನು ಹೈಕೋರ್ಟ್ (High Court) ತಿರಸ್ಕರಿಸಿದೆ. ಪತಿ ನಪುಂಸಕ ಎಂಬ ಕಾರಣ ನೀಡಿ, ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಅಷ್ಟೇ ಅಲ್ಲ 90 ಲಕ್ಷ ರೂಪಾಯಿ ಜೀವನಾಂಶ ಕೋರಿ, ತೆಲಂಗಾಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು. ಹೈಕೋರ್ಟ್ ಮಹಿಳೆಯ ಅರ್ಜಿ ವಜಾಗೊಳಿಸಿದೆ. ಪತಿ ನಪುಂಸಕ ಎಂಬುದಕ್ಕಾಗ್ಲಿ ಇಲ್ಲ ಮದುವೆಯ ಹೆಸರಿನಲ್ಲಿ ಆತ ಮೋಸ ಮಾಡಿದ್ದಾನೆ ಎಂಬುದಕ್ಕಾಗ್ಲಿ ಯಾವುದೇ ಸಾಕ್ಷ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಬಾರ್ ಮತ್ತು ಬೆಂಚ್ ವರದಿಯ ಪ್ರಕಾರ, ಮಹಿಳೆ ತನ್ನ ಪತಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ ಬಳಲುತ್ತಿದ್ದಾರೆ. ಅವರ ಜೊತೆ ಯಾವುದೇ ಶಾರೀರಿಕ ಸಂಬಂದ ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದಳು. 90 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ನೀಡುವಂತೆ ಮನವಿ ಸಲ್ಲಿಸಿದ್ದಳು.

ಅರ್ಜಿದಾರಳು ತನ್ನ ಪತಿ ದುರ್ಬಲ, ಶಾರೀರಿಕ ಕ್ರಿಯೆ ನಡೆಸಲು ಅಸಮರ್ಥ, ನನಗೆ ಹಿಂಸೆ ನೀಡುತ್ತಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಅಲ್ಲದೆ 90 ಲಕ್ಷ ಶಾಶ್ವತ ಜೀವನಾಂಶಕ್ಕೆ ಅರ್ಹಳು ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಮೌಸುಮಿ ಭಟ್ಟಾಚಾರ್ಯ ಮತ್ತು ಬಿ.ಆರ್. ಮಧುಸೂದನ್ ರಾವ್ ಪೀಠ ಮಹಿಳೆ ಅರ್ಜಿಯನ್ನು ವಜಾಗೊಳಿಸಿದೆ.

ದಂಪತಿ ಡಿಸೆಂಬರ್ 2013 ರಲ್ಲಿ ಮದುವೆ (Marriage) ಆಗಿದ್ರು. ಮದುವೆ ಎಂದಿಗೂ ಪೂರ್ಣಗೊಳ್ಳಲಿಲ್ಲ. ಎರಡು ಬಾರಿ ಹನಿಮೂನ್ ಗೆ ಹೋಗಿದ್ದಾಗಿ ಪತ್ನಿ ತನ್ನ ಅರ್ಜಿಯಲ್ಲಿ ಹೇಳಿದ್ದಳು. 2013 ರಲ್ಲಿ ಕೇರಳಕ್ಕೆ ಮತ್ತು 2014 ರಲ್ಲಿ ಕಾಶ್ಮೀರಕ್ಕೆ ಹನಿಮೂನ್ ಗೆ ಹೋಗಿದ್ವಿ. ಆದರೆ ಅಲ್ಲೂ ಶಾರೀರಿಕ ಸಂಬಂಧ ಬೆಳೆಸಲಿಲ್ಲ ಎಂದು ಮಹಿಳೆ ಹೇಳಿದ್ದಾಳೆ.

ಅಷ್ಟೇ ಅಲ್ಲ ಪತಿ ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿದ್ದಾನೆ, ಈ ವಿಷ್ಯವನ್ನು ಮದುವೆ ಸಮಯದಲ್ಲಿ ನಮ್ಮಿಂದ ಮರೆಮಾಚಲಾಗಿತ್ತು.ಇದರಿಂದ ಶಾರೀರಿಕ ಸಂಬಂಧ ಬೆಳೆಸಲು ಸಾಧ್ಯವಾಗ್ತಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಹಿಂದೂ ವಿವಾಹ ಕಾಯ್ದೆ, 1955 ರ ಅಡಿಯಲ್ಲಿಇದನ್ನು ಕ್ರೌರ್ಯವೆಂದು ಪರಿಗಣಿಸಬೇಕೆಂದು ಅವಳು ಅರ್ಜಿಯಲ್ಲಿ ಹೇಳಿದ್ದಳು. ಅಷ್ಟೇ ಅಲ್ಲ ಮಹಿಳೆ 2017 ರ ವೈದ್ಯಕೀಯ ವರದಿಯನ್ನು ಸಹ ಉಲ್ಲೇಖಿಸಿದ್ದಳು. ಪತಿ ವೈವಾಹಿಕ ಜೀವನಕ್ಕೆ ಅನರ್ಹ ಮತ್ತು ಮಕ್ಕಳನ್ನು ಹೆರಲು ಅಸಮರ್ಥ ಎಂದಿದ್ದಳು.

ಆದ್ರೆ ಪತಿ, ಅವಳ ಎಲ್ಲ ಆರೋಪವನ್ನು ತಿರಸ್ಕರಿಸಿದ್ದಾನೆ. ಮದುವೆ ಪೂರ್ಣಗೊಳ್ಳಲಿಲ್ಲ ಎನ್ನುವುದು ಸುಳ್ಳು. ಸ್ವಲ್ಪ ಸಮಯದವರೆಗೆ ನಿಮಿರುವಿಕೆಯ ಅಪಸಾಮಾನ್ಯತೆಯಿಂದ ಬಳಲುತ್ತಿದ್ದೆ. ಆದ್ರೆ ಚಿಕಿತ್ಸೆ ನಂತ್ರ ಎಲ್ಲವು ಸರಿಯಾಗಿತ್ತು. ಹನಿಮೂನ್ ವೇಳೆ ಅನೇಕ ಬಾರಿ ಪತ್ನಿ ಜೊತೆ ಸಂಬಂಧ ಹೊಂದಿದ್ದೆ ಎಂದು ಕೋರ್ಟ್ ಮುಂದೆ ಹೇಳಿದ್ದಾನೆ. ಮದುವೆಯಾದ ಐದು ವರ್ಷಗಳ ನಂತ್ರ, ವೈದ್ಯಕೀಯ ವರದಿ ಮತ್ತು ಅವರ ಸ್ವಂತ ನಡವಳಿಕೆಯು ಅದನ್ನು ಸಾಬೀತುಪಡಿಸದಿದ್ದಾಗ, ಪತಿ ದುರ್ಬಲ ಎಂದು ಹೆಂಡತಿ ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಯಾವುದೇ ಕಾರಣಕ್ಕೂ ಆತ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದಿದೆ.