ಬೆಂಗಳೂರಿನಲ್ಲಿ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗುವ ವಿಚಾರದಲ್ಲಿ ಇಬ್ಬರು ಯುವಕರ ನಡುವೆ ಜಗಳ ನಡೆದು ಒಬ್ಬ ಯುವಕನ ಕೊಲೆಯಾಗಿದೆ. ಆರೋಪಿ ಮತ್ತು ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಜಯನಗರದಲ್ಲಿ ನಡೆದಿದ್ದು, ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಲಾಗಿದೆ.

ಬೆಂಗಳೂರು (ಸೆ.11): ಪ್ರೀತಿಸೋ ವಿಚಾರದಲ್ಲಿ ಯುವಕರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಇಬ್ಬರು ಯುವಕರ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ಯುವಕ ಬರ್ಬರವಾಗಿ ಕೊಲೆಯಾಗಿದ್ದು, ಪೊಲೀಸರು ಆರೋಪಿ ಹಾಗೂ ಯುವತಿಯನ್ನು ಬಂಧಿಸಿದ್ದಾರೆ.

ಕೊಲೆಯಾದ ಯುವಕನನ್ನು ಕಿರಣ್ (19) ಎಂದು ಗುರುತಿಸಲಾಗಿದೆ. ಈತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪಿ ಜೀವನ್ ಹಾಗೂ ಯುವತಿ ದಿವ್ಯಾ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಜಯನಗರದ ನಕ್ಕಲು ಬಂಡೆ ಏರಿಯಾದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:

ಮೃತ ಕಿರಣ್ 'ಬ್ಲಿಂಕ್ ಇಟ್' ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಆರೋಪಿ ಜೀವನ್ ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ. ಯುವತಿ ದಿವ್ಯಾ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಮೂವರು ಒಂದೇ ವೃತ್ತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಪರಿಚಯವಿತ್ತು. ದಿವ್ಯಾ ಈ ಹಿಂದೆ ಜೀವನ್‌ನನ್ನು ಪ್ರೀತಿಸುತ್ತಿದ್ದಳು. ಆದರೆ, ಕೆಲವು ಕಾರಣಗಳಿಂದಾಗಿ ಇವರಿಬ್ಬರ ನಡುವೆ ಪ್ರೇಮ ಸಂಬಂಧ ಕಳೆದ 7 ತಿಂಗಳ ಹಿಂದೆ ಮುರಿದುಬಿದ್ದಿತ್ತು.

ದೇವರ ತೆಂಗಿನಕಾಯಿಗಾಗಿ ತಮ್ಮನ‌ ಹೆಂಡತಿಯನ್ನೇ ಬರ್ಬರವಾಗಿ ಕೊ*ಲೆ ಮಾಡಿದ ಅಣ್ಣ!

ಇನ್ನು ಬ್ರೇಕ್ ಅಪ್ ಆದ ಬಳಿಕ ದಿವ್ಯಾ, ಕಿರಣ್ ಜೊತೆ ಪ್ರೀತಿಯಲ್ಲಿ ಬಿದ್ದಳು. ಇದನ್ನು ನೋಡಿದ ಜೀವನ್‌ಗೆ ಇವರಿಬ್ಬರ ಪ್ರೀತಿಯನ್ನು ಸಹಿಸಲಾಗಲಿಲ್ಲ. ಜೊತೆಗೆ, ತನ್ನ ಮಾಜಿ ಪ್ರೇಯಸಿ ದಿವ್ಯಾ ಪ್ರತಿದಿನ ಹೊಸ ಲವ್ವರ್ ಕಿರಣ್ ಜೊತೆಗಿನ ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ (ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂನಲ್ಲಿ) ಆಗಿ ಹಾಕುತ್ತಿದ್ದಳು. ಕಳೆದ ಮಂಗಳವಾರ ರಾತ್ರಿ ಕಿರಣ್ ಜೊತೆಗಿನ ಸೆಲ್ಫಿ ಫೋಟೋ ಹಾಕಿ 'ಶೀಘ್ರದಲ್ಲೇ ಮದುವೆ' ಎಂದು ಪೋಸ್ಟ್ ಮಾಡಿದ್ದಳು.

ಗಿಫ್ಟ್ ವಾಪಸ್ ಕೊಡುವಂತೆ ಕೇಳಿದ ಮಾಜಿ ಪ್ರೇಮಿ:

ಇದನ್ನು ನೋಡಿದ ಮಾಜಿ ಲವ್ವರ್ ಜೀವನ್ ತೀವ್ರ ಕೋಪಗೊಂಡಿದ್ದನು. ತಕ್ಷಣ ದಿವ್ಯಾಳಿಗೆ ಕರೆ ಮಾಡಿ, ತಾನು ಪ್ರೀತಿ ಮಾಡುವಾಗ ದಿವ್ಯಾಳಿಗೆ ಕೊಟ್ಟಿದ್ದ ಎಲ್ಲ ಉಡುಗೊರೆಗಳನ್ನು ವಾಪಸ್ ನೀಡುವಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದನು. ಈ ವಿಚಾರವನ್ನು ತನ್ನ ಹೊಸ ಪ್ರೇಮಿ ಕಿರಣ್‌ಗೆ ತಿಳಿಸಿದ್ದ ದಿವ್ಯಾ, ಮಾಜಿ ಪ್ರೇಮಿ ಜೀವನ್ ಕೊಟ್ಟಿದ್ದ ಉಡುಗೊರೆಗಳನ್ನು ವಾಪಸ್ ನೀಡಲು ಮುಂದಾಗಿದ್ದಳು. ಈ ವೇಳೆ ದಿವ್ಯಾ ತನ್ನ ಹೊಸ ಪ್ರಿಯಕರ ಕಿರಣ್ ಜೊತೆಗೆ ಜೀವನ್‌ ಭೇಟಿ ಮಾಡಲು ಬಂದಿದ್ದಳು.

ಇದೇ ವೇಳೆ, ಮೂವರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತು. ಕೋಪದಿಂದ ಕುದಿಯುತ್ತಿದ್ದ ಜೀವನ್, ಮೊದಲೇ ತಂದಿದ್ದ ಚಾಕುವನ್ನು ತೆಗೆದು ಕಿರಣ್ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾದ ಕಾರಣ ಕಿರಣ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ತಿಲಕ್ ನಗರ ಪೊಲೀಸರು, ಆರೋಪಿ ಜೀವನ್ ಹಾಗೂ ಘಟನೆಯಲ್ಲಿ ಭಾಗಿಯಾಗಿದ್ದ ಯುವತಿ ದಿವ್ಯಾಳನ್ನು ಬಂಧಿಸಿದ್ದಾರೆ. ಈ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.